ಸೆ.24: ಲ್ಯಾಂಪ್ಸ್ ಸೊಸೈಟಿ ನೆಕ್ಕಿಲಾಡಿ ಶಾಖೆಯ ನೂತನ ಮಾರಾಟ ಮಳಿಗೆ,ಗೋದಾಮು ಕಟ್ಟಡ ಹಾಗೂ ಬ್ಯಾಂಕಿಂಗ್ ವಿಸ್ತೃತ ವಿಭಾಗದ ಉದ್ಘಾಟನೆ

0

ಪುತ್ತೂರು: ಸಹಕಾರಿ ಕ್ಷೇತ್ರದ ಮುಖಾಂತರ ಪರಿಶಿಷ್ಟ ವರ್ಗಗಳ ಅಭಿವೃದ್ದಿಗೆ ಸಹಕಾರಿಯಾಗುತ್ತಾ, ಸುಧೀರ್ಘ 56 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿರುವ ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣ ವಿವಿಧೋದ್ದೇಶ(ಲ್ಯಾಂಪ್ಸ್) ಸಹಕಾರಿ ಸಂಘದ 34ನೇ ನೆಕ್ಕಿಲಾಡಿ ಶಾಖೆಯ ನೂತನ ಮಾರಾಟ ಮಳಿಗೆ, ಗೋದಾಮು ಕಟ್ಟಡ ಹಾಗೂ ಬ್ಯಾಂಕಿಂಗ್ ವಿಸ್ತೃತ ವಿಭಾಗದ ಉದ್ಘಾಟನೆಯು ಸೆ.24ರಂದು ನಡೆಯಲಿದೆ.

ಸಹಕಾರಿ ಸಂಘದ ಮೂಲಕ ಗಿರಿಜನ ರೈತರು ಕುಶಲ ಕರ್ಮಿಗಳು, ಕೂಲಿ ಕಾರ್ಮಿಕರು ಮುಂತಾದವರಿಗೆ ಜಮೀನಿನ ಮತ್ತು ಅವಶ್ಯಕ ಕಸುಬುಗಳಿಗೆ ಹೈನುಗಾರಿಕೆ ಕೋಳಿ ಸಾಕಾಣಿಗೆ ಮು೦ತಾದ ಉಪಕಸುಬುಗಳಿಗೆ ಸಾಲ ಒದಗಿಸುವುದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿನಿಲಯಗಳಿಗೆ ಆಹಾರ ಸರಬರಾಜು ಮಾಡುವುದು, ಸಂಘದ ಉದ್ದೇಶ ಈಡೇರಿಕೆಗಾಗಿ ಶಾಖೆಗಳನ್ನು ತೆರೆಯುವುದು,ಕೃಷಿಗೆ ಅವಶ್ಯಕವಾದ ಬಿತ್ತನೆ ಬೀಜಗೊಬ್ಬರ, ಕೃಷಿಮದ್ದು ಮತ್ತು ಕೃಷಿ ಸಲಕರಣೆಗಳನ್ನು ಪಡೆದು ಗಿರಿಜನ ಸದಸ್ಯರಿಗೆ ಕೂಲಿ ಹಾಗೂ ಉದ್ಯೋಗವನ್ನು ಒದಗಿಸುವುದು,ಅರಣ್ಯ ಇಲಾಖೆಯಿಂದ ಕಿರುಅರಣ್ಯ ಉತ್ಪನ್ನಗಳ ಸಂಗ್ರಹಣಾ ಗುತ್ತಿಗೆಯನ್ನು ಪಡೆದು ಪರಿಶಿಷ್ಟ ವರ್ಗದ ಸದಸ್ಯರಿಗೆ ಕೂಲಿ ಹಾಗೂ ಉದ್ಯೋಗವನ್ನು ಒದಗಿಸುವ ಉದ್ದೇಶವನ್ನು ಹೊಂದಿರುತ್ತದೆ.

ಸಂಘವು ಪುತ್ತೂರು ದರ್ಜೆಯಲ್ಲಿ ತನ್ನ ಸ್ವಂತ ಕಟ್ಟಡದಲ್ಲಿ ಕಚೇರಿಯನ್ನು, ಬ್ಯಾಂಕಿಂಗ್ ವ್ಯವಹಾರವನ್ನು, ಸದಸ್ಯರಿಗೆ ಬೇಕಾದ ದೈನಂದಿನ ಆವಶ್ಯಕ ಸಾಮಾಗ್ರಿಗಳ ವ್ಯವಹಾರವನ್ನು ಸರಕಾರದ ಪಡಿತರ ವಿತರಣೆಯನ್ನು ನಡೆಸಿಕೊಂಡು ಬರುತ್ತಿದೆ. ಅಲ್ಲದೆ ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಗ್ರಾಮಾಂತರ ಪ್ರದೇಶಗಳಲ್ಲಿ ಪರಿಶಿಷ್ಟ ಪಂಗಡದ ಅಧಿಕ ಮನೆಗಳಿರುವ ಪ್ರದೇಶಗಳಲ್ಲಿ ಶಾಖೆಗಳನ್ನು ತೆರೆದು ಅವರಿಗೆ ದೈನಂದಿನ ಆವಶ್ಯಕ ಸಾಮಾಗ್ರಿಗಳನ್ನು, ಕೃಷಿಗೆ ಸಂಬಂಧಿಸಿದ ಸಲಕರಣೆಗಳು, ಕೀಟ ನಾಶಕಗಳ ವ್ಯವಹಾರವನ್ನು, ಪಡಿತರ ವಿತರಣೆಯನ್ನು ನಡೆಸಿಕೊಂಡುಬರುತ್ತಿದೆ. ಸಂಘವು ತನ್ನ ೩ ಶಾಖೆಗಳಲ್ಲಿ ಸ್ವಂತ ಕಟ್ಟಡದಲ್ಲಿ ತನ್ನ ಸದಸ್ಯರಿಗೆ ಸೇವೆಯನ್ನು ನೀಡುತ್ತಿದೆ. ಅರಣ್ಯ ಇಲಾಖೆಯಿಂದ ಕಿರುಕಾಡುತ್ಪತ್ತಿ ಸಂಗ್ರಹಣಾ ಗುತ್ತಿಗೆಯನ್ನು ಪಡೆದು, ಸದಸ್ಯರ ಮುಖಾಂತರ ಕಿರುಕಾಡುತ್ಪತ್ತಿ ಸಂಗ್ರಹಿಸಲಾಗುತ್ತಿದೆ. ಸಂಘದಲ್ಲಿ ಮರಾಟಿ, ಮಲೆಕುಡಿಯ ಕೊರಗ ಜನಾಂಗದವರು ‘ಎ’ತರಗತಿ ಸದಸ್ಯರಾಗಲು ಅವಕಾಶವಿದ್ದು ಅವರಿಗೆ ಕೃಷಿ ಅಭಿವೃದ್ಧಿಗಾಗಿ ಸರಕಾರದ ಬಡ್ಡಿ ರಿಯಾಯಿತಿ ಯೋಜನೆಯಂತೆ ಶೇ ೩% ರ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುತ್ತಿದ್ದು, ಸದಸ್ಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಅಲ್ಲದೆ ಸದಸ್ಯರಿಗೆ ಗೃಹ ನಿರ್ಮಾಣಕ್ಕೆ ವಾಸ್ತವ್ಯದ ಮನೆ ದುರಸ್ಥಿ, ಹೈನುಗಾರಿಕೆಗೆ ಇತ್ಯಾದಿಗಳಿಗೆ ಸಾಲ ನೀಡುತ್ತಿದ್ದು, ಅವರ ಅರ್ಥಿಕ ಮಟ್ಟ ಸುಧಾರಿಸುವಲ್ಲಿ ಸಂಘವು ಪ್ರಮುಖ ಪಾತ್ರವಹಿಸುತ್ತಿದೆ.

ಎರಡು ಬಾರಿ ರಾಜ್ಯ ಪ್ರಶಸ್ತಿ…!
ಸಹಕಾರಿ ಕ್ಷೇತ್ರದ ಉತ್ತಮ ಸಾಧನೆಗಾಗಿ ಸಂಘವು ೨೦೦೫ರಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅತ್ಯುತ್ತಮ ಸಹಕಾರಿ ಸಂಘ ರಾಜ್ಯ ಪ್ರಶಸ್ತಿ ಹಾಗೂ ೨೦೦೭ರಲ್ಲಿ ಸಹಕಾರಿ ಚಳುವಳಿಯ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಸಹಕಾರಿ ಸಂಘ ರಾಜ್ಯ ಪ್ರಶಸ್ತಿಯನ್ನು ಅಂದಿನ ಸಹಕಾರಿ ಸಚಿವರಾಗಿದ್ದ ಜಿ.ಟಿ ದೇವೇ ಗೌಡರಿಂದ ಪುರಸ್ಕರಿಸಲ್ಪಟ್ಟಿದೆ. ೨೦೨೧-೨೨ರಲ್ಲಿ ಸಂಘವು ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಲ ಮೈಸೂರು ಇವರಿಂದ ಅತ್ಯುತ್ತಮ ಸಹಕಾರಿ ಸಂಘ ಹಾಗೂ ಪ್ರತಿಷ್ಠಿತ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ನೀಡಲಾಗುವ ಪ್ರಶಸ್ತಿಗೆ ಭಾಜನವಾಗಿದೆ.

ಆಡಳಿತ ಮಂಡಳಿ:
ಪ್ರಸ್ತುತ ಸಂಘದ ಅಧ್ಯಕ್ಷರಾಗಿ ಪೂವಪ್ಪ ನಾಯ್ಕ ಎಸ್. ಆಲಂಕಾರು, ಉಪಾಧ್ಯಕ್ಷರಾಗಿ ಧರ್ಣಪ್ಪ ನಾಯ್ಕ ಉಪ್ಪಿನಂಗಡಿ, ನಿರ್ದೇಶಕರಾಗಿ ಮಂಜುನಾಥ ಎನ್.ಎಸ್. ಉಪ್ಪಳಿಗೆ, ಪೂವಪ್ಪ ನಾಯ್ಕ ಕೆ. ಕುಂಞಕುಮೇರು, ಅಪ್ಪಯ್ಯ ನಾಯ್ಕ ತಳೆಂಜಿ, ಕೃಷ್ಣ ನಾಯ್ಕ ಪಿ.ಎಂ. ಕೃಷ್ಣನಗರ, ನೇತ್ರಾಕ್ಷ ಏಣಿತ್ತಡ್ಕ, ಶೇಷಪ್ಪ ನಾಯ್ಕ ದೊಡ್ಡಡ್ಕ, ಅಶ್ವಿನಿ ಬಿ.ಕೆ ಮುಂಡೂರು, ಭವ್ಯ ಚಿಕ್ಕಮುಡ್ನೂರು, ರೇವತಿ ನಿಡ್ಪಳ್ಳಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಗಣಪಣ್ಣ ಹೆಚ್ ಹಾಗೂ ಸಿಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ರೂ.೭೫ಲಕ್ಷದಲ್ಲಿ ಕಟ್ಟಡ;
ನಮ್ಮ ಸಂಘದ ನೆಕ್ಕಿಲಾಡಿ ಶಾಖೆಯ ನೂತನ ವಿಸ್ತೃತ ಕಟ್ಟಡವು ಸರಕಾರದ ಸುಮಾರು ರೂ.೭೫ ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ನೂತನವಾಗಿ ಮಾರಾಟ ಮಳಿಗೆ, ಬ್ಯಾಕಿಂಗ್‌ನ ವಿಸ್ತೃತ ವಿಭಾಗ, ಗೋದಾಮು, ಸಭಾಭವನವನ್ನು ನಿರ್ಮಿಸಲಾಗಿದೆ. ಈ ಭಾಗದ ಸದಸ್ಯರ ಬೇಡಿಕೆಯಂತೆ ಕಟ್ಟಡ ನಿರ್ಮಾಣ ಮಾಡಿದ್ದು, ಸರಕಾರದ ಸಂಸದರು, ಸಚಿವರಾದಿಯಾಗಿ ಲೋಕಾರ್ಪಣೆಗೊಳ್ಳಲಿದೆ. ಆ ಭಾಗದ ಸದಸ್ಯರು ಶಾಖೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಸರ್ವತೋಮುಖ ಅಭಿವೃದ್ಧಿ ಹೊಂದಬೇಕೆಂದು ಆಡಳಿತ ಮಂಡಳಿಯ ಆಶಯವಾಗಿದೆ ಎಂದು ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ಆಲಂಕಾರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here