ಪುತ್ತೂರು: ರಾಜ್ಯದ ಪ್ರಸಿದ್ಧ ನ್ಯೂಸ್‌ವಾಹಿನಿಗಳ ಪೈಕಿ ಒಂದಾಗಿರುವ ನ್ಯೂಸ್ ಫಸ್ಟ್ ಚಾನೆಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಅವರು ಸೆ.27ರಂದು ಬೆಳಗ್ಗೆ ಸುದ್ದಿ ಚಾನೆಲ್ ಕಚೇರಿಗೆ ಭೇಟಿ ನೀಡಿದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದ, ಸುದ್ದಿ ಬಿಡುಗಡೆ ಪುತ್ತೂರು ಸಿಇಒ ಸೃಜನ್ ಊರುಬೈಲು, ಸುದ್ದಿ ಬೆಳ್ತಂಗಡಿ ಸಿಇಒ ಸಿಂಚನಾ ಊರುಬೈಲು ಮತ್ತು ಸುದ್ದಿ ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆ ಮತ್ತು ಸುದ್ದಿ ಚಾನೆಲ್‌ನ ಪ್ರಧಾನ ನಿರೂಪಕ ಗೌತಮ್ ಶೆಟ್ಟಿಯವರು ರವಿಕುಮಾರ್ ಮತ್ತು ಅರ್ಚನಾ ರವಿಕುಮಾರ್ ದಂಪತಿಯನ್ನು ಸ್ವಾಗತಿಸಿದರು.
ಈ ವೇಳೆ ಸುದ್ದಿ ಚಾನೆಲ್‌ಗೆ ಕಿರು ಸಂದರ್ಶನ ನೀಡಿದ ರವಿಕುಮಾರ್ ಅವರು, ಸ್ಥಳೀಯ ಪತ್ರಿಕೆಯಾಗಿ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ಚಾನೆಲ್‌ನ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇವರೊಂದಿಗೆ ಸುದ್ದಿ ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆಯವರು ನಡೆಸಿದ ಕಿರು ಸಂದರ್ಶನದ ವಿವರ ಇಲ್ಲಿದೆ.
ಕೋವಿಡ್ ಸಮಯದಲ್ಲೇ ಚಾನೆಲ್ ಆರಂಭ: 2021ರ ಮಾರ್ಚ್ ಅಥವಾ ಮೇ ತಿಂಗಳಲ್ಲಿ ಚಾನೆಲ್ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಆ ವೇಳೆ ಲಾಕ್‌ಡೌನ್ ವಿಧಿಸಲ್ಪಟ್ಟಿತ್ತು. ಉಪಕರಣಗಳು ಬೇರೆಬೇರೆ ದೇಶಗಳಿಂದ ಬರಬೇಕಿದ್ದುದರಿಂದ ಅದು ಸಮಯಕ್ಕೆ ಸರಿಯಾಗಿ ಬರಲಿಲ್ಲ. 6-8 ತಿಂಗಳು ಚಾನೆಲ್ ಲಾಂಚ್‌ನ್ನು ಪೋಸ್ಟ್‌ಪೋನ್ ಮಾಡಬೇಕಾಯ್ತು. ಸೆಪ್ಟೆಂಬರ್‌ನಲ್ಲಿ ಲಾಂಚ್ ಮಾಡಿದೆವು. ಚಾನೆಲ್ ಬಗ್ಗೆ ರಾಜ್ಯಾದ್ಯಂತ ಉತ್ತಮ ಅಭಿಪ್ರಾಯವಿದೆ. ದೃಶ್ಯಮಾಧ್ಯಮದಲ್ಲಿ ದಿನನಿತ್ಯ ಹೊಸತನವನ್ನು ನೀಡಬೇಕು. ಇದು ನಿರಂತರ. ನಮ್ಮ ಜೊತೆ ಉತ್ತಮ ತಂಡವಿದೆ. ಹೀಗಾಗಿ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ನ್ಯೂಸ್ ಫಸ್ಟ್‌ನ ಆರಂಭದ ದಿನಗಳ ಬಗ್ಗೆ ರವಿಕುಮಾರ್ ವಿವರಿಸಿದರು.
ಮೈಕ್ರೋಲೆವೆಲ್ ಜರ್ನಲಿಸಮ್ ಮತ್ತು ಸ್ಟೇಟ್ ಲೆವೆಲ್ ಜರ್ನಲಿಸಮ್‌ನ ಹೊಂದಾಣಿಕೆ : ಪ್ರೇಕ್ಷಕರ ದೃಷ್ಟಿಯಿಂದ ನೋಡಿದರೆ ಇವೆರಡೂ ಮುಖ್ಯ. ಲೋಕಲ್ ಚಾನೆಲ್ ಮೂಲಕ ಜನರಿಗೆ ಅವರ ಊರಲ್ಲಿ ನಡೆಯುವುದು ತಿಳಿಯುತ್ತದೆ. ಸ್ಟೇಟ್ ಲೆವೆಲ್ ಚಾನೆಲ್‌ಗಳಿಂದ ರಾಜ್ಯ, ದೇಶ, ವಿದೇಶದಲ್ಲಿ ಏನು ನಡೆಯುತ್ತದೆ ಎನ್ನುವುದು ತಿಳಿಯುತ್ತದೆ. ರಾಜ್ಯಮಟ್ಟದ ವಾಹಿನಿಗಳಲ್ಲಿ ಜಿಲ್ಲೆ, ತಾಲೂಕಿನ ಪ್ರತೀ ಸುದ್ದಿಯನ್ನೂ ಕವರ್ ಮಾಡಲು ಸಾಧ್ಯವಿಲ್ಲ. ಇಲ್ಲಿ 24 ಗಂಟೆಗಳಲ್ಲಿ ಪ್ರಮುಖ ಬೆಳವಣಿಗೆಗಳನ್ನು ಮಾತ್ರ ತೋರಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ನ್ಯೂಸ್‌ಗಳನ್ನು ಬ್ರೀ- ಆಗಿ ಕೊಡುವ ಕೆಲಸ ಮಾಡ್ತಿದ್ದೇವೆ. ಲೋಕಲ್ ಚಾನೆಲ್‌ಗಳು ಎಲ್ಲವನ್ನೂ ಲೈವ್ ಮಾಡುತ್ತವೆ. ಇದರಿಂದಾಗಿ ಜನತೆಗೆ ಸಂಪೂರ್ಣ ಚಿತ್ರಣ ಸಿಗುತ್ತದೆ ಎಂದು ರವಿಕುಮಾರ್ ಅವರು ಅಭಿಪ್ರಾಯಪಟ್ಟರು.
ಸುದ್ದಿಯಿಂದ ಆರಂಭಗೊಂಡಿರುವ ಕೃಷಿಕರಿಗೆ ಸ್ವಾತಂತ್ರ್ಯ ಎನ್ನುವ ಪರಿಕಲ್ಪನೆಯ ಬಗ್ಗೆ: ಕೃಷಿ ಕಾರ್ಯಕ್ರಮಗಳನ್ನು ಮಾಧ್ಯಮಗಳಲ್ಲಿ ಮಾಡಬಹುದು ಎನ್ನುವುದನ್ನು ತೋರಿಸಿದ್ದೇ ಮಾಧ್ಯಮ ಕ್ಷೇತ್ರದ ದಿಗ್ಗಜರಾದ ರಾಮೋಜಿರಾವ್ ಅವರು. ಅವರ ಆಲೋಚನೆಗಳು ಪ್ರಭಾವ ಬೀರಿವೆ. ಈಟಿವಿಯಲ್ಲಿ ಬರುತ್ತಿದ್ದ ಅನ್ನದಾತ ಕಾರ್ಯಕ್ರಮದಲ್ಲಿ ಅನೇಕ ಕೃಷಿ ವಿಚಾರಗಳನ್ನು ತಿಳಿಸಿಕೊಡುತ್ತಿದ್ದರು. ಮುಂದಕ್ಕೆ ಬೇರೆ ಬೇರೆ ಮಾಧ್ಯಮಸಂಸ್ಥೆಗಳು ಅವರ ಪರಿಮಿತಯೊಳಗೆ ಕೃಷಿಗೆ ಒತ್ತು ನೀಡಲು ಆರಂಭಿಸಿದವು. ಇದು ಅವಶ್ಯಕ. ಕೃಷಿ ಕಾರ್ಯಕ್ರಮಗಳಿಗೆ ಟಿಆರ್‌ಪಿ ಇಲ್ಲ ಎನ್ನುವ ಮಾತುಗಳಿವೆ. ಆದರೆ ನಾವು ಎಲ್ಲವನ್ನೂ ಟಿಆರ್‌ಪಿ ದೃಷ್ಟಿಕೋನದಿಂದ ನೋಡಬಾರದು. ಜನರಿಗೆ ಅವಶ್ಯಕತೆ ಇರುವ ಕಾರ್ಯಕ್ರಮಗಳು, ಸಮಾಜಕ್ಕೆ ಒಳ್ಳೆಯದಾಗುವ ಕಾರ್ಯಕ್ರಮಗಳನ್ನು ಮಾಡುವಾಗ ಯಾವತ್ತೂ ಟಿಆರ್‌ಪಿ ಬಗ್ಗೆ ಯೋಚಿಸಬಾರದು. ಜನರಿಗೆ ಎಷ್ಟು ಒಳ್ಳೆಯದಾಗುತ್ತದೆ ಎನ್ನುವ ಬಗ್ಗೆ ಯೋಚನೆ ಮಾಡಬೇಕು ಎಂದು ತಿಳಿಸಿದರು.
ಲಂಚ ಭ್ರಷ್ಟಾಚಾರ ವಿರುದ್ಧ ಸುದ್ದಿಯ ಅಭಿಯಾನದ ಬಗ್ಗೆ: 2006ರಲ್ಲಿ ಟಿವಿ9 ಸಂಸ್ಥೆಯನ್ನು ಆರಂಭಿಸಿದಾಗ ‘ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದೇವೆ, ಬನ್ನಿ ಕೈಜೋಡಿಸಿ’ ಎಂದು ಒಂದು ದೂರವಾಣಿ ಸಂಖ್ಯೆ ನೀಡಿದ್ದೆವು. ‘ಓರ್ವ ಅಜ್ಜ ಒಂದು ಪಿಂಚಣಿ ಕಚೇರಿಗೆ ಹೋಗುತ್ತಾರೆ. ಹೋದಾಗ ಗೇಟ್‌ನಲ್ಲಿದ್ದ ಹುಡುಗ ದುಡ್ಡು ಕೊಟ್ಟರೆ ಮಾತ್ರ ಒಳಗಡೆ ಹೋಗಿ, ಇಲ್ಲದಿದ್ದರೆ ಆಚೆ ಹೋಗಿ ಎನ್ನುತ್ತಾನೆ. ಅವನಿಗೆ ದುಡ್ಡು ಕೊಟ್ಟು ಒಳಗಡೆ ಹೋದಾಗ ಅಲ್ಲಿದ್ದ ಅಽಕಾರಿ ಹೇಳ್ತಾರೆ, ನೀವು ನನಗೆ ಏನು ತಲುಪಿಸಬೇಕೋ, ಅದನ್ನು ತಲುಪಿಸಿದರೆ ನಿಮಗೆ ಬರೋದನ್ನು ಮಾಡಿಕೊಡುತ್ತೇನೆ ಎನ್ನುತ್ತಾನೆ’ ಎನ್ನುವ ಪ್ರೋಮೋವನ್ನು ೨೦೦೬ರಲ್ಲಿ ಮಾಡಿದ್ದೆವು. ಇದು ಬಹಳ ಯಶಸ್ಸು ಕಂಡಿತ್ತು. ಸಾವಿರಾರು ಕರೆಗಳು ಬಂದಿದ್ದವು. ಈ ಮೂಲಕ ಕೆಲವೊಂದು ಭ್ರಷ್ಟ ಅಧಿಕಾರಿಗಳನ್ನು ಬಯಲಿಗೆಳೆದೆವು. ಈಗ ನ್ಯೂಸ್ ಫಸ್ಟ್‌ನಲ್ಲೂ ಹಲವು ಸ್ಟಿಂಗ್ ಆಪರೇಷನ್ಸ್ ಮಾಡಿದ್ದೇವೆ. ಅಽಕಾರಿಗಳು, ರಾಜಕಾರಣಿಗಳು, ಸಚಿವರ ಮೊಟ್ಟೆ ಹಗರಣ ಇತ್ಯಾದಿಗಳನ್ನು ಬಯಲಿಗೆಳೆದಿದ್ದೇವೆ. ಬಡ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ನೀಡುವ ಮೊಟ್ಟೆ ವಿಚಾರದಲ್ಲೂ ಡೀಲ್ ಮಾಡ್ತಾರೆ ಎಂದರೆ ಸಿಸ್ಟಮ್ ಯಾವ ಲೆವೆಲ್‌ಗೆ ಹೋಗಿದೆ ಎನ್ನುವುದು ತಿಳಿಯುತ್ತದೆ. ಈಗ ರಾಜ್ಯ ಸರ್ಕಾರ ಕೂಡ ಭ್ರಷ್ಟಾಚಾರದ ವಿರುದ್ಧ ನಿರ್ಣಯ ಕೈಗೊಂಡಿದೆ. ಜೊತೆಗೆ ‘ಸುದ್ದಿ’ ವರ್ಷಗಳಿಂದ ಈ ಅಭಿಯಾನ ನಡೆಸುತ್ತಲೇ ಇದೆ. ತುಂಬಾ ಒಳ್ಳೆಯ ಕೆಲಸ. ಇದರಿಂದ ಕೆಲ ಅಽಕಾರಿಗಳಲ್ಲಾದರೂ ನಾವು ಲಂಚ ತೆಗೆದುಕೊಳ್ಳದೆ ಕೆಲಸ ಮಾಡಬೇಕೆನ್ನುವ ಮನಃಪರಿವರ್ತನೆ ಆದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೇನಿಲ್ಲ. ಇಂತಹುದು ನಡೆಯುತ್ತಲೇ ಇರಬೇಕು. ಇದಕ್ಕಾಗಿ ‘ಸುದ್ದಿ’ ಬಿಡುಗಡೆ ಪತ್ರಿಕೆಯ ಸಂಪಾದಕರಾದ ಡಾ.ಯು.ಪಿ.ಶಿವಾನಂದರನ್ನು ಅಭಿನಂದಿಸುತ್ತೇನೆ. ಇದು ಅಕ್ಕಪಕ್ಕದ ಜಿಲ್ಲೆಗಳು, ಮನೆ ಮನೆಗಳನ್ನು ತಲುಪುತ್ತಿರುವುದು ನಿಜಕ್ಕೂ ಸಂತಸದ ವಿಚಾರ ಎಂದು ರವಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪುತ್ತೂರಿನ ಜನರಿಗೆ ಮಣ್ಣಿನ ಬಗ್ಗೆ ಅಭಿಮಾನ ಇರುವುದು ನಿಜಕ್ಕೂ ಸಂತಸದ ವಿಚಾರ. ಜನರ ಅಭಿಮಾನ ಕಂಡು ಸಂತೋಷವಾಗುತ್ತಿದೆ. ನ್ಯೂಸ್ ಎಂದರೆ ಕೂಗಾಡುವುದು, ಕಿರುಚಾಡುವುದು ಎನ್ನುವ ಭಾವನೆ ಜನರಲ್ಲಿದೆ. ಆದರೆ ನ್ಯೂಸ್ ಫಸ್ಟ್‌ನಲ್ಲಿ ನ್ಯೂಸ್‌ನ್ನು ನ್ಯೂಸ್ ಆಗಿಯೇ ಪ್ರೆಸೆಂಟ್ ಮಾಡಲಾಗುತ್ತದೆ. ಇಡಿ ದಿನ ಹೊಸಹೊಸ ವರದಿಗಳು ಬರುತ್ತಿರುತ್ತವೆ.
– ಅರ್ಚನಾ ರವಿಕುಮಾರ್, ರವಿಕುಮಾರ್‌ರ ಪತ್ನಿ
ವಾಡಿಕೆ ಇರುವಂತೆ ಪುತ್ತೂರಿನ ಮಣ್ಣಿಗೆ ಯಾವುದೇ ಊರಿನವರು ಒಮ್ಮೆ ಕಾಲಿಟ್ಟರೆ ಮಹಾಲಿಂಗೇಶ್ವರ ಮತ್ತು ಉಳ್ಳಾಲ್ತಿಯ ದಯೆಯಲ್ಲಿ ಆ ಮಣ್ಣು ಮತ್ತೆ ಕರೆದುಕೊಂಡುಬರುತ್ತದೆ ಎನ್ನುವುದಕ್ಕೆ ಬಹಳಷ್ಟು ಇತಿಹಾಸಗಳಿವೆ. ಅವರ ಮೂಲಸಂಬಂಧ ಉದಯಗಿರಿಯ ಅನ್ನಪೂರ್ಣೇಶ್ವರಿಯ ಕ್ಷೇತ್ರ. ೯ ವರ್ಷಗಳ ಹಿಂದೆ ೮೦೦ ವರ್ಷಗಳ ಚರಿತ್ರೆ ಇರುವ ರಕ್ತೇಶ್ವರಿ ದೈವದ ನಡಾವಳಿಯನ್ನು ಮಾಡಿದ್ದೆವು. ಆಗ ಟಿವಿ೯ ವಾಹಿನಿಯಲ್ಲಿ ಪ್ರಧಾನ ಜವಾಬ್ದಾರಿಯಲ್ಲಿದ್ದ ರವಿಕುಮಾರ್ ಅವರು ಟಿವಿ9 ಮೂಲಕ ಇಡೀ ಪ್ರಪಂಚಕ್ಕೆ ತೋರಿಸಿದ್ದಾರೆ. ಅದೇ ಪ್ರೀತಿಯಲ್ಲಿ ನ್ಯೂಸ್ ಫಸ್ಟ್ ಆರಂಭಿಸುವಾಗ ಪುತ್ತೂರಿಗೆ ಬಂದಿದ್ದರು. ಅದರ ಫಲವನ್ನು ಪಡೆದುಕೊಂಡ ಪುಣ್ಯದಿಂದ ಮತ್ತೆ ಈ ಮಣ್ಣಿಗೆ ಬಂದಿದ್ದಾರೆ. ಪ್ರಧಾನವಾಗಿ ಅವರನ್ನು ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಕರೆಸಿದ ಉದ್ದೇಶ ಎಂದರೆ ಇವರಂತಹುದೇ ಹೋರಾಟ ಮಾಡಿ ಸಂಸ್ಥೆ ನಡೆಸುವ ಸುದ್ದಿಯ ಡಾ.ಯು.ಪಿ.ಶಿವಾನಂದರನ್ನು ಗೌರವಿಸುವ ಉದ್ದೇಶವಿತ್ತು. ಈ ನೆಲೆಯಲ್ಲಿ ದಂಪತಿಗಳಾಗಿ ಬಂದು ಭಾಗವಹಿಸಿದ್ದಾರೆ.
-ಪ್ರೀತಮ್ ಪುತ್ತೂರಾಯ, ಸಂಚಾಲಕರು, ಪುತ್ತೂರು ದಸರಾ ಮಹೋತ್ಸವ ಸಮಿತಿ
2020ರ ಸೆಪ್ಟೆಂಬರ್‌ನಲ್ಲಿ ನ್ಯೂಸ್-ಫಸ್ಟ್ ಚಾನೆಲ್ ಆರಂಭದ ಸಂದರ್ಭ ಕೋವಿಡ್ ಅವಧಿಯಾಗಿತ್ತು. ಆ ಸಂದರ್ಭದಲ್ಲಿ ಮಂಗಳೂರಿಗೆ ಆಗಮಿಸಿದ್ದಾಗ ಪ್ರೀತಂ ಪುತ್ತೂರಾಯರಿಗೆ ಕರೆ ಮಾಡಿ, ದೇವರ ದರ್ಶನ ಮಾಡುವ ಇಂಗಿತ ವ್ಯಕ್ತಪಡಿಸಿದ್ದೆ. ಈ ವೇಳೆ ಪ್ರೀತಮ್ ಪುತ್ತೂರಾಯರು ಪುತ್ತೂರು ಮಹಾಲಿಂಗೇಶ್ವರನ ದರ್ಶನ ಮಾಡಿಸಿ, ಪೂಜೆ ನೆರವೇರಿಸಿ ಸಂಸ್ಥೆಗೆ ಒಳ್ಳೆಯದಾಗುತ್ತದೆ ಎಂದು ಆಶೀರ್ವಾದ ಮಾಡಿದ್ದರು. 2022 ಸೆಪ್ಟೆಂಬರ್‌ಗೆ ಸಂಸ್ಥೆಯು ಎರಡು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪ್ರೀತಮ್ ಪುತ್ತೂರಾಯರು ಬೆಂಗಳೂರಿಗೆ ಬಂದು ಪುತ್ತೂರು ದಸರಾ ಉದ್ಘಾಟನೆಗೆ ಬರಬೇಕೆಂದು ಆಹ್ವಾನಿಸಿದ್ದರು. ಅದರಂತೆ ಪುತ್ತೂರು ದಸರಾಗೆ ಬಂದು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡೆ. ಪುತ್ತೂರು ಮಹಾಲಿಂಗೇಶ್ವರನ ದರ್ಶನ ಲಭಿಸುವ ಜೊತೆಗೆ ಅನ್ನಪೂರ್ಣೇಶ್ವರಿಯ ಆಶೀರ್ವಾದ ಲಭಿಸಿತು.
-ರವಿಕುಮಾರ್, ಸಿಇಒ, ನ್ಯೂಸ್ ಫಸ್ಟ್ ಚಾನೆಲ್
ಸುದ್ದಿಯು ಲಂಚ ಭ್ರಷ್ಟಾಚಾರದ ವಿರುದ್ಧ ಮಾಡುತ್ತಿರುವ ಆಂದೋಲನಕ್ಕೆ ಪೂರಕವಾಗಿ ಸರಕಾರ ಕೂಡ ಲಂಚ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕೆಂದು ಹೇಳುತ್ತಿರುವುದು ಉತ್ತಮ ವಿಚಾರ. ಕಚೇರಿಗಳಲ್ಲಿ ಈ ಬಗ್ಗೆ ಫಲಕ ಅಳವಡಿಕೆಯಾದಾಗ, ಭ್ರಷ್ಟಾಚಾರದ ವಿರುದ್ಧ ಪ್ರಶ್ನಿಸಲು ಜನತೆಗೆ ಕೂಡ ಶಕ್ತಿ ಬರುತ್ತದೆ. ಸುದ್ದಿಯು ಲಂಚ ತೆಗೆದುಕೊಳ್ಳುವವರು, ಭ್ರಷ್ಟಾಚಾರಿಗಳನ್ನು ಗುರುತಿಸುವ ಜೊತೆಗೆ ಉತ್ತಮ ಸೇವೆ ನೀಡುತ್ತಿರುವವರನ್ನೂ ಗುರುತಿಸುತ್ತಿದೆ. ಉತ್ತಮ ಕೆಲಸಗಾರರನ್ನು ಗುರುತಿಸಿದ್ದಕ್ಕೆ ಜನರು ಅಭಿನಂದನೆ ಸಲ್ಲಿಸಿದ್ದಾರೆ. ಹೀಗೆ ಮಾಡುವುದರಿಂದ ಭ್ರಷ್ಟಾಚಾರ ಮಾಡುವವರು ತಮ್ಮ ಕೃತ್ಯದಿಂದ ಹಿಂದಕ್ಕೆ ಸರಿಯಲಾರಂಭಿಸುತ್ತಾರೆ. ಕೆಲವೊಂದು ಅಽಕಾರಿಗಳು ನಮ್ಮವರನ್ನು ಕರೆದು, ‘ನಾನು ಲಂಚ ಭ್ರಷ್ಟಾಚಾರ ಮಾಡುತ್ತಿಲ್ಲ, ಉತ್ತಮ ಕೆಲಸ ಮಾಡುತ್ತಿದ್ದೇನೆ. ಇದನ್ನು ಜನರು ನಿಮಗೆ ಹೇಳುತ್ತಿಲ್ಲವೇ’ ಎಂದು ಕೇಳುತ್ತಿದ್ದಾರೆ. ಇನ್ನೊಂದು ಕಡೆಯಿಂದ ಮೊದಲು ಲಂಚ ತೆಗೆದುಕೊಳ್ಳುತ್ತಿದ್ದ ಕೆಲವರು ಈ ಆಂದೋಲನ ಆರಂಭಗೊಂಡ ಬಳಿಕ ಲಂಚ ತೆಗೆದುಕೊಳ್ಳುವುದನ್ನು ಬಿಟ್ಟುಬಿಟ್ಟಿದ್ದಾರೆ. ಜನರು ಈ ಆಂದೋಲನವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆರಂಭಿಸಿದ್ದಾರೆ.
-ಡಾ.ಯು.ಪಿ.ಶಿವಾನಂದ
ಪ್ರಸ್ತುತ ನ್ಯೂಸ್ ಫಸ್ಟ್ ಚಾನೆಲ್‌ನ ಸಿಇಒ ಆಗಿರುವ ರವಿಕುಮಾರ್ ಅವರು ಟಿವಿ ಚಾನೆಲ್ ಲೋಕದಲ್ಲಿ ಅಪಾರ ಜ್ಞಾನ ಹೊಂದಿರುವ ದೈತ್ಯ ಪ್ರತಿಭೆ. 2000ನೇ ಇಸವಿಯಲ್ಲಿ ಪ್ರಸಿದ್ಧ ವಾಹಿನಿ ಈಟಿವಿ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದವರು. ಕೆಲ ವರ್ಷಗಳ ಕಾಲ ಈಟಿವಿಯಲ್ಲಿ ಹೈದರಾಬಾದ್‌ನಲ್ಲಿ ಕೆಲಸ ಮಾಡಿ, ತಮ್ಮ ಕ್ಲಾಸ್‌ಮೇಟ್, ಗೆಳೆಯ ಮಾರುತಿ ಅವರೊಂದಿಗೆ ಹೊರಬಂದು ಕನ್ನಡ ಟಿವಿ ಚಾನೆಲ್ ಲೋಕದಲ್ಲಿ ಸಂಚಲನ ಎನ್ನುವಂತೆ ನ್ಯೂಸ್‌ಗಾಗಿಯೇ ಮೀಸಲಾದ ಚಾನೆಲ್ ಟಿವಿ9 ವಾಹಿನಿಯನ್ನು ಕಟ್ಟಿ ಬೆಳೆಸಿದವರು. 2006ರ ಮಾರ್ಚ್ 1ರಂದು ಟಿವಿ9 ಕನ್ನಡ ಸಂಸ್ಥೆ ಸೇರಿದ್ದ ಇವರಿಬ್ಬರು ಸುಮಾರು 12 ವರ್ಷಗಳ ಕಾಲ ಸಂಸ್ಥೆಯನ್ನು ಕಟ್ಟಿ ಬೆಳೆಸಿ ನಂ.1 ಸ್ಥಾನಕ್ಕೇರುವಂತೆ ಮಾಡಿದವರು. 2020ರಲ್ಲಿ ನ್ಯೂಸ್ ಫಸ್ಟ್ ಚಾನೆಲ್‌ನ್ನು ಆರಂಭಿಸಿ 2 ವರ್ಷದಲ್ಲಿ ಯಶಸ್ವಿಯಾಗಿ ಚಾನೆಲ್‌ನ್ನು ಮುನ್ನಡೆಸುತ್ತಿದ್ದಾರೆ.