ಸಂಜೀವಿನಿ ಒಕ್ಕೂಟದ ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಸರಕಾರದಿಂದ ಮಾನ್ಯತೆ : ಇಒ ನವೀನ್ ಭಂಡಾರಿ
ಪುತ್ತೂರು: ಪ್ರತಿ ಗ್ರಾ.ಪಂ.ಗಳಲ್ಲಿ ಸಂಜೀವಿನಿ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸರಕಾರದ ಆಹಾರ ಸುರಕ್ಷಾ ಮತ್ತು ಗುಣಮಟ್ಟ ಪ್ರಮಾಣ ಪತ್ರ ಹಾಗೂ ಅತೀ ಸಣ್ಣ, ಸಣ್ಣ, ಮಧ್ಯಮ ಉದ್ಯಮ ಪ್ರಮಾಣ ಪತ್ರದ ಮಾನ್ಯತೆ ಅಗತ್ಯವಿದೆ. ಉತ್ಪನ್ನದ ಬ್ಯ್ರಾಂಡಿಂಗ್ ಮತ್ತು ಲೇಬಲಿಂಗ್ ಮಾಡುವುದು ಅತ್ಯಂತ ಮುಖ್ಯ ಘಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸರಕಾರದ ಮಟ್ಟದಲ್ಲಿ ಇಂದು ಸಂಜೀವಿನಿ ಮಹಿಳೆಯರಿಗೆ ನೋಂದಣಿ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದರು.
ಸೆ.30ರಂದು ಪುತ್ತೂರು ತಾ.ಪಂ. ಸಭಾಂಗಣದಲ್ಲಿ ದ.ಕ.ಜಿ.ಪಂ. ಮಂಗಳೂರು, ತಾಲೂಕು ಪಂಚಾಯತ್ ಪುತ್ತೂರು, ಎನ್ಆರ್ಎಲ್ಎಂ ಯೋಜನೆ, ಪ್ರಾಜೆಕ್ಟ್ ಕೋಡ್ ಉನ್ನತಿ ಸಹಭಾಗಿತ್ವದಲ್ಲಿ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಆಹಾರೋತ್ಪನ್ನಗಳಿಗೆ ಆಹಾರ ಸುರಕ್ಷಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಪ್ರಮಾಣ ಪತ್ರ ನೋಂದಣಿ ಹಾಗೂ ಎಂಎಸ್ಎಂಇ (ಅತೀ ಸಣ್ಣ, ಸಣ್ಣ, ಮಧ್ಯಮ ಉದ್ಯಮ) ಪ್ರಮಾಣ ಪತ್ರ ನೋಂದಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರ ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯ ಹಾಗೂ ಸ್ವ ಉದ್ಯೋಗವನ್ನು ನಡೆಸಲು ಎನ್ಆರ್ಎಲ್ಎಂ ಯೋಜನೆಯಡಿ ಬಂಡವಾಳವನ್ನು ನೀಡುತ್ತಿದೆ. ಇದರೊಂದಿಗೆ ಗೃಹ ಉತ್ಪನ್ನ, ಆಹಾರ ತಯಾರಿಕೆ ಹೀಗೆ ಹಲವು ಉದ್ಯಮಗಳನ್ನು ಈಗಾಗಲೇ ಹಲವು ಸಂಜೀವಿನಿ ಒಕ್ಕೂಟಗಳು ಆರಂಭಿಸಿವೆ. ಇವುಗಳಿಗೆ ಸರಕಾರದಿಂದ ಮಾನ್ಯತೆ ಪಡೆದರಷ್ಟೇ ಮಾರಾಟಮಾಡಲು ಸಾಧ್ಯ ಈ ನಿಟ್ಟಿನಲ್ಲಿ ಇಂದು ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾರ್ಗದರ್ಶನ ಮತ್ತು ನೋಂದಣಿಯನ್ನು ಮಾಡಲಾಗಿದೆ ಎಂದು ಹೇಳಿದರು.
ಎಂಎಸ್ಎಂಇ ಇಲಾಖೆಯ ಮಂಗಳೂರು ವಿಭಾಗದ ಸಹಾಯಕ ನಿರ್ದೇಶಕಿ ಸುಮತಿ ಎಸ್. ರಾಜು ಅವರು ಎಂಎಸ್ಎಂಇ ಪ್ರಮಾಣ ಪತ್ರ ನೋಂದಾಯಿಸುವ ಬಗ್ಗೆ ಮಾಹಿತಿಯನ್ನು ನೀಡಿ ಪ್ರಮಾಣ ಪತ್ರ ವಿತರಿಸಿದರು.
ಎಫ್ಎಸ್ಎಸ್ಎಐ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್, ಆಹಾರ ಸುರಕ್ಷತೆ, ಗುಣಮಟ್ಟದ ಬಗ್ಗೆ ಮಹಿಳಾ ಉದ್ಯಮಿಗಳಿಗೆ ಮಾಹಿತಿಯನ್ನು ನೀಡಿದರು.
ಯುಎನ್ಡಿಪಿ ಪ್ರಾಜೆಕ್ಟ್ನ ಉಮೇಶ್ ಮತ್ತು ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರಿಗೆ ನೋಂದಣಿಯನ್ನು ಮಾಡಿದರು.
ಈ ಸಂದರ್ಭದಲ್ಲಿ ಎನ್ಆರ್ಎಲ್ಎಂ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ. ಉಪಸ್ಥಿತರಿದ್ದರು.
ಕಡಬ, ಪುತ್ತೂರು, ಸುಳ್ಯ ತಾಲೂಕಿನ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸ್ವಸಹಾಯ ಸಂಘದ ಸುಮಾರು ೫೦ ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು. ಅದರಲ್ಲಿ ೩೦ ಉದ್ಯಮಿಗಳ ನೋಂದಣಿ ಮಾಡಲಾಯಿತು. ತಾಲೂಕು ಸಂಪನ್ಮೂಲ ವ್ಯಕ್ತಿ (ಉದ್ಯಮಶೀಲ ಉತ್ತೇಜನ) ಅಂಕಿತಾ, ಲೂಸಿ ವಿಕ್ಟರ್, ವಲಯ ಮೇಲ್ವಿಚಾರಕಿ ನಮಿತ ವಂದಿಸಿದರು.