ನಗರಸಭೆಯಿಂದ ಅನಧಿಕೃತ ಪ್ಲೆಕ್ಸ್, ಬ್ಯಾನರ್‌ಗೆ ಬೀಳಲಿದೆ ಕಡಿವಾಣ

0

  • ಇಂದಿನಿಂದ ತೆರವು ಕಾರ್ಯಾಚರಣೆ – ಪೌರಾಯುಕ್ತ ಮಧು ಎಸ್ ಮನೋಹರ್

ಪುತ್ತೂರು: ಮತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆ ನಿಗಧಿ ಪಡಿಸಿರುವ ಸ್ಥಳಗಳನ್ನು ಹೊರತುಪಡಿಸಿ, ಶುಲ್ಕವನ್ನು ಪಾವತಿಸದೇ ಅನಧಿಕೃತವಾಗಿ ಅಳವಡಿಸಲಾಗಿರುವ ಪ್ಲೆಕ್ಸ್, ಬ್ಯಾನರು, ಭಿತ್ತಿ ಪತ್ರಗಳು ನಾಮಫಲಕ, ದಾರಿ ಸೂಚನಾ ಫಲಕ, ಹಾಗೂ ಇನ್ನಿತರ ಜಾಹೀರಾತುಗಳನ್ನು ಸೆ.27ರಂದು ತೆರವು ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ತಿಳಿಸಿದ್ದಾರೆ.

ಅನಧಿಕೃತ ಭಿತ್ತಿಪತ್ರಗಳು, ಪ್ಲೆಕ್ಸ್ ತೆರವು ಮಾಡಲು ಈಗಾಗಲೇ ಹಲವಾರು ಪತ್ರಿಕಾ ಪ್ರಕಟಣೆ ನೀಡಿದ್ದು ನಗರಸಭೆಯಿಂದ ಎಲ್ಲಾ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವ ಕಾರಾಚರಣೆಯನ್ನೂ ಮಾಡಲಾಗುತ್ತಿದ್ದರೂ ಸಮಸ್ಯೆಗಳು ಪುನರಾವರ್ತನೆಯಾಗುವುದು ಕಂಡು ಬಂದಿದೆ. ನಗರಸಭೆಯಿಂದ ಅನುಮತಿ ಪಡಕೊಂಡ ಜಾಹೀರಾತುಗಳನ್ನು ಕಛೇರಿಯಿಂದ ತಿಳಿಸಿದ ಸೂಕ್ತ ಸ್ಥಳಗಳಲ್ಲಿ ಮಾತ್ರ ಅಳವಡಿಸಿ, ಅದರಲ್ಲಿ ಕಛೇರಿ ಅನುಮತಿ ಪತ್ರ ಸಂಖ್ಯೆಯನ್ನು ಕಡ್ಡಾಯವಾಗಿ ಜಾಹೀರಾತಿನಲ್ಲಿ ಅಳವಡಿಸಬೇಕು. ಅನುಮತಿ ಪಡಕೊಂಡ ಸಂಖ್ಯೆಯಿಂದ ಹೆಚ್ಚುವರಿ ಜಾಹೀರಾತನ್ನು ಅಳವಡಿಸಿದ್ದಲ್ಲಿ ಅಂತಹ ಜಾಹೀರಾತುಗಳನ್ನು ಸೆ.೨೭ರಂದು ತೆರವುಗೊಳಿಸಿ ಅಂತವರ ವಿರುದ್ಧ ಪೌರಸಭೆಗಳ ಅಧಿನಿಯಮ ೧೯೬೪ರ ಕಲಂ ಸಂಖ್ಯೆ ೧೩೬ ಹಾಗೂ ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ಅಧಿನಿಯಮ ೧೯೮೧ರನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು, ಮುಂದಿನ ಕಷ್ಟ-ನಷ್ಟಗಳಿಗೆ ನಗರಸಭೆಯು ಜವಾಬ್ದಾರರಾಗಿರುವುದಿಲ್ಲ ಎಂದು ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಮುಕ್ತಾಯಗೊಂಡ ಜಾಹಿರಾತು ತೆರವು ಮಾಡಬೇಕು:
ನಗರಸಭಾ ಅನುಮತಿ ಪಡಕೊಂಡು ನಗರಸಭೆಯಿಂದ ಸೂಚಿಸಿದ ಸ್ಥಳದಲ್ಲಿಯೇ ಅಳವಡಿಸಿ, ಅವಧಿ ಮುಕ್ತಾಯಗೊಂಡ ಜಾಹೀರಾತುಗಳನ್ನು ಆಯೋಜಕರು ತೆಗೆಯತಕ್ಕದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪಾದಾಚಾರಿಗಳು ಮತ್ತು ವಾಹನಗಳು ಚಲಿಸುತ್ತಿರುವ ಸ್ಥಳಗಳಲ್ಲಿ ಜಾಹೀರಾತುಗಳನ್ನು ಅಳವಡಿಸುತ್ತಿರುವುದು ಕಂಡು ಬರುತ್ತದೆ. ಇದರಿಂದಾಗಿ ವಾಹನ ಅಪಘಾತಗಳು ಹೆಚ್ಚುತ್ತಿದ್ದು, ಮತ್ತು ಭಿತ್ತಿಪತ್ರಗಳಿಂದ ನಗರದ ಸೌಂದರ್ಯವೂ ಹಾಳಾಗುತ್ತಿದೆ. ಯಾವುದೇ ವಾಣಿಜ್ಯ ಕಟ್ಟಡಗಳ ಯಾ ಉದ್ಯಮ ಕಟ್ಟಡದ ಮೇಲೆ ಸಂಸ್ಥೆಯ ಒಂದು ಜಾಹೀರಾತನ್ನು ಅಳವಡಿಸಲು ಅವಕಾಶ ಇದ್ದು, ಪಾರ್ಕಿಂಗ್‌ಗೆ ಕಾದಿರಿಸಿರುವ ಸ್ಥಳದಲ್ಲಿ ಹೆಚ್ಚುವರಿ ಜಾಹೀರಾತು ಯಾ ಉದ್ಯಮದ ಜಾಹೀರಾತನ್ನು ಅನಧಿಕೃತವಾಗಿ ಅಳವಡಿಸಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ ತೆರವುಗೊಳಿಸಲಾಗುವುದು – ಮಧು ಎಸ್ ಮನೋಹರ್, ಪೌರಾಯುಕ್ತರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here