





ಪುತ್ತೂರು: ಕೇಂದ್ರ ಸರಕಾರ ಹಿಂಪಡೆದ ಮೂರು ಕೃಷಿ ಕಾಯಿದೆಗಳನ್ನು ರಾಜ್ಯ ಸರಕಾರ ಹಿಂಪಡೆಯಬೇಕು. ವಿದ್ಯುತ್ ಖಾಸಗೀಕರಣ ಕೈಬಿಡಬೇಕು, ಭೂತಾನ್‌ನಿಂದ ಅಡಿಕೆ ಆಮದು ಸ್ಥಗಿತಗೊಳಿಸಬೇಕು ಹಾಗೂ ಶೀಘ್ರ ಸರ್ವೆ ನಡೆಸಿ ಪೋಡಿ ಮುಕ್ತ ಗ್ರಾಮ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ ಜಿಲ್ಲಾ ಸಮಿತಿಯವರು ಅ.1ರಂದು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.








ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ , ಈ ಬಾರಿಯ ಅಧಿಕ ಮಳೆಯಿಂದಾಗಿ ಶೇ.60ಕ್ಕಿಂತೂ ಅಧಿಕ ಕೊಳೆ ರೋಗದಲ್ಲಿ ಹಾನಿಯಾಗಿದೆ. ಇದಕ್ಕೆ ಶೀಘ್ರ ಪರಿಹಾರ ನೀಡಬೇಕು. ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆಗಳು ಈ ಬಗ್ಗೆ ಗಮನ ಹರಿಸಿಲ್ಲ. ನಮ್ಮ ತೆರಿಗೆಯಲ್ಲಿ ಅವರಿಗೆ ಸಂಬಳ ಬರುತ್ತಿದೆ. ಅಧಿಕಾರಿಗಳು ನಮ್ಮ ಸಿಬ್ಬಂಧಿ ಎನ್ನುವುದು ನೆನಪಿನಲ್ಲಿ ಇರಬೇಕು. ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯ ಸರಕಾರ 300ಕೋಟಿ ಬಿಡುಗಡೆ ಮಾಡಿದ್ದು ಕೊಳೆರೋಗಕ್ಕೆ ಪರಿಹಾರ ನೀಡಲು ಜಿಲ್ಲೆಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಾವು ರಾಜ್ಯದಾದ್ಯಂತ ಹೋರಾಟ ಮಾಡುವುದಲ್ಲದೆ, ಜಿಲ್ಲಾಧಿಕಾರಿಗಳ ಕಚೇರಿಗೂ ಮುತ್ತಿಗೆ ಹಾಕವ ಕೆಲಸಕ್ಕೂ ನಾವು ಸಿದ್ದ. ಕೇಂದ್ರ ಸರಕಾರ ರೈತ ವಿರೋಧಿ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆದುಕೊಂಡಿದೆ. ಆದರೆ ರಾಜ್ಯ ಸರಕಾರ ಹಿಂಪಡೆದುಕೊಂಡಿಲ್ಲ. ಮುಖ್ಯಮಂತ್ರಿಗಳಿಗೆ ತಾಕತ್ತಿದ್ದರೆ, ಧಮ್ ಇದ್ದರೆ ಹಿಂಪಡೆದುಕೊಳ್ಳಬೇಕು ಎಂದು ಸವಾಲು ಹಾಕಿದರು.

ಶಾಸಕರಿಗೆ ಬಾಯಿ ಬರುತ್ತಿಲ್ಲ:
ಜಿಲ್ಲೆಯ ಯಾವುದೇ ಶಾಸಕರಿಗೆ ಬಾಯಿ ಬರುತ್ತಿಲ್ಲ. ಅವರು ರೈತರ ಸಮಸ್ಯೆಗ ಬಗ್ಗೆ ಮಾತನಾಡುತ್ತಿಲ್ಲ. ಜ್ವಲಂತ ಸಮಸ್ಯೆಗಳ ಬಗ್ಗೆ ಮಾತೇ ಆಡುತ್ತಿಲ್ಲ. ಬೇರ ವಿಷಯಗಳ ಬಗ್ಗೆ ಮಾತ್ರ ಅವರು ಮಾತನಾಡುವುದು. ಸಂಸದರೂ ಮಾತನಾಡುತ್ತಿಲ್ಲ. ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರಕಾರ ಮುಂದಾಗಿದ್ದು ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರರವರು ತಮ್ಮ ತಪ್ಪನ್ನು ಮುಚ್ಚಿ ಹಾಕಲು ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಧನಕೀರ್ತಿ ಬಳಿಪ ಮಾತನಾಡಿ, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ ಕೇಂದ್ರ ಸರ್ಕಾರ ಈಗ ರಾಸಾಯನಿಕ ಗೊಬ್ಬರ ಹಾಗೂ ಯಂತ್ರೋಪಕರಣಗಳು, ಅದರ ಬಿಡಿ ಭಾಗಗಳ ಮೇಲೆ ಶೇ.13 ಜಿಎಸ್ಟಿ ಹಾಕಿ ರೈತರನ್ನು ದೋಚುತ್ತಿದ್ದಾರೆ. ಪ್ಲಾಟಿಂಗ್ ಪೋಡಿ ಮುಕ್ತ ಗ್ರಾಮ ಆಗುತ್ತಿಲ್ಲ. ಅಧಿಕಾರಿಗಳು ಕಚೇರಿಯ ಒಳಗೆ ಕುಳಿತು ಬೆಲೆ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಸವಣೂರು ವಲಯದ ಗೌರವಾಧ್ಯಕ್ಷ ಶಿವಣ್ಣ ಗೌಡ ಇಡ್ಯಾಡಿ ಮಾತನಾಡಿ, ರಸಗೊಬ್ಬರಗಳ ದರ ಏರಿಕೆ ಮಾಡಿರುವುದೇ ಸರಕಾರ ರೈತರಿಗೆ ನೀಡಿದ ಕೊಡುಗೆಯಾಗಿದೆ. ಅಡಿಕೆಗೆ ಬೆಂಬಲ ಬೆಲೆಗಾಗಿ ಪಾದಯಾತ್ರೆ ನಡೆಸಿದ ಡಿ.ವಿ ಸದಾನಂದ ಗೌಡ ದೇಶದ ದೊರೆಯಾಗಿ ಆಡಳಿತ ನಡೆಸಿದ್ದು ಮಾತ್ರ. ನಮ್ಮನ್ನು ಮಂಗ ಮಾಡಿದ್ದಾರೆ. ಶಾಸಕ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಡಿ.ವಿ ಸದಾನಂದ ಗೌಡ ಸ್ವತಃ ಅಡಿಕೆ ಬೆಳೆಗಾರರೇ ಆಗಿದ್ದರೂ ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಮಾತನಾಡದ ಅವರ ಬಾಯಿಗೆ ಬೀಗ ಹಾಕಿದ್ದಾರಾ? ಸಂಸತ್ತಿನಲ್ಲಿ, ವಿಧಾನ ಸಭೆಯಲ್ಲಿ ಮಾತನಾಡದ ಅವರು ಆ ಸೀಟಿನಲ್ಲಿರುವುದು ಯಾಕೆ ಎಂದು ಅವರು ಪ್ರಶ್ನಿಸಿದರು.

ಹಿರಿಯ ಸದಸ್ಯ ಮುರುವ ಮಹಾಬಲ ಭಟ್ ಮಾತನಾಡಿ, ಉಚಿತ ಯೋಜನೆಗಳು, ಸಬ್ಸಿಡಿಗಳು ಹೇಳಿಕೆಯಲ್ಲಿ ಮಾತ್ರ. ಕೃಷಿಗೆ ಸಂಬಂಧಿಸಿದ ಪರಿಕರಗಳು, ಗೊಬ್ಬರಗಳ ಬೆಲೆ ದುಪ್ಪಟ್ಟು ಮಾಡಿದ್ದಾರೆ. ರೈತರ ಆತ್ಮಹತ್ಯೆಗಳು ನಡೆಯುತ್ತಿದೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಬಡಿಲ, ಹೊನ್ನಪ್ಪ ಗೌಡ, ವಿಟ್ಲ ತಾಲೂಕು ಕಾರ್ಯದರ್ಶಿ ಸುದೇಶ್ ಭಂಡಾರಿ, ವಿಟ್ಲ 400 ಕೆವಿ ವಿರುದ್ಧ ಹೋರಾಟ ಸಮಿತಿ ರಾಜೀವ್ ಗೌಡ, ಬಂಟ್ವಾಳ ತಾಲೂಕು ಕಾರ್ಯದರ್ಶಿ ಇದಿನಬ್ಬ, ಕುಂಬ್ರ ವಲಯಾಧ್ಯಕ್ಷ ಶೇಖರ್ ರೈ, ಸವಣೂರು ವಲಯಾಧ್ಯಕ್ಷ ಯತೀಶ್ ರೈ, ಪುಣಚ ವಲಯಾಧ್ಯಕ್ಷ ಇಸುಬು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಬಳಿಕ ಸಹಾಯಕ ಆಯುಕ್ತ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮೆರವಣಿಗೆ:
ಪ್ರತಿಭಟನೆಯ ಪ್ರಾರಂಭದಲ್ಲಿ ರೈತ ಸಂಘದ ಕಚೇರಿಯ ಬಳಿಯಿಂದ ಸಹಾಯಕ ಆಯುಕ್ತರ ಕಚೇರಿ ತನಕ ಮೆರವಣಿಗೆ ನಡೆಯಿತು. ಮೆರವಣಿಗೆಯು ಎಂ.ಟಿ ರಸ್ತೆಯ ಎಸ್‌ಕೆಸಿಎಂಎಸ್ ಕಟ್ಟಡದಲ್ಲಿರುವ ಕಚೇರಿಯ ಬಳಿಯಿಂದ ಹೊರಟು ಎಂ.ಟಿ ರಸ್ತೆ, ಮುಖ್ಯರಸ್ತೆಯಲ್ಲಿ ಸಾಗಿ ಶ್ರೀಧರ ಭಟ್ ಅಂಗಡಿ ಬಳಿಯಿಂದಾಗಿ ತಾಲೂಕು ಆಡಳಿತ ಸೌಧದ ತನಕ ನಡೆಯಿತು.


            






