ಆಲಂಕಾರು: ಜೆಸಿಐ ವತಿಯಿಂದ ಕಲಿಕಾಮೃತ 2022-23, ಬ್ಯಾಗ್ ವಿತರಣೆ

0

ಕಡಬ: ಜೆಸಿಐ ಆಲಂಕಾರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ರೋಟರಿ ಶಿವಮೊಗ್ಗ ಪೂರ್ವ ಇವರ ಸಹಯೋಗದಲ್ಲಿ ಕಲಿಕಾ ನ್ಯೂನತೆ ಮತ್ತು ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶೈಕ್ಷಣಿಕ ಕಾರ್ಯಾಗಾರ ’ಕಲಿಕಾಮೃತ 2022-23’ ಮತ್ತು ಬ್ಯಾಗ್ ವಿತರಣೆ ಕಾರ್ಯಕ್ರಮ ಆಲಂಕಾರಿನ ದೀನದಯಾಳು ಸಭಾಭವನದಲ್ಲಿ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ರವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿಶೇಷ ಚೇತನ ವಿದ್ಯಾರ್ಥಿಗಳು ತಮ್ಮ ನ್ಯೂನತೆಯ ಬಗ್ಗೆ ಹೆಚ್ಚು ಆಲೋಚನೆ ಮಾಡದೇ, ಸಾಧನೆಯ ಕಡೆಗೆ ಗಮನ ಹರಿಸಬೇಕು. ಇವತ್ತು ಒಬ್ಬ ಅಂಗವಿಕಲನು ಸತತ ಅಧ್ಯಯನ, ಪರಿಶ್ರಮದ ಮೂಲಕ ಸಮಾಜದಲ್ಲಿ ಉನ್ನತ ಹುದ್ದೆಗಳಾದ ಐಎಎಸ್ ಮತ್ತು ಇತ್ಯಾದಿ ಕಡೆಗಳಲ್ಲಿ ಸೇವೆಯನ್ನು ಸಲ್ಲಿಸುವ ಉದಾಹರಣೆಗಳು ನಮ್ಮ ಮುಂದಿದೆ. ಹಾಗಾಗಿ ಪೋಷಕರು, ಸಮಸ್ಯೆಯ ಬಗ್ಗೆ ಗಮನ ಕೊಡದೇ, ಇಂತಹ ಮಕ್ಕಳನ್ನು ಇನ್ನಷ್ಟು ಅಭಿವೃದ್ಧಿಮಾಡುವ ಸಂಕಲ್ಪ ಮಾಡಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ರೋಟರಿ ಶಿವಮೊಗ್ಗ ಪೂರ್ವ ಇದರ ಅಧ್ಯಕ್ಷೆ ಸುಮತಿ ಜಿ.ಅವರು ಮಾತನಾಡಿ, ಜೆಸಿಐ ಮತ್ತು ರೋಟರಿ ಸ್ವಯಂ ಸೇವಾ ಸಂಘಟನೆಗಳು. ಎರಡರ ಉದ್ದೇಶವೂ ಒಂದರ್ಥದಲ್ಲಿ ಒಂದೇ ಆಗಿದೆ. ನಾವು ಕಲಿಕೆಯ ಕಂಪನ್ನು ಹರಡಿಸಲು ಶಿಕ್ಷಣ ಇಲಾಖೆ ಮತ್ತು ಇತರೆ ಇಲಾಖೆಗಳೊಂದಿಗೆ ಸೇರಿಕೊಂಡು ಯೋಜನೆಗಳನ್ನು ತಯಾರಿಸಿ ಅನುಷ್ಠಾನಕ್ಕೆ ತರುತ್ತೇವೆ. ಅದರ ಭಾಗವಾಗಿಯೇ ಇಂದು ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಾವು ಈ ಬ್ಯಾಗ್ ವಿತರಣೆಯ ಕಾರ್ಯವನ್ನು ಮಾಡುವುದರ ಮೂಲಕ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶಿಕ್ಷಣಕ್ಕೆ ಸಣ್ಣ ಮಟ್ಟಿನ ಸಹಾಯವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ಇನ್ನೋರ್ವ ಅತಿಥಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಧರ್ಮಪಾಲ್ ರಾವ್ ಕಜೆಯವರು ಮಾತನಾಡಿ, ಇಂದು ನಾವು ವಿಶೇಷ ಅಗತ್ಯತೆಯುಳ್ಳ ಮಕ್ಕಳ ಆರೋಗ್ಯ, ಆರೈಕೆ, ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಈ ಕಾರ್ಯಗಾರದಲ್ಲಿ ತಿಳಿದುಕೊಂಡಿದ್ದೇವೆ. ನಾವು ಏನನ್ನೆಲ್ಲಾ ತಿಳಿದುಕೊಡಿದ್ದೇವೆಯೋ, ಅದನ್ನು ಅನುಷ್ಠಾನಕ್ಕೆ ತರಬೇಕು. ಆಗ ಇಂತಹ ವಿಶೇಷ ಚೇತನರು ಇನ್ನಷ್ಟು ಸಾಧನೆಯನ್ನು ಮಾಡುತ್ತಾರೆ. ಭಗವಂತ ಎಲ್ಲರನ್ನೂ ಒಂದು ಅರ್ಥಪೂರ್ಣವಾದ ಕಾರ್ಯಗಳನ್ನು ನಿರ್ವಹಿಸಲೆಂದೇ ಈ ಭೂಮಿಗೆ ಕಳುಹಿಸಿಕೊಟ್ಟಿದ್ದಾನೆ. ಹಾಗಾಗಿ ಯಾರೂ ಕುಗ್ಗದೇ ಸಾಧಿಸಿ ಸಮಾಜಕ್ಕೆ ತೋರಿಸಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೆಸಿಐ ಆಲಂಕಾರು ಇದರ ಅಧ್ಯಕ್ಷ ಅಜಿತ್ ಕುಮಾರ್‌ರೈಯವರು ಮಾತನಾಡಿ, ಸಮಾಜದಲ್ಲಿ ಪ್ರತಿಯೋರ್ವ ವ್ಯಕ್ತಿಯೂ ಸಮಾನವಾದ ಮಹತ್ವವನ್ನು ಪಡೆದಿರುತ್ತಾರೆ. ಆದರೆ ಅಂತರ ಎಲ್ಲಿ ಇದೆ ಅಂದರೆ ನಮ್ಮ ಸಾಮರ್ಥ್ಯವನ್ನು ಹುಡುಕಿ, ನ್ಯೂನತೆಗಳನ್ನು ಮೆಟ್ಟಿ ನಿಲ್ಲುವುದರಲ್ಲಿದೆ. ಈ ರೀತಿ ಸಮಸ್ಯೆಗಳನ್ನು ಸರಿಸಿ, ಅವಕಾಶಗಳ ಸದ್ಬಳಕೆ ಮಾಡಿದಾಗ ಸಮಾಜದ ವಿಕಾಸವಾಗುತ್ತದೆ. ಇಂಥಹ ಮಹತ್ತರವಾದ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಜೆಸಿಐ. ಅದಲ್ಲದೆ ಇಂಥಹ ಕಾರ್ಯಕ್ರಮವನ್ನು ರೋಟರಿ ಮತ್ತು ವಿವಿಧ ಇಲಾಖೆಗಳ, ಸಂಘ- ಸಂಸ್ಥೆಗಳ ಅಪೂರ್ವ ಸಹಕಾರದಲ್ಲಿ ನಡೆಸಿ, ಇದರ ಫಲವನ್ನು ಮುಂಬರುವ ದಿನಗಳಲ್ಲಿ ಕಾಣುವಂತಾಗಲಿ ಎಂದು ಹೇಳಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಹಿರಿಯ ವೈದ್ಯರಾದ ಡಾ.ಗೋವಿಂದ ಪ್ರಸಾದ್ ಕಜೆಯವರು ಕಾರ್ಯಾಗಾರವನ್ನು ನಡೆಸಿ, ವಿಶೇಷ ಚೇತನ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳು ಸಾಂಕೇತಿಕವಾಗಿ ಬ್ಯಾಗ್ ವಿತರಿಸಿದರು. ನಂತರ ಎಲ್ಲಾ ಮಕ್ಕಳಿಗು ಬ್ಯಾಗ್ ವಿತರಣೆಯನ್ನು ಮಾಡಲಾಯಿತು. ಕ್ಷೇತ್ರ ಸಮನ್ವಯ ಕೇಂದ್ರದ ಅಧಿಕಾರಿಗಳಾದ ತನುಜಾ, ಸೀತಮ್ಮ ಹಾಗೂ ಪ್ರಶಾಂತ್‌ರವರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ವಿಶೇಷ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಸೇರಿಸಲಾಯಿತು. ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇದರ ಸಂಘಟನಾ ಕಾರ್ಯದರ್ಶಿ ನಾಗನ ಗೌಡ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಮಲ್‌ಕುಮಾರ್ ನೆಲ್ಯಾಡಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘ-ಕಡಬ ತಾಲೂಕ ಅಧ್ಯಕ್ಷ ರಾಮಕೃಷ್ಣ ಮಲ್ಲಾರ್, ಶಿವಮೊಗ್ಗ ರೋಟರಿಯ ಕಾರ್ಯದರ್ಶಿ ಕುಮಾರಸ್ವಾಮಿ, ರೋಟರಿ ಪುತ್ತೂರಿನ ಅಧ್ಯಕ್ಷ ಉಮಾನಾಥ್, ಕ್ಷೇತ್ರ ಸಮನ್ವಯಾಧಿಕಾರಿ, ಬಿ.ಆರ್.ಸಿ ಪುತ್ತೂರು ಇಲ್ಲಿನ ಸ್ಟೀಫನ್ ನವೀನ್ ವೇಗಸ್, ಶಿಕ್ಷಕರ ಸಂಘ ಪುತ್ತೂರು ಇದರ ನವೀನ್‌ರೈ, ಜೆಸಿಐ ಆಲಂಕಾರು ಇದರ ಸ್ಥಾಪಕಾಧ್ಯಕ್ಷ ಬಿ.ಎಲ್. ಜನಾರ್ದನ್, ಪೂರ್ವಾಧ್ಯಕ್ಷ ಪ್ರದೀಪ್‌ರೈ ಮನವಳಿಕೆ ಶುಭ ಹಾರೈಸಿದರು.

ಜೆಸಿಐ ಆಲಂಕಾರಿನ ಅಧ್ಯಕ್ಷ ಅಜಿತ್ ಕುಮಾರ್ ರೈ ಸ್ವಾಗತಿಸಿದರು. ಜೆಸಿಐ ಆಲಂಕಾರಿನ ಪೂರ್ವಾಧ್ಯಕ್ಷೆ ಹೇಮಲತಾ ಪ್ರದೀಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಸಿಐ ಆಲಂಕಾರಿನ ಕಾರ್ಯದರ್ಶಿ ಚೇತನ್ ಎಂ ವಂದಿಸಿದರು. ದುರ್ಗಾಂಬಾ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜೆಸಿಐ ಆಲಂಕಾರಿನ ಪೂರ್ವಾಧ್ಯಕ್ಷ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here