ಉಪ್ಪಿನಂಗಡಿ : ಬಸ್ ನಿಲ್ದಾಣದಲ್ಲಿ ಗುಂಪು ಘರ್ಷಣೆಗೆ ಮುಂದಾದ ವಿದ್ಯಾರ್ಥಿಗಳು-ಪೊಲೀಸರಿಂದ ತಡೆ

0

ಉಪ್ಪಿನಂಗಡಿ: ವಿದ್ಯಾರ್ಥಿಗಳ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು ಗುಂಪು ಘರ್ಷಣೆ ನಡೆಯುವ ಹಂತದಲ್ಲಿದ್ದಾಗ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಿದ ಘಟನೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆದಿದೆ.

ಕಳೆದ ಸೆ.22ರಂದು ಸಂಜೆ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಯೋರ್ವ ಕ್ಷುಲ್ಲಕ ಕಾರಣಕ್ಕಾಗಿ ತನ್ನದೇ ಕಾಲೇಜಿನ ವಿದ್ಯಾರ್ಥಿಯೋರ್ವನಿಗೆ ಹಲ್ಲೆ ನಡೆಸಿದ್ದ. ವಿಚಾರಕ್ಕೆ ಸಂಬಂಧಿಸಿ ಸೆ.23ರಂದು ಬೆಳಗ್ಗೆ ಉಭಯ ತಂಡಗಳ ಬೆಂಬಲಿಗ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಗುಂಪು ಕಟ್ಟಿಕೊಂಡು ಹೊಡೆದಾಟಕ್ಕೆ ಸಿದ್ಧತೆ ನಡೆಸಿದ್ದರು. ಇದರ ಮಾಹಿತಿ ತಿಳಿದ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ಎಲ್ಲರನ್ನೂ ಚದುರಿಸಿ ಎಚ್ಚರಿಕೆ ನೀಡಿದ್ದರಲ್ಲದೆ, ಬಳಿಕ ಹತ್ತಕ್ಕೂ ಮಿಗಿಲಾದ ವಿದ್ಯಾರ್ಥಿಗಳಿಗೆ ಅವರವರ ಹೆತ್ತವರೊಂದಿಗೆ ಪ್ರಾಂಶುಪಾಲರನ್ನು ಭೇಟಿ ಮಾಡಲು ಸೂಚಿಸಿ, ಮುಚ್ಚಳಿಕೆ ಪತ್ರ ಬರೆದ ಬಳಿಕವೇ ತರಗತಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಅದೇ ವಿಷಯಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ಗುಂಪುಗೂಡುವಿಕೆ ಸೆ.26ರಂದು ಪುನರಾವರ್ತನೆಯಾಗಿದ್ದು, ಇಲ್ಲಿನ ಬಸ್ ನಿಲ್ದಾಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಗುಂಪುಗೂಡಿದ ವಿದ್ಯಾರ್ಥಿಗಳು ಪರಸ್ಪರ ಮಾತಿನ ಚಕಮಕಿ ನಡೆಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಬಂದಿದ್ದು, ಎಲ್ಲರನ್ನೂ ಸ್ಥಳದಿಂದ ಚದುರಿಸಿದ್ದಾರೆ. ಒಂದು ಗುಂಪಿನಲ್ಲಿ ವಿದ್ಯಾರ್ಥಿಗಳಲ್ಲದವರೂ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಯೋರ್ವ ಭಿನ್ನ ಕೋಮಿನ ವಿದ್ಯಾರ್ಥಿನಿಗೆ ಮೊಬೈಲ್ ಸಂದೇಶ ಕಳುಹಿಸುತ್ತಿದ್ದಾನೆಂಬ ವಿಚಾರದಲ್ಲಿ ವಿದ್ಯಾರ್ಥಿಗಳ ನಡುವೆ ಹಗೆತನ ಮೂಡಿರುವುದಾಗಿ ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿ ಯಾರೂ ದೂರು ನೀಡದ ಕಾರಣ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here