ಮಾನವೀಯ ಮೌಲ್ಯಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳೋಣ- ಡಾ. ಸಿ ಬಸವರಾಜು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ 32ನೇ ವರ್ಷದ ವಾರ್ಷಿಕೋತ್ಸವ

0

ಕಾನೂನು ಕಲಿತ ಯುವಕರು ನಮ್ಮ ದೇಶದ ದೊಡ್ಡ ಶಕ್ತಿ. ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಅವರ ಮೇಲಿದೆ. ಅವರು ಬುದ್ಧಿವಂತಿಕೆ, ಜ್ಞಾನ ಮತ್ತು ಧೈರ್ಯದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕಾನೂನು ಪದವೀಧರರಿಗೆ ಸಾಕಷ್ಟು ಉತ್ತಮ ಅವಕಾಶಗಳಿವೆ. ಅವರು ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಇಂದು ನ್ಯಾಯಾಂಗ ವ್ಯವಸ್ಥೆಯು ಸಾಕಷ್ಟು ವಿಸ್ತರಿಸಿಕೊಂಡಿದೆ. ಯಶಸ್ವಿ ವೃತ್ತಿಪರರಾಗಿ ಹೊರಹೊಮ್ಮಲು ಅಹರ್ನಿಷಿ ಪ್ರಯತ್ನಿಸಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸಿ. ಬಸವರಾಜು ರವರು ಹೇಳಿದರು. ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ 32ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡಿ, ವಕೀಲರಾದವರು ಭಾಷೆ ಮೇಲೆ ಪ್ರಭುತ್ವ ಸಾಧಿಸಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ. ಆ ಮೂಲಕ ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ ತಮ್ಮ ಜವಾಬ್ದಾರಿಯನ್ನು ಕಳೆದುಕೊಂಡಿರುವ ಈ ಸಂಧರ್ಭದಲ್ಲಿ ದೇಶದ ಜನರ ಭರವಸೆ ಇರುವುದು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ. ಇಂದು ನ್ಯಾಯಾಂಗ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸವನ್ನು ಕಾನೂನು ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯು ಮಾಡಬೇಕಾಗಿದೆ. ರಾಷ್ಟ್ರದ ಹಿತದ ವಿಚಾರದಲ್ಲಿ ಯಾವುದೇ ಜಾತಿ, ಧರ್ಮ, ಕುಟುಂಬ ನೋಡದೇ ಪ್ರತಿಯೊಬ್ಬರು ದೇಶವನ್ನು ರಕ್ಷಿಸುವ ಪಣವನ್ನು ತೋಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಇನ್ನೊರ್ವ ಅತಿಥಿಗಳಾಗಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾದೀಶರಾದ ಕೃಷ್ಣ ಭಟ್ ಮಾತನಾಡಿ, ಭಾರತದ ನೆಲದಲ್ಲಿ ವೇದಗಳ ಕಾಲದಿಂದಲೇ ಕಾನೂನು ಅತ್ಯಂತ ಶ್ರೇಷ್ಠವಾಗಿತ್ತು. ಹಿಂದೆ ಕಾನೂನುಗಳು ಯಾವುದನ್ನು ಮಾಡಬೇಕು ಎನ್ನುವುದನ್ನು ವಿವರಿಸಿದರೇ, ಇಂದಿನ ಕಾನೂನುಗಳು ಯಾವುದನ್ನೂ ಮಾಡಬಾರದು ಎಂಬುದನ್ನು ಎಚ್ಚರಿಸುತ್ತದೆ ಎಂದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಭವಿಷ್ಯಕ್ಕಾಗಿ ಉತ್ತಮವಾದ ಗುರಿಯೊಂದನ್ನು ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಬದುಕನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.

 

ವೇದಿಕೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾಗಿ ಆಯ್ಕೆಯಾಗಿರುವ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಿರಾಜುದ್ದೀನ್, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಿ ಸುರೇಂದ್ರ ಕಿಣಿ ಮಾತನಾಡಿ ಶುಭಹಾರೈಸಿದರು.

ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ವಿಜಯನಾರಾಯಣ ಕೆ ಎಂ, ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾಗಿರುವ ಡಾ. ಬಿ.ಕೆ ರವೀಂದ್ರ, ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ.ಪಿ., ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ರೇಖಾ ಉಪಸ್ಥಿತರಿದ್ದರು.

 

ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ.ಪಿ ಕಾಲೇಜಿನ ವಾರ್ಷಿಕ ವರದಿ ವಾಚನ ಮಾಡಿದರು. ವಿದ್ಯಾರ್ಥಿ ನಾಯಕ ನಿಶಾನ್ ವಿದ್ಯಾರ್ಥಿ ಪರಿಷತ್ ನ ಕಾರ್ಯಕ್ರಮಗಳ ವಾರ್ಷಿಕ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ನಾಯಕಿ ಸವಿನಯ ಸ್ವಾಗತಿಸಿ, ವಿದ್ಯಾರ್ಥಿ ನಾಯಕ ಸುಶೃತ್ ವಂದಿಸಿದರು. ವಿದ್ಯಾರ್ಥಿ ಗಣೇಶ್ ಬಾಳಿಗ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ:

ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸಿ. ಬಸವರಾಜು, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾದೀಶರಾದ ಕೃಷ್ಣ ಭಟ್, ಜಿಲ್ಲಾ ನ್ಯಾಯಾದೀಶರಾಗಿ ಆಯ್ಕೆಯಾದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಿರಾಜುದ್ದೀನ್ ರವರನ್ನು ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸನ್ಮಾನ ಮಾಡಿದರು.

 

LEAVE A REPLY

Please enter your comment!
Please enter your name here