ಪುತ್ತೂರು: ನರಿಮೊಗರು ಗ್ರಾ.ಪಂ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಸೆ.27ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ಭಾರತಿ ಜೆ.ಎರವರು ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಯೋಜನೆಯ ತಾಲೂಕು ಸಂಯೋಜಕ ಚಂದ್ರಶೇಖರ್ ಮಾತನಾಡಿ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಮತ್ತು ದೂರದೃಷ್ಟಿಯುಳ್ಳ ಕಾಮಗಾರಿಯಾಗಿರಬೇಕು ಎಂದು ಹೇಳಿದರು. ಸಭೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನರಿಮೊಗರು ಗ್ರಾ.ಪಂ ಪಿಡಿಓ ರವಿಚಂದ್ರ ಯು ಮಾತನಾಡಿ ಉದ್ಯೋಗ ಖಾತರಿ ಯೋಜನೆಯನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು, ಯಾವುದೇ ದುರ್ಬಳಕೆಗೆ ಇದರಲ್ಲಿ ಅವಕಾಶವಿಲ್ಲ. ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಈ ಯೋಜನೆ ಮೂಲಕ ಉತ್ತಮ ಕೆಲಸಗಳಾಗುತ್ತಿದೆ ಎಂದು ಅವರು ಹೇಳಿದರು. ಉದ್ಯೋಗ ಖಾತರಿ ಯೋಜನೆಯ ಸವಿತಾರವರು ಕಾಮಗಾರಿ ವಿವರ, ವೆಚ್ಚಗಳ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್, ಕಾರ್ಯದರ್ಶಿ ಶೇಖ್ ಖಲಂದರ್ ಅಲಿ, ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಇಂಜಿನಿಯರ್ ವಿನೋದ್ ಉಪಸ್ಥಿತರಿದ್ದರು.
ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ ನವೀನ್ ರೈ, ದಿನೇಶ, ಕೇಶವ, ಪುರಂದರ, ಹೊನ್ನಪ್ಪ ಪೂಜಾರಿ, ಉಮೇಶ್, ಪದ್ಮಾವತಿ, ಪುಷ್ಪಾವತಿ, ಮಲ್ಲಿಕಲತಾ, ಪುಷ್ಪಾ, ಬೇಬಿ, ವಸಂತಿ, ಚಿತ್ರಾ, ಹರಿಣಿ, ವಿಕಲಚೇತನ ಇಲಾಖೆ ಮೇಲ್ವಿಚಾರಕಿ ವೀರಮ್ಮ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮೋಹಿನಿ, ನರಿಮೊಗರು ಹಾಲು ಸೊಸೈಟಿಯ ಅಧ್ಯಕ್ಷ ಸುರೇಶ್ ಪ್ರಭು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿ ಮಾಧವ ಮತ್ತು ಇತರರು ಸಹಕರಿಸಿದರು.