ಕುಂಬ್ರ ವಲಯ ಬಿ.ಎಂ.ಎಸ್ ಕಟ್ಟಡ ಕಾರ್ಮಿಕರ ಸಂಘದ ಕಛೇರಿ, ಗಣಕಯಂತ್ರ ಉದ್ಘಾಟನೆ

0

ಕಾರ್ಮಿಕ ಕೂಡ ಮಾಲೀಕನಾಗುವ ಕನಸು ಹೊಂದಿರಬೇಕು: ಸಂಜೀವ ಮಠಂದೂರು

ಪುತ್ತೂರು: ರಾಷ್ಟ್ರದ ಅಭ್ಯುದಯಕ್ಕೆ ಮಜ್ದೂರ್ ಸಂಘ ದೊಡ್ಡ ಕೊಡುಗೆಯನ್ನು ನೀಡಿದೆ. ಸ್ವಾಭಿಮಾನಿ ಮತ್ತು ಸ್ವಾವಲಂಭಿಗಳಾಗಿ ಬದುಕುವುದನ್ನು ಸಂಘ ಹೇಳಿಕೊಟ್ಟಿದೆ. ಕಾರ್ಮಿಕರು ಕೂಡ ಸ್ವಾವಲಂಭಿಗಳಾಗಿ ಬದುಕಬೇಕು ಎಂಬ ನಿಟ್ಟಿನಲ್ಲಿ ಸರಕಾರ ಬಹಳಷ್ಟು ಯೋಜನೆಗಳನ್ನು ತಂದಿದೆ. ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವ ಮೂಲಕ ಕಾರ್ಮಿಕ ಕೂಡ ಮಾಲೀಕವಾಗುವ ಕನಸನ್ನು ಕಾಣಬೇಕು ಮತ್ತು ಆ ಕನಸನ್ನು ನನಸಾಗಿಸಲು ಪ್ರಯತ್ನ ಪಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಬಿ.ಯಂ.ಎಸ್ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಹಾಗೂ ಕಾಮಗಾರಿ ಮಜ್ದೂರ್ ಸಂಘ ಕುಂಬ್ರ ವಲಯ ಇದರ ನೂತನ ಕಛೇರಿ ಮತ್ತು ಗಣಕಯಂತ್ರವನ್ನು ಸೆ.೨೬ ರಂದು ಕುಂಬ್ರದಲ್ಲಿ ಉದ್ಘಾಟಿಸಿ ಬಳಿಕ ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು. ಕಾರ್ಮಿಕರು ಕೂಡ ಮಾಲೀಕರಾಗಬೇಕು ಎಂಬ ನಿಟ್ಟಿನಲ್ಲಿ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಯೋಜನೆಗಳು ಪ್ರಯೋಜನ ಪಡೆದುಕೊಳ್ಳಬೇಕು ಎಂದ ಶಾಸಕರು, ಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕು ಈ ದಿಶೆಯಲ್ಲಿ ಕಾರ್ಮಿಕ ಸಂಘಗಳು ಕೂಡ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕು, ದುಶ್ಚಟಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಸಂಘಗಳಿಂದ ಆಗಬೇಕು ಎಂದು ಸಂಜೀವ ಮಠಂದೂರು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಬಿ.ಯಂ.ಎಸ್ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ರಾವ್‌ರವರು ಮಾತನಾಡಿ, ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುಂಬ್ರ ವಲಯದ ಸಂಘವು ಉತ್ತಮವಾದ ಕಛೇರಿಯನ್ನು ತೆರೆದಿದ್ದು ಇದರ ಮೂಲಕ ಕಾರ್ಮಿಕರಿಗೆ ಇನ್ನಷ್ಟು ಸೇವೆಗಳನ್ನು ನೀಡಲು ಮುಂದಾಗಿರುವುದು ಖುಷಿ ತಂದಿದೆ. ಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಮುಖ್ಯ ಅತಿಥಿಗಳಾಗಿದ್ದ ಬಿ.ಯಂ.ಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್‌ರವರು ಮಾತನಾಡಿ, ಕಾರ್ಮಿಕರಿಗೆ ಬೇಕಾದ ಎಲ್ಲಾ ರೀತಿಯ ಸೇವೆಗಳನ್ನು ನೀಡಲು ಸಂಘವು ಸದಾ ಸಿದ್ದವಿದೆ. ಕಾರ್ಮಿಕರ ಸಮಸ್ಯೆಗಳನ್ನು ಅರಿತುಕೊಂಡು ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘ ಸದಾ ಶ್ರಮಿಸುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.

ಮಂಗಳೂರು ಉಪವಿಭಾಗದ ಕಾರ್ಮಿಕ ಅಧಿಕಾರಿ ಅಮರೇಂದ್ರ ಹಾಗೂ ಪುತ್ತೂರು ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆಯವರುಗಳು ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಬಿ.ಯಂ.ಎಸ್ ನಿಕಟಪೂರ್ವ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ವಿಧಾನಪರಿಷತ್ತು ಶಾಸಕ ಪ್ರತಾಪಸಿಂಹ ನಾಯಕ್, ಉದ್ಯಮಿ, ಇಂಡೇನ್ ಗ್ಯಾಸ್ ಮಾಲಕ ಬೂಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಷ್ ರೈ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಬಿ.ಯಂ.ಎಸ್ ಆರ್ಲಪದವು ವಲಯದ ಅಧ್ಯಕ್ಷ ದಿವಾಕರ ಕುಲಾಲ್, ಈಶ್ವರಮಂಗಲ ವಲಯದ ಅಧ್ಯಕ್ಷ ಶೇಷಪ್ಪ, ಕುಂಬ್ರ ವಲಯದ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಕೈಕಾರ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯರುಗಳಾದ ಸಾಜ ರಾಧಾಕೃಷ್ಣ ಆಳ್ವ, ಹರೀಶ್ ಬಿಜತ್ರೆ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕುಂಬ್ರ ಕೆಪಿಎಸ್ ಕಾರ್ಯಾಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ ಸೇರಿದಂತೆ ಹಲವು ಮಂದಿ ಗಣ್ಯರು, ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಜಯಂತಿ ಬೊಳ್ಳಾಡಿ ಪ್ರಾರ್ಥಿಸಿದರು. ಚಿದಾನಂದ ಆಚಾರ್ಯ ಕಾವು ಸ್ವಾಗತಿಸಿದರು. ವೆಂಕಪ್ಪ ನಾಯ್ಕ, ದಯಾನಂದ ಗೌಡ, ಕೇಶವ, ಚಂದ್ರಶೇಖರ, ಮಂಜುನಾಥ, ಮೋಹನ ಆಚಾರ್ಯ, ವಸಂತ, ರಾಮಕೃಷ್ಣ ನಾಯ್ಕ ಮುಡಾಲರವರುಗಳು ಅತಿಥಿಗಳಿಗೆ ವೀಳ್ಯ ನೀಡಿ ಸ್ವಾಗತಿಸಿದರು. ಕುಂಬ್ರ ವಲಯದ ಜತೆ ಕಾರ್ಯದರ್ಶಿ ಜಯಂತ ಮುಡಾಲ ವಂದಿಸಿದರು. ಸಂತೋಷ್ ರೈ ಕೈಕಾರ ಕಾರ್ಯಕ್ರಮ ನಿರೂಪಿಸಿದರು. ಸಂಘದ ನೂತನ ಕಛೇರಿಯು ಕುಂಬ್ರ ಹಾಲು ಉತ್ಪಾದಕರ ಸಹಕಾರಿ ಸಂಘದ ಬಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಾರ್ಮಿಕರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷರು ತಿಳಿಸಿದರು.

ವಿವಿಧ ಕ್ಷೇತ್ರದ ಸಾಧಕರಿಗೆ/ ಹಿರಿಯ ಕಾರ್ಮಿಕರಿಗೆ ಸನ್ಮಾನ
ಸುಳ್ಯ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕರು, ಕಲಾಪ್ರವೀಣರು ಆಗಿರುವ ಜನಾರ್ದನ್ ಬಿ.ರವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಇದಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಲ್ಲಿ ನಿವೃತ್ತ ಸೈನಿಕ ಶ್ರೀನಿವಾಸ ರೈ ಕುಂಬ್ರ, ಸುಭೇದಾರ್ ರಂಗನಾಥ್, ಉದ್ಯಮಿ ಮೋಹನದಾಸ ರೈ ಕುಂಬ್ರ, ಟೈಲರ್ ವಿಶ್ವನಾಥ ರೈ, ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಮಾಜಿ ಕಾರ್ಯದರ್ಶಿ ಶಿವರಾಮ ಗೌಡ ಇದ್ಯಪೆ ಹಾಗೂ ಹಿರಿಯ ಕಾರ್ಮಿಕ ದಾಮೋದರ ಮೇಸ್ತ್ರೀರವರುಗಳಿಗೆ ಈ ಸಂದರ್ಭದಲ್ಲಿ ಶಾಲು,ಹಾರ,ಸ್ಮರಣಿಕೆ,ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರುರವರನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು.

ಬರೆಯುವ ಪುಸ್ತಕ ವಿತರಣೆ
ಕುಂಬ್ರ ವಲಯದ ಸದಸ್ಯರಾಗಿರುವ ಕಾರ್ಮಿಕರ ಮಕ್ಕಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು. ಸುಮಾರು ೧ ಸಾವಿರ ಬರೆಯುವ ಪುಸ್ತಕಗಳನ್ನು ಈ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು. ಇದಲ್ಲದೆ ಇತ್ತೀಚೆಗೆ ಕುಂಬ್ರ ಕೆಪಿಎಸ್ ಸಭಾಂಗಣದಲ್ಲಿ ನಡೆದ ಕಾರ್ಮಿಕರಿಗೆ ಮತ್ತು ಅವಲಂಭಿತರಿಗೆ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಕೊಂಡು ೧೩೦ ಮಂದಿಗೆ ಮೆಡಿಕಲ್ ವರದಿಯನ್ನು ವಿತರಿಸಲಾಯಿತು.

“ ಬಿ.ಯಂ.ಎಸ್ ಕಟ್ಟಡ ಕಾರ್ಮಿಕ ಸಂಘ ಕುಂಬ್ರ ವಲಯದಿಂದ ಈಗಾಗಲೇ ಕಾರ್ಮಿಕರಿಗೆ ಬೇಕಾದ ಎಲ್ಲಾ ರೀತಿಯ ಮಾಹಿತಿ ಮತ್ತು ಸವಲತ್ತುಗಳನ್ನು ನೀಡಲಾಗುತ್ತಿದೆ. ಸುಮಾರು ೬೦ ಮದುವೆ ಸಹಾಯಧನ, ೧೫ ಮಂದಿಗೆ ಮರಣ ಸಾಂತ್ವನ ಸಹಾಯಧನ, ೩೦೦ ಮಕ್ಕಳಿಗೆ ಸ್ಕಾಲರ್‌ಶಿಫ್ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಕೊರೋನ ಸಂದರ್ಭದಲ್ಲಿ ಆಹಾರ ಕಿಟ್, ವಿಟಮಿನ್ ಕಿಟ್,ಪಿಪಿಕಿಟ್ ವಿತರಿಸಲಾಗಿದೆ. ಇದಲ್ಲದೆ ಕಾರ್ಮಿಕ ಇಲಾಖೆಯಿಂದ ಸಿಗುವ ಎಲ್ಲಾ ರೀತಿಯ ಸವಲತ್ತುಗಳನ್ನು ತೆಗೆಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಮುಂದೆಯೂ ಮಾಡುತ್ತೇವೆ. ಎಲ್ಲರ ಸಹಕಾರ ಅಗತ್ಯ.”

ಪುರಂದರ ಶೆಟ್ಟಿ ಮುಡಾಲ, ಅಧ್ಯಕ್ಷರು ಬಿ.ಯಂ.ಎಸ್ ಕಟ್ಟಡ ಕಾರ್ಮಿಕ ಸಂಘ ಕುಂಬ್ರ ವಲಯ

LEAVE A REPLY

Please enter your comment!
Please enter your name here