ಫಿಲೋಮಿನಾ ಪಿಯು ಕಾಲೇಜಿನಲ್ಲಿ ರೋವರ್ಸ್, ರೇಂಜರ್ಸ್ ಘಟಕ ಉದ್ಘಾಟನೆ

0

  • ಅವಕಾಶಗಳನ್ನು ಧನಾತ್ಮಕವಾಗಿ ಬಳಸಿ ಭವಿಷ್ಯ ಕಂಡುಕೊಳ್ಳಿ-ಸುನೀತಾ ಎಂ

ಪುತ್ತೂರು: ಕಾರ್ಯಕ್ರಮವು ದೀಪ ಹಚ್ಚುವ ಮೂಲಕ ರೋವರ್‍ಸ್ ರೇಂಜರ್‍ಸ್ ಘಟಕವು ಪುನಶ್ಚೇತನಗೊಂಡಿದೆ. ಈ ಘಟಕದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತಾಗಬೇಕು. ಮಾತ್ರವಲ್ಲದೆ ಸಿಕ್ಕಿದ ಅವಕಾಶಗಳನ್ನು ಧನಾತ್ಮಕವಾಗಿ ಬಳಸಿಕೊಂಡು ಭವಿಷ್ಯದಲ್ಲಿ ಉತ್ತಮ ಜೀವನವನ್ನು ಕಂಡುಕೊಳ್ಳುವಂತಾಗಬೇಕು ಎಂದು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಸ್ಕೌಟ್ ಮತ್ತು ಗೈಡ್ಸ್‌ನ ಟೀಮ್ ಲೀಡರ್ ಆಗಿರುವ ಶ್ರೀಮತಿ ಸುನೀತಾ ಎಂ.ರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಫಿಲೋ ರೋವರ್‍ಸ್ ಮತ್ತು ರೇಂಜರ್‍ಸ್ ಘಟಕದ ಉದ್ಘಾಟನೆ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ರೋವರ್‍ಸ್ ಮತ್ತು ರೇಂಜರ್‍ಸ್ ಘಟಕದ ಅಧ್ಯಕ್ಷ ಹಾಗೂ ಹಿಮಾಲಯನ್ ವುಡ್ ಬ್ಯಾಡ್ಜ್ ರೋವರ್‍ಸ್ ಸ್ಕೌಟ್ ಲೀಡರ್ ಪ್ರೀತೇಶ್ ಮಂಗಳೂರು ಮಾತನಾಡಿ, ಜೀವನ ಕೌಶಲವನ್ನು ಹೊಂದಿರುವ ರೋವರ್‍ಸ್ ರೇಂಜರ್‍ಸ್ ಎಂಬುದು ಅಂತರ್ರಾಷ್ಟ್ರೀಯ ಮಟ್ಟದ ಯೂತ್ ಮೂವ್‌ಮೆಂಟ್ ಆಗಿರುತ್ತದೆ. ಇಂತಹ ಘಟಕದಲ್ಲಿ ಭಾಗವಹಿಸುವವರಿಗೆ ಭವಿಷ್ಯದಲ್ಲಿ ಕೇಂದ್ರ ಸರಕಾರಿ ಉದ್ಯೋಗ ಸಿಗುವ ಅವಕಾಶವಿದೆ. ರೋವರ್‍ಸ್ ರೇಂಜರ್‍ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಮನೆಯಲ್ಲಿಯೇ ಕಾರ್ಯಕ್ರಮವೊಂದನ್ನು ಆಯೋಜಿಸಿ ಪ್ರಮಾಣಪತ್ರ ವಿತರಿಸುವುದು ವಾಡಿಕೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ತಾನು ಆರನೇ ತರಗತಿಯಲ್ಲಿರುವಾಗಲೇ ರೋವರ್‍ಸ್ ರೇಂಜರ್‍ಸ್ ಘಟಕದ ಬಗ್ಗೆ ಬಲ್ಲವನಾಗಿದ್ದೇನೆ. ರೋವರ್‍ಸ್ ರೇಂಜರ್‍ಸ್ ಘಟಕದ ಮುಖ್ಯ ಉದ್ಧೇಶ ಸೇವೆ ಆಗಿದ್ದು ವಿದ್ಯಾರ್ಥಿಗಳು ಸಮಾಜದಲ್ಲಿ ಸೇವೆ ನೀಡುವ ಮನೋಭಾವವುಳ್ಳವವರಾದಾಗ ಸ್ವಯಂ ಅಭಿವೃದ್ಧಿಯಾಗುವುದು ಜೊತೆಗೆ ಪೂರ್ಣಪ್ರಮಾಣದ ಸಮಗ್ರತೆಯೊಂದಿಗೆ ಶಾರೀರಿಕ ದೃಢತೆ, ಆಧ್ಯಾತ್ಮಿಕತೆ ಹಾಗೂ ಭಾವಾನಾತ್ಮಕತೆ ವೃದ್ಧಿಯೊಂದಿಗೆ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವಂತಾಗಬೇಕು ಎಂದರು.

ಪ್ರಮಾಣಪತ್ರ ವಿತರಣೆ:
ರೋವರ್‍ಸ್‌ನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಮೊಹಮದ್ ಅಝೀಝ್, ವಿನೀತ್, ರಂಜಿತ್ ಕುಮಾರ್, ಸುಶ್ಮಿತ್, ಶಾಶ್ವತ್, ರೇಂಜರ್‍ಸ್‌ನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಸಂಜನಾ ಜೆ.ರಾವ್, ರೇಂಜರ್ ಲೀಡರ್ ಮುನಾಜಾ ಬೇಗಂ ಹಾಗೂ ಇತ್ತೀಚೆಗೆ ಬಾಲವನ ಈಜುಕೊಳದಲ್ಲಿ ನಡೆದ ಅಂತರ್-ಕಾಲೇಜು ಈಜು ಸ್ಪರ್ಧೆಯಲ್ಲಿ ಸಹಕರಿಸಿದ ವಿದ್ಯಾರ್ಥಿಗಳಾದ ರಂಜಿತ್ ಕುಮಾರ್, ಸುಶ್ಮಿತ್, ತೀರ್ಥೇಶ್, ಸಾತ್ವಿಕ್ ರೈ, ರೋವರ್ ಲೀಡರ್ ಶಾಶ್ವತ್ ಚೌಟ, ಕಿರಣ್‌ರವರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ರೋವರ್‍ಸ್ ಮತ್ತು ರೇಂಜರ್‍ಸ್ ಘಟಕದ ಸಂಯೋಜಕರಾದ ಶರತ್ ಆಳ್ವ ಚನಿಲ ಹಾಗೂ ಪೂರ್ಣಿಮಾ ಡಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಶಿತಾ ಮತ್ತು ಬಳಗ ಪ್ರಾರ್ಥಿಸಿದರು. ರೋವರ್ ಮೊಹಮದ್ ಅಝೀಝ್ ಸ್ವಾಗತಿಸಿ, ರೇಂಜರ್ ಪೂರ್ವಿ ವಂದಿಸಿದರು. ರೇಂಜರ್ ಸಂಜನಾ ಜೆ.ರಾವ್ ಕಾರ್ಯಕ್ರಮ ನಿರೂಪಿಸಿದರು.

ದ.ಕ ಜಿಲ್ಲೆಯಲ್ಲಿ ಸಾಂಸ್ಕೃತಿಕ ಜಾಂಬೂರಿ…
ರೋವರ್‍ಸ್ ರೇಂಜರ್‍ಸ್‌ನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವವರಿಗೆ ರಾಜ್ಯ ಹಾಗೂ ರಾಷ್ಟ್ರ ಪುರಸ್ಕಾರಗಳು ಲಭಿಸುವ ಅವಕಾಶಗಳಿವೆ. ರಾಜ್ಯ ಪುರಸ್ಕಾರ ಪಡೆದುಕೊಂಡವರಿಗೆ ಸ್ನಾತಕೋತ್ತರ ಅಧ್ಯಯನ ಮಾಡಲು ಮತ್ತು ರಾಷ್ಟ್ರಪತಿ ಪುರಸ್ಕಾರ ಪಡೆದುಕೊಂಡವರಿಗೆ ವೈದ್ಯಕೀಯದಲ್ಲಿ ಸೀಟ್ ಹೊಂದಲು ಪ್ರಥಮ ಆದ್ಯತೆಯ ಮೂಲಕ ಪರಿಣಾಮಕಾರಿಯಾಗಿ ಪರಿಣಮಿಸಿದೆ. ರೋವರ್‍ಸ್ ರೇಂಜರ್‍ಸ್‌ನಲ್ಲಿ ಕೇವಲ ರಾಷ್ಟ್ರಮಟ್ಟವಲ್ಲ ಬದಲಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳಲು ಅವಕಾಶವೊಂದು ತೆರೆದುಕೊಂಡಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಮೂಡಬಿದ್ರೆ ಶಾಲೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಪ್ರಥಮವಾಗಿ ಸಾಂಸ್ಕೃತಿಕ ಜಾಂಬೂರಿ ಆಗಮಿಸುತ್ತಿದ್ದು, ಘಟಕದ ವಿದ್ಯಾರ್ಥಿಗಳು ಹೆಚ್ಚೆಚ್ಚು ಭಾಗವಹಿಸುವಂತಾಗಬೇಕು -ಸುನೀತಾ ಎಂ, ದೈಹಿಕ ಶಿಕ್ಷಣ ಶಿಕ್ಷಕಿ, ಶ್ರೀ ರಾಮಕೃಷ್ಣ ಪ್ರೌಢಶಾಲೆ

LEAVE A REPLY

Please enter your comment!
Please enter your name here