ಸಮಾಜದಲ್ಲಿ ಸಾತ್ವಿಕ ಮನಸ್ಸುಗಳು ಹೆಚ್ಚಾಗಲು ಸಾಹಿತ್ಯ: ಸಾಹಿತಿ ರವಿ ಇಡ್ಕಿದು

ಪುತ್ತೂರು: ಕವಿಗೋಷ್ಠಿಯಲ್ಲಿ ಯುವ ಪ್ರತಿಭೆಗಳು ಭಾಗವಹಿಸುತ್ತಿದ್ದು ಇವರನ್ನು ಪ್ರೋತ್ಸಾಹಿಸುವ ಮೂಲಕ ಸಾಹಿತ್ಯ ಸುಗಮವಾಗಿ ಬೆಳೆಯುವಂತೆ ಮಾಡಬೇಕಿದೆ. ಕವಿ ಮನಸ್ಸುಗಳ್ಳು ಹೆಚ್ಚಾದಲ್ಲಿ ಮನುಷ್ಯ ಮನುಷ್ಯನ ನಡುವಿನ ಪ್ರೀತಿ ವೃದ್ಧಿಸುತ್ತದೆ. ಇದರಿಂದ ಸಮಾಜದಲ್ಲಿ ಸಾತ್ವಿಕ ಮನಸ್ಸುಗಳು ಹೆಚ್ಚಾಗುತ್ತವೆ ಎಂದು ಸಾಹಿತಿ ರವಿ ಇಡ್ಕಿದು ಹೇಳಿದರು.


ಅವರು ನಗರದ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾವನದಲ್ಲಿರುವ ಲಲಿತಾಂಬಿಕಾ ವೇದಿಕೆಯಲ್ಲಿ 21ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುತ್ತೂರು ಭಾಗ ಸಾಹಿತ್ಯಕ್ಕೆ ಪೂರಕವಾದ ವಾತಾವರಣ ನಿರ್ಮಿಸಿದೆ. ಇಂತಹ ಪರಿಸರದಲ್ಲಿ ಕವಿಗೋಷ್ಠಿಗಳು ನಿರಂತರವಾಗಿ ನಡೆಯುತ್ತಿವೆ. ಇದನ್ನು ಯುವಜನತೆ ಸಮರ್ಪಕವಾಗಿ ಬಳಸಿಕೊಂಡು ಸಾಹಿತ್ಯ ಕ್ಷೇತ್ರ ತೊಡಗಿಸಿಕೊಳ್ಳಬೇಕು. ಮುಕ್ತವಾಗಿ ಚಿಂತನೆ ಮಾಡಿದಾಗ, ಸಾಹಿತ್ಯವನ್ನು ನಿರ್ಮಿಸುವ ಅವಕಾಶಗಳು ದೊರೆತಾಗ ಯೋಗ್ಯವಾದ ಸಾಹಿತ್ಯದ ರಚನೆಯಾಗುತ್ತದೆ ಎಂದರು.
ಪದಕ್ಕೆ ಪದ ಜೊತೆಯಾದಾಗ ಪರಿಪೂರ್ಣ ಕವಿತೆಯಾಗುವುದಿಲ್ಲ. ಅನುಭವಗಳನ್ನು ಮತ್ತು ಭಾವನೆಗಳನ್ನು ಅಚ್ಚುಕಟ್ಟಾಗಿ ಪದಗಳ ಮೂಲಕ ಪೋಣಿಸಿದಾಗ ಸುಂದರ ಕವಿತೆ ರಚನೆಯಾಗುತ್ತದೆ. ಇನ್ನೊಬ್ಬರನ್ನು ಅನುಕರಿಸದೆ, ನಮ್ಮತನದಲ್ಲಿ ಸಾಹಿತ್ಯವನ್ನು ಬರೆಯಬೇಕು. ಅಂತಹದ್ದು ಜನರನ್ನು ಸೆಳೆಯುತ್ತದೆ ಹಾಗೂ ಕವಿಗೆ ಯಶಸ್ಸನ್ನು ತಂದು ಕೊಡುತ್ತದೆ ಎಂದರು.
ಕವಿಗಳು ಕಾಲದ ಜೊತೆಗೆ ಸ್ಪಂದನೆ, ಆಲೋಚನೆ ಇಟ್ಟುಕೊಂಡಾಗ ಕವಿತೆ ಪರಿಣಾಮಕಾರಿಯಾಗಿ ಮೂಡುತ್ತದೆ. ಸಾಮಾನ್ಯ ಜನರನ್ನೂ ಕವಿತೆಯ ಮೂಲಕ ವಿಚಾರಗಳು ತಲುಪಿದಾಗ ಸಾರ್ಥಕ್ಯತೆ ಪಡೆಯುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಸಾಹಿತಿಗಳಾದ ರಾಜಾರಾಮ ವರ್ಮ ವಿಟ್ಲ, ಸುಲೋಚನ ಪಿ.ಕೆ, ಶಶಿಕಲಾ ವರ್ಕಾಡಿ, ಮಲ್ಲಿಕಾ ಜೆ ರೈ, ಅನ್ನಪೂರ್ಣ ಕುತ್ತಾಜೆ, ಹರಿಣಾಕ್ಷಿ, ಅಪೂರ್ವ ಕಾರಂತ ಎನ್. ಹಾಗೂ ಯುವ ಸಾಹಿತಿಗಳಾದ ಪುತ್ತೂರು ವಿವೇಕಾನಂದ ಕಾಲೇಜಿನ ಅನ್ನಪೂರ್ಣ ಕುತ್ತಾಜೆ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಜೀವನ್ ಕೆ. ಹಾಗೂ ಸ್ಮಿತಾ ಎಸ್.ರೈ, ಅಂಬಿಕಾ ಮಹಾವಿದ್ಯಾಲಯದ ಶೇಖರ ಎಂ., ಜಯಶ್ರೀ, ಬೆಟ್ಟಂಪಾಡಿ ಕಾಲೇಜಿನ ಮುಹಮ್ಮದ್ ಸಿಂಸಾರುಲ್ ಹಖ್ ಹಾಗೂ ಸಾರ್ಥಕ್ ಕವಿತೆ ವಾಚಿಸಿದರು.
ಶ್ರೀಪತಿ ಭಟ್ ಬಿ ಸ್ವಾಗತಿಸಿ, ಯಶಸ್ವಿನಿ ವಂದಿಸಿದರು. ಡಾ ವಿಜಯಕುಮಾರ ಮೊಳೆಯಾರ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.