ದೇವಸ್ಥಾನಗಳಲ್ಲಿ ಕೃತಿ, ಶ್ಲೋಕಗಳ ನಾಮಫಲಕ ಅಳವಡಿಕೆಗೆ ಅವಕಾಶ ನೀಡದಂತೆ ಮನವಿ

0

ಪುತ್ತೂರು: ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಲ್ಲಿ ಯಾವುದೇ ಮತಾಚಾರ್ಯರ ಕೃತಿ, ಶ್ಲೋಕಗಳ ನಾಮಫಲಕಗಳನ್ನು ಅಳವಡಿಸಲು ಅವಕಾಶ ನೀಡದಂತೆ ಕೋರಿ ಸುಬ್ರಹ್ಮಣ್ಯ ಶೈವಕ್ಷೇತ್ರ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ನಿರ್ದೇಶಕ ಶ್ರೀನಾಥ್ ಟಿ.ಎಸ್. ಅವರು ಸಚಿವೆ ಶಶಿಕಲಾ ಜೊಲ್ಲೆರವರಿಗೆ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದಾರೆ.

ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನವು ಕರ್ನಾಟಕ ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಒಳಪಟ್ಟ ಪ್ರವರ್ಗ ಎ ಶ್ರೇಣಿಯ ಪ್ರಾಚೀನ ಶೈವ ಕ್ಷೇತ್ರವಾಗಿರುತ್ತದೆ. ಈ ಕ್ಷೇತ್ರಕ್ಕೆ ಹಿಂದೂ ಸಮಾಜದ ಎಲ್ಲಾ ವರ್ಗ, ಪಂಗಡ, ಪಂಥಗಳ ಭಕ್ತಾದಿಗಳು ಆಗಮಿಸುತ್ತಾರೆ. ಹೀಗಿರುವಾಗ, ಸದ್ರಿ ಶ್ರೀ ಕ್ಷೇತ್ರಕ್ಕೆ ದಿನಾಂಕ ೨೨-೦೯-೨೦೨೨ರಂದು ಮಾಧ್ವ ತತ್ವ ಸಿದ್ಧಾಂತದ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಅವರ ಶಿಷ್ಯ ಶ್ರೀ ವಾದಿರಾಜ ಆಚಾರ್ಯರ ಅನುಯಾಯಿಗಳಾದ ಮಾಧ್ವ ಶಿವಳ್ಳಿ ವೈಷ್ಣವ ಸಿದ್ಧಾಂತದ ಕೆಲವು ವ್ಯಕ್ತಿಗಳು ಆಗಮಿಸಿ ಮಾಧ್ವ ತತ್ವ ಸಿದ್ಧಾಂತದ ಶ್ರೀ ವಾದಿರಾಜ ಗುರುಗಳ ಕೃತಿ, ಶ್ಲೋಕ, ಪ್ರಚಾರಗಳನ್ನು ಒಳಗೊಂಡ ನಾಮಫಲಕವನ್ನು ದೇವಸ್ಥಾನದಲ್ಲಿ ಅಳವಡಿಸಲು ಪ್ರಯತ್ನಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಸಮಸ್ತ ಹಿಂದೂ ಸಮಾಜಕ್ಕೆ ಒಳಪಟ್ಟ ದೇವಸ್ಥಾನಗಳಲ್ಲಿ ಯಾವುದೇ ಒಂದು ನಿರ್ದಿಷ್ಟ ತತ್ವ ಸಿದ್ಧಾಂತದ ಮತಾಚಾರ್ಯರ ಶ್ಲೋಕ, ಕೃತಿಗಳನ್ನು ಪ್ರಚಾರ ಮಾಡುವುದು, ಫಲಕ ಅಳವಡಿಸುವುದು ಇಲಾಖಾ ನಿಯಮಗಳಿಗೆ ವಿರುದ್ಧವಾದುದು ಮತ್ತು ಕಾನೂನು ಬಾಹಿರವಾಗಿರುತ್ತದೆ. ಯಾವುದೇ ಕಾರಣಕ್ಕೂ ಇದು ನ್ಯಾಯ ಸಮ್ಮತವಲ್ಲ. ಇಂತಹ ಅನಧಿಕೃತ ಚಟುವಟಿಕೆಗಳಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅವಕಾಶ ನೀಡಲೇಬಾರದು. ಇಂತಹ ಅನಧಿಕೃತ ಕೃತ್ಯಗಳು ನಡೆದರೆ ಅದು ಹಿಂದೂ ಧಾರ್ಮಿಕ ಸಾಮರಸ್ಯಕ್ಕೆ, ಐಕ್ಯತೆಗೆ ಧಕ್ಕೆ ತರುತ್ತದೆ. ಅಹಿತಕರ ಘಟನೆಗಳಿಗೂ ಕಾರಣವಾಗಬಹುದು. ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಸಾರ್ವಜನಿಕ ದೇವಸ್ಥಾನಗಳನ್ನು ಮಾಧ್ವಮಯ / ಮಾಧೀಕರಣ ಮಾಡಲು ನಡೆಸಲು ಮಾಡಲಾಗಿರುವ ಈ ಷಡ್ಯಂತ್ರಕ್ಕೆ ಇಲಾಖೆ ಕಡಿವಾಣ ಹಾಕಲೇಬೇಕು.

ಇದೇ ರೀತಿಯ ಷಡ್ಯಂತ್ರ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲೂ ಕೆಲವು ಮಾಧ್ವಮತ ಅನುಯಾಯಿಗಳಿಂದ ಇತ್ತೀಚೆಗೆ ನಡೆದಿರುವ ಬಗ್ಗೆ ತಿಳಿದುಬಂದಿದೆ. ಅದೇ ರೀತಿ ಉಡುಪಿ ಜಿಲ್ಲೆಯ ಕ್ರೋಢ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲೂ ಇಂತಹುದೇ ಕೃತ್ಯಕ್ಕೆ ಮಾಧ್ವಮತ ಅನುಯಾಯಿಗಳ ತಂಡ ಮುಂದಾಗಿತ್ತು. ಆದ್ದರಿಂದ ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಲ್ಲಿ ಯಾವುದೇ ತತ್ವ ಸಿದ್ಧಾಂತದ ಮತಾಚಾರ್ಯರ ಕೃತಿ, ಶ್ಲೋಕಗಳ ಫಲಕಗಳನ್ನು ಅಳವಡಿಸಲು, ಸಿದ್ಧಾಂತಗಳನ್ನು ಪ್ರಚಾರ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದಾಗಿ ತಮ್ಮಲ್ಲಿ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

LEAVE A REPLY

Please enter your comment!
Please enter your name here