ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯ ತೆರವಾಗಿದ್ದ ಒಂದನೇ ತನಿಖಾಧಿಕಾರಿಯ ಸ್ಥಾನಕ್ಕೆ ಮಂಗಳೂರು ಪಶ್ಚಿಮ ವಲಯ ಐಜಿಪಿರವರ ಕಚೇರಿಯಲ್ಲಿದ್ದ ಎಸ್.ಐ ರುಕ್ಮ ನಾಯ್ಕ ರವರನ್ನು ನೇಮಕಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ರವರು ಆದೇಶಿಸಿದ್ದಾರೆ.
1992ರಲ್ಲಿ ಮಂಗಳೂರಿನ ಸಂಚಾರ ಪೂರ್ವ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯಕ್ಕೆ ಹಾಜರಾದ ರುಕ್ಮ ನಾಯ್ಕರವರು ಆ ಬಳಿಕ ಪುತ್ತೂರು ಗ್ರಾಮಾಂತರ ಸುರತ್ಕಲ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲಿಂದ ಹೆಡ್ ಕಾನ್ಸ್ಟೇಬಲ್ ಆಗಿ ಭಡ್ತಿಹೊಂದಿ ಪೂಂಜಲಕಟ್ಟೆ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕೆಲಸ ನಿರ್ವಹಿಸಿದ್ದರು. ಆ ಬಳಿಕ ಎ ಎಸ್ ಐ ಆಗಿ ಭಡ್ತಿಹೊಂದಿ ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿಂದ ಎಸ್ ಐ ಆಗಿ ಭಡ್ತಿಗೊಂಡು ಕಡಬ, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬೆಳ್ಳಾರೆಯಿಂದ ಮಂಗಳೂರು ಪಶ್ಚಿಮ ವಲಯ ಐಜಿಪಿ ಕಚೇರಿಗೆ ವರ್ಗಾವಣೆಗೊಂಡಿದ್ದರು. ವಿಟ್ಲ ಪೊಲೀಸ್ ಠಾಣೆಯಲ್ಲಿ ಒಂದನೇ ತನಿಖಾಧಿಕಾರಿಯಾಗಿದ್ದ ಮಂಜುನಾಥರವರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ತೆರವಾಗಿದ್ದ ಅವರ ಸ್ಥಾನಕ್ಕೆ ರುಕ್ಮ ನಾಯ್ಕರವರನ್ನು ನಿಯೋಜನೆ ಮಾಡಲಾಗಿದೆ. ರುಕ್ಮ ನಾಯ್ಕರವರು ಮೂಲತಃ ಬಂಟ್ವಾಳ ತಾಲೂಕಿನವರಾಗಿದ್ದು ಇದೀಗ ಪುತ್ತೂರು ತಾಲೂಕಿನ ಕೋಡಿಂಬಾಡಿಯಲ್ಲಿ ಪತ್ನಿ ಲಕ್ಷ್ಮೀ, ಪುತ್ರ ಕೆನರಾ ಬ್ಯಾಂಕ್ ಉದ್ಯೋಗಿ ರೋಹಿತ್ ಕುಮಾರ್, ಪುತ್ರಿ ಮಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಲತಾಶ್ರೀ ರವರೊಂದಿಗೆ ವಾಸವಾಗಿದ್ದಾರೆ.
ಈ ಹಿಂದೆ ಪುತ್ತೂರು ನಗರ ಠಾಣೆ ಬಳಿಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿ ಮಂಗಳೂರಿನಲ್ಲಿರುವ ಐಜಿ ಕಚೇರಿಗೆ ವರ್ಗಾವಣೆಗೊಂಡಿದ್ದ ಜಂಬೂ ರಾಜ್ ಮಹಜನ್ ರವರನ್ನು ದ.ಕ.ಜಿಲ್ಲಾ ಸಿಇಎನ್ ಠಾಣೆಯ ಎಸ್.ಐ. ಆಗಿ ವರ್ಗಾವಣೆ ಗೊಳಿಸಲಾಗಿದೆ. ಈ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಐ. ಆಗಿದ್ದ ಕುಮಾರ್ ಸಿ.ಕಾಂಬ್ಲೆ ರವರನ್ನು ದ.ಕ.ಜಿಲ್ಲಾ ಡಿ.ಸಿ.ಆರ್.ಬಿ ಘಟಕದ ಎಸ್.ಐ. ಆಗಿ ವರ್ಗಾವಣೆ ಗೊಳಿಸಲಾಗಿದೆ.