ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಅಗ್ನಿಶಾಮಕ ದಳ ಪತ್ತೂರು ಇದರ ಸಹಭಾಗಿತ್ವದಲ್ಲಿ ಪುತ್ತೂರಿನಲ್ಲಿ ಪ್ರಾರಂಭಗೊಂಡ 60ನೇ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಮತ್ತು ಸ್ವಯಂಸೇವಕರಿಗೆ ಒಂದು ದಿನದ ಜೀವ ರಕ್ಷಕಾ ಕೌಶಲ್ಯ ತರಬೇತಿ ಕಾರ್ಯಾಗಾರವು ಸೆ.28ರಂದು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ ಮಾತನಾಡಿ, ಪ್ರತಿವರ್ಷ ವಿಪತ್ತು ಎದುರಿಸುತ್ತೇವೆ. ಅದು ಅನಿರೀಕ್ಷಿತವಾಗಿ ಬರುತ್ತದೆ. ಯಾರೂ ಅದಕ್ಕೆ ಸಿದ್ದತೆ ಮಾಡಿಕೊಂಡಿರುವುದಿಲ್ಲ, ಬಂದ ಮೇಲೆ ಅದರ ಪರಿಣಾಮ ಗೊತ್ತಾಗುವುದು. ಆ ಸಮಯದಲ್ಲಿ ಯಾವ ರೀತಿ ಎದುರಿಸಬೇಕು ಎಂದು ಯಾರಿಗೂ ಗೊತ್ತಿರುವುದಿಲ್ಲ. ಅದಕ್ಕಾಗಿ ವಿಪತ್ತು ತಂಡವನ್ನು ಸಿದ್ದಗೊಳಿಸಲಾಗುತ್ತಿದೆ. ಧರ್ಮಸ್ಥಳ ಯೋಜನೆಯಿಂದ ಅವರದ್ದೇ ಆದ ತಂಡ ರಚಿಸಿರುವುದು ಅಭಿನಂದನೀಯವಾಗಿದ ಎಂದರು. ತಾಲೂಕಿನ ಟಾಸ್ಕ್ ಪೋರ್ಸ್ ಜೊತೆ ಅವರು ಕೈ ಜೋಡಿಸಿ ಕೆಲಸ ಮಾಡಲಿದ್ದಾರೆ. ಈ ವರ್ಷ ಸುಳ್ಯದಲ್ಲಿ ವಿಪತ್ತನ್ನು ಎದುರಿಸಲಾಗಿದೆ. ವಿಪತ್ತು ಬಂದ ಸಂದರ್ಭದಲ್ಲಿ ಸ್ಥಳೀಯರಿಗೆ ರಕ್ಷಣೆ ಮಾಡುವ ಬಗ್ಗೆ ಅರಿವು ಇದ್ದರೆ ರಕ್ಷಣೆ ಸುಲಭ ಸಾಧ್ಯ. ಇದಕ್ಕಾಗಿ ಧರ್ಮಸ್ಥಳ ಯೋಜನೆಯ ವತಿಯಿಂದ ಎಲ್ಲಾ ರೀತಿಯಲ್ಲಿ ರಕ್ಷಣೆಯ ಬಗ್ಗೆ ತರಬೇತಿ ನೀಡಲಾಗುತ್ತಿದ್ದು ತಮ್ಮ ಏರಿಯಾದಲ್ಲಿ ವಿಪತ್ತು ಅನಾಹುತಗಳು ಸಂಭವಿಸಿದಾಗ ಜನರ ಜೀವ ರಕ್ಷಣೆಗೆ ಸಹಕಾರಿಯಾಗಲಿ ಎಂದರು.
ಮುಖ್ಯ ಅತಿಥಿ ಪೊಲೀಸ್ ಉಪ ಅಧೀಕ್ಷಕ ವೀರಯ್ಯ ಹಿರೇಮಠ್ ಮಾತನಾಡಿ, ವಿಪತ್ತಿನ ಸಂದರ್ಭದಲ್ಲಿ ಅಗ್ನಶಾಮಕ ಇಲಾಖೆಯವರು ಉತ್ತಮ ಕಾರ್ಯಮಾಡುತ್ತಿದ್ದಾರೆ. ಯಾರೂ ಅವರನ್ನು ಗುರುತಿಸುವುದಿಲ್ಲ. ವಿಪತ್ತು ನಿರ್ವಹಣೆಗೆ ಸಿದ್ದರಾಗಿರಬೇಕು. ಸರಕಾರ ತಂಡಗಳ ಜೊತೆಗೆ ಕೈ ಜೋಡಿಸಿದಾಗ ಹಾನಿಗಳನ್ನು ತೆಡೆಗಟ್ಟಲು ಸಾಧ್ಯವಿದೆ. ವಿಪತ್ತು ನಿರ್ವಹಣ ತಂಡವು ವಿಪತ್ತು ಸಂಭವಿಸಿದಾಗ ನಾವು ಅದಕ್ಕೆ ಸಿದ್ದರಿರಬೇಕು. ಉತ್ಸಾಹದಿಂದ ಕೆಲಸ ,ಮಾಡಬೇಕು. ಊಟ, ವಸತಿ ನೀಡುವ ಮೂಲಕ ಉತ್ತಮ ಕೆಲಸ ಮಾಡಲಿದಾರೆ. ಯಾವುದೇ ಫಲಾಪೇಕ್ಷೆಯಿಲ್ಲದ ಸ್ವಯಂಪ್ರೇರಿತವಾಗಿ ತೊಡಗಿಸಿಕೊಂಡು ಕೆಲಸ ಮಾಡುತ್ತಿರುವ ಸ್ವಯಂ ಸೇವಕರು ಸಮವಸ್ತ್ರ ಇಲ್ಲದ ಪೊಲೀಸರಂತೆ ಕೆಲಸ ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದರು.
ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಹಣಕಾಸಿನ ನೆರವು ಮಾತ್ರವೇ ಪರಿಹಾರವಲ್ಲ. ಜೊತೆಗೆ ಅಲ್ಲಿ ನೆರವಿಗೆ ಧಾವಿಸಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಇದಕ್ಕಾಗಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಸರಕಾರ ಜೊತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಕೈಜೋಡಿಸಲಿದೆ. ೨೦೨೦ರ ಜೂನ್‌ನಲ್ಲಿ ಇದಕ್ಕೆ ಚಾಲನೆ ನೀಡಲಾಗಿದ್ದು ಈಗಾಗಲೇ ೫೯ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ೬೦ನೇ ಘಟಕ ಪುತ್ತೂರಿನಲ್ಲಿ ಪ್ರಾರಂಭಗೊಂಡಿದೆ. ಮುಂದೆ ರಾಜ್ಯದಾದ್ಯಂತ ವಿಸ್ತರಿಸುವ ಯೋಜನೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರಲ್ಲಿದೆ. ಈಗಾಗಲೇ ಒಟ್ಟು ೮೨೦೦ ಸ್ವಯಂ ಸೇವಕರು ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ೨೦,೦೦೦ಸ್ವಯಂ ಸೇವಕರನ್ನು ನೋಂದಾಯಿಸಿಕೊಳ್ಳುವ ಗುರಿಯಿದೆ. ಪುತ್ತೂರಿನಲ್ಲಿ ಮಹಿಳೆ ಮತ್ತು ಪುರುಷರು ಸೇರಿದಂತೆ ಒಟ್ಟು ೧೮೦ಮಂದಿ ನೋಂದಾಯಿಸಿಕೊಂಡಿದ್ದಾರೆ. ಪ್ರತಿ ತಂಡಕ್ಕೆ ಜಾಕೆಟ್, ರೋಪ್ ಸೇರಿದಂತೆ ರೂ.೨ಲಕ್ಷದ ಮೌಲ್ಯ ಪರಿಕರಗಳನ್ನು ನೀಡಲಾಗುವುದು. ಸ್ವಯಂ ಸೇವಕಿಗೆ ಆರೋಗ್ಯ ರಕ್ಷಾ ವಿಮೆಯನ್ನು ನೀಡಲಾಗುವುದು ಎಂದು ವಿಪತ್ತು ನಿರ್ವಹಣಾ ವಿಭಾಗ ಯೋಜನಾಧಿಕಾರಿ ಜೈವಂತ್ ಪಟಗಾರ್ ತಿಳಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀನ್ ಕುಮಾರ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಅಧ್ಯಕ್ಷ ರಮೇಶ್ ಚಂದ್ರ, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ತಿಮ್ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಅಗ್ನಿ ಶಾಮಕ ಇಲಾಖೆಯ ಲೀಲಾಧರ ಹಾಗೂ ಶಂಕರ್ ರವರಿ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಚಿತ್ರ ಹಾಗೂ ಸುನೀತಾ ಪ್ರಾರ್ಥಿಸಿದರು. ಪುತ್ತೂರು ಕ್ಷೇತ್ರ ಯೋಜನಾಧಿಕಾರಿ ಆನಂದ ಕೆ ಸ್ವಾಗತಿಸಿದರು. ಉಮೇಶ್ ಕಾರ್ಯಕ್ರಮ ನಿರೂಪಿಸಿದರು.