ಪುತ್ತೂರು: ನವರಾತ್ರಿಯ ಸಂದರ್ಭದಲ್ಲಿ ದೈವದತ್ತ ಸಂಕೇತವಾದ ತುಳುನಾಡಿನ ಸಂಸ್ಕೃತಿ ಹಾಗೂ ಎಲ್ಲಾ ವರ್ಗದ ಜನರ ಅಚ್ಚು ಮೆಚ್ಚಿನ ಹುಲಿಕುಣಿತವನ್ನು ಪ್ರೋತ್ಸಾಹಿಸುವ ಹಾಗೂ ಮುಂದಿನ ಪೀಳಿಗೆಯೂ ಉಳಿಸಿ ಬೆಳೆಸುವ ನಿಟ್ಟಿನಿಂದ ಎಲ್ಲರ ಸಹಕಾರದಿಂದ ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ರೂ.10 ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಐತಿಹಾಸಿಕ ಪುತ್ತೂರ್‍ದ ಪಿಲಿರಂಗ್ ಸೀಸನ್-೧ ಪಿಲಿನಲಿಕೆ ಸ್ಪರ್ಧೆಯು ಅ.1ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ಜರಗಲಿದೆ. ಎಂದು ಪುತ್ತೂರ್‍ದ ಪಿಲಿರಂಗ್ ಸ್ಪರ್ಧೆಯ ನೇತೃತ್ವ ವಹಿಸಿರುವ ಮಾಜಿ ಶಾಸಕಿ, ಸಮಾಜ ಸೇವಕಿ ಶಕುಂತಳಾ ಶೆಟ್ಟಿಯವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ದ.ಕ.ಜಿಲ್ಲೆಯ ಹೆಸರಾಂತ ಎಂಟು ಆಹ್ವಾನಿತ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದೆ.
ಸ್ಪರ್ಧೆಯು ಅ.1ರಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಿ ರಾತ್ರಿವರೆಗೆ ಪೌಲಕುಣಿತ ಸ್ಪರ್ಧೆ, ವಾದ್ಯ ಘೋಷದ ಕುಣಿತ ಸ್ಪರ್ಧೆ,ತಾಸೆ ಬಡಿತದೊಂದಿಗೆ ಕುಣಿತ ಸ್ಪರ್ಧೆ, ವಾದ್ಯ ತಾಸೆ ಬಡಿತದೊಂದಿಗೆ ಕುಣಿತ ಸ್ಪರ್ಧೆ, ಅಕ್ಕಿಮುಡಿಯನ್ನು ತಲೆಯ ಮೇಲಿಂದ ಹಾರಿಸುವ ಸ್ಪರ್ಧೆ, ಸಹಾಸ ಪ್ರವೇಶ, ಉಗಾರಿಕೆ ಸಂಯೋಜನೆ ಸ್ಪರ್ಧೆಗಳು ನಡೆಯಲಿದೆ. ಸರಳ ರೀತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.
ಸನ್ಮಾನ: ಹಲವಾರು ವರ್ಷಗಳಿಂದ ಪುತ್ತೂರಿನಾದ್ಯಂತ ಹುಲಿಕುಣಿತದಲ್ಲಿ ಹೆಸರುವಾಸಿಯಾಗಿರುವ ರಾಧಾಕೃಷ್ಣ ಶೆಟ್ಟಿ, ಬಣ್ಣ ಹಾಕುವುದರಲ್ಲಿ ಹೆಸರವಾಸಿಯಾದ ರಮೇಶ್‌ರವರನ್ನು ಸನ್ಮಾನಿಸಲಾಗುವುದು ಎಂದು ಶಕುಂತಳಾ ಶೆಟ್ಟಿ ತಿಳಿಸಿದರು. ಅಭಿಮಾನಿಗಳು ಹಾಗೂ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿ ಮಾಡುವಂತೆ ವಿನಂತಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಗೌರವಾಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಾರ್ಯಾಧ್ಯಕ್ಷ ಉದ್ಯಮಿ ಎನ್. ಶಿವರಾಮ ಆಳ್ವ, ಉಪಾಧ್ಯಕ್ಷ ರೋಶನ್ ರೈ, ಖಜಾಂಜಿ ರಂಜಿತ್ ಬಂಗೇರ, ಲೋಕೇಶ್ ಗೌಡ ಉಪಸ್ಥಿತರಿದ್ದರು.
ಉಡುಪಿ ಮಹಿಳಾ ಪಿಲಿಗೊಬ್ಬು ತಂಡದ ಹುಲಿಕುಣಿತ ಪ್ರದರ್ಶನ ಉಡುಪಿಯ ಮಹಿಳಾ ಪಿಲಿಗೊಬ್ಬು ತಂಡದಿಂದ ಹುಲಿಕುಣಿತ ಪ್ರದರ್ಶನ ನಡೆಯಲಿದೆ.
ಸ್ಪರ್ಧೆಯು ಜಿಲ್ಲಾ ಮಟ್ಟದಲ್ಲಿ ನಡೆಯಲಿದ್ದು ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ ರೂ.1ಲಕ್ಷ ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ 50,000 ಹಾಗೂ ಶಾಶ್ವತ ಫಲಕ ಭಾಗವಹಿಸಿದ ತಂಡಗಳಿಗೆ ರೂ.25,000 ಮತ್ತು ಸ್ಮರಣಿಕೆ ಹಾಗೂ ಉತ್ತಮ ಛಾಯಾಗ್ರಾಹಕ ಪ್ರಶಸ್ತಿಯಾಗಿ ರೂ. 5000 ಮತ್ತು ಶಾಶ್ವತ ಫಲಕ ನೀಡಲಾಗುವುದು.