ಪುತ್ತೂರು ವಾಣಿಜ್ಯ, ಕೈಗಾರಿಕಾ ಸಂಘದ ವಾರ್ಷಿಕ ಮಹಾಸಭೆ

0

34 ಮಂದಿ ಹೊಸ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ | ಮಾಜಿ ಅಧ್ಯಕ್ಷರುಗಳಿಗೆ ಗೌರವ | ಹಿರಿಯ ಸದಸ್ಯರಿಂದ ಸಲಹೆ

ಭಾವನೆಗಳ ಮೂಲಕ ನಾವು ಒಟ್ಟಾಗಿ ಕೆಲಸ ಮಾಡಬೇಕು – ಜಾನ್ ಕುಟಿನ್ಹಾ

ಪುತ್ತೂರು: ನಿತ್ಯ ಹಣ ಮಾಡುವುದು ಮಾತ್ರವಲ್ಲ, ಸಂಘದ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಿ. ಭಾವನೆಗಳ ಮೂಲಕ ನಾವು ಒಟ್ಟಾಗಿ ಕೆಲಸ ಮಾಡಬೇಕು. ಆಗ ನಾವು ಹತ್ತಿರವಾಗುತ್ತೇವೆ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾರವರು ಹೇಳಿದರು.

ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಅ.2ರಂದು ನಡೆದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 42ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊರೋನಾದಿಂದಾಗಿ ಈ ಸಲ ಮಹಾಸಭೆ ತಡವಾಗಿತ್ತು. ಮುಂದಿನ ದಿನ ಜೂನ್ ತಿಂಗಳಲ್ಲಿ ಮಹಾಸಭೆ ನಡೆಯಬೇಕು. ಹಾಗಾಗಿ ಹೊಸ ಸಮಿತಿಗೆ 9 ತಿಂಗಳು ಅವಕಾಶವಿದೆ. ಈ 9 ತಿಂಗಳಲ್ಲೂ 9 ಕಾರ್ಯಕ್ರಮ ಹಾಕಿಕೊಳ್ಳಲಾಗುವುದು ಎಂದು ಜಾನ್ ಕುಟಿನ್ಹಾ ಹೇಳಿದರು. ಆರಂಭದಲ್ಲಿ ಅವರು ಸದಸ್ಯರ ಸಲಹೆ ಪಡೆದುಕೊಂಡು ಕ್ರೀಯಾಶೀಲ ಚಟುವಟಿಕೆಗೆ ಮುಂದೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ. ಯಾರಿಗೆ ತೊಂದರೆ ಆಗಿದೆಯೋ ಅದಕ್ಕೆ ಕಾರ್ಯಪ್ರವೃತ್ತರಾಗುವುದು ಮುಖ್ಯ ಎಂದ ಅವರು, ಪ್ಲಾಸ್ಟಿಕ್ ನಿಷೇಧ ಕುರಿತು ನಾನು ಒಪ್ಪುತ್ತೇನೆ. ಆದರೆ ಯಾವ ಪ್ಲಾಸ್ಟಿಕ್ ಉಪಯೋಗಿಸಬಹುದು ಎಂದು ಯಾರಿಗೂ ಗೊತ್ತಿಲ್ಲ. ಅಽಕಾರಿಗಳಲ್ಲೂ ಗೊಂದಲ ಉಂಟಾಗಿದೆ. ಇದಕ್ಕೂ ಒಂದು ಪರಿಹಾರ ಹುಡುಕಬೇಕಾಗಿದೆ ಎಂದರು.

ಸಂಘ ಬೆಳೆಯಬೇಕಾದರೆ ತ್ಯಾಗ ಮನೋಭಾವ ಇರಬೇಕು: ಸಂಘದ ಮಾಜಿ ಅಧ್ಯಕ್ಷ ಗಿಲ್ಬರ್ಟ್ ಡಿ ಸೋಜರವರು ಮಾತನಾಡಿ, 1978-79ರಲ್ಲಿ ಇಲ್ಲಿ ಹಲವು ಸಮಸ್ಯೆಗಳಿತ್ತು. ಆಗ ವರ್ತಕ ಸಂಘ ಆರಂಭಿಸಲಾಯಿತು. ಸದಸ್ಯರ ಕೂಡುವಿಕೆ ಬಹಳ ಕಷ್ಟ. ಸಂಘ ಬೆಳೆಯಬೇಕಾದರೆ ತ್ಯಾಗ ಮನೋಭಾವ ಇರಬೇಕು ಎಂದರು.

ಸಭೆಯಲ್ಲಿ ಬಂದ ಸಲಹೆ ಸೂಚನೆಗಳು: ಸಂಘದ ಮಾಜಿ ಅಧ್ಯಕ್ಷ ಸುರೇಂದ್ರ ಕಿಣಿಯವರು ಮಾತನಾಡಿ, ಪುತ್ತೂರಿನ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಜಿಲ್ಲೆಯಲ್ಲಿ ಪ್ರಬಲವಾದ ಸಂಘ ಆಗಿದೆ. ಸಂಘ ಬೆಳೆಯುವಾಗ ಕಚೇರಿ ಸಹ ಬೆಳೆಯಬೇಕು. ಸ್ವಂತ ಕಟ್ಟಡ ಆಗಬೇಕು. ಸದಸ್ಯರು ಹೆಚ್ಚಾಗುತ್ತಿದ್ದಂತೆ ಪಾಲ್ಗೊಳ್ಳುವಿಕೆಯೂ ಬೇಕು. ಸರಕಾರಿ ಲೆವೆಲ್‌ನಲ್ಲೂ ನಾವು ಸಲಹೆ ಕೊಡುವಂತವರಾಗಬೇಕು. ಬಜೆಟ್ ಮಂಡನೆಯಲ್ಲೂ ಸರಕಾರ ನಮ್ಮ ಸಲಹೆ ಸೂಚನೆ ಪಡೆಯುವಂತಾಗಬೇಕು ಎಂದರು. ಉದ್ಯಮಿ ವಾಮನ್ ಪೈಯವರು ಮಾತನಾಡಿ, ನಮ್ಮ ಸಂಖ್ಯೆ 500 ಮುಟ್ಟಿಲ್ಲ. ಮೀಟಿಂಗ್‌ಗೆ 50 ಸಂಖ್ಯೆಯೂ ಇಲ್ಲ. ಮಂಗಳೂರಿನಲ್ಲಿ 6 ಸಾವಿರ ಮಂದಿ ಸದಸ್ಯರಿದ್ದಾರೆ. ನಮ್ಮ ಚಟುವಟಿಕೆ ಹೆಚ್ಚು ಮಾಡಲು ಏನು ಮಾಡಬೇಕೆಂದು ಮಂಗಳೂರು ಛೆಂಬರ್ ಅ- ಕಾಮರ್ಸ್‌ನಿಂದ ಸಲಹೆ ಪಡೆಯಬೇಕು. ಅದೇ ರೀತಿ ನಮ್ಮ ಪಿನ್ ಮಿಸ್ಟಿಕ್‌ನ್ನು ಸರಿಪಡಿಸಲು ಸಾಧ್ಯವಿದ್ದರೂ ಅಽಕಾರಿಗಳೂ ಲಂಚ ಕೇಳುತ್ತಾರೆ. ಹಾಗಾಗಿ ನಾವು ಲಂಚ ಕೊಡದೆ ದಂಡ ಕಟ್ಟಿಯಾದರೂ ಪ್ರಾಮಾಣಿಕತೆ ಮೆರೆಯಬೇಕು. ಜೊತೆಗೆ ಕೇರಳದಂತಹ ಸಂಘಟನೆ ನಮ್ಮದಾಗಬೇಕೆಂದರು.

ಮಾಜಿ ಅಧ್ಯಕ್ಷರು, ಹಿರಿಯ ಸದಸ್ಯರಿಗೆ ಗೌರವ: ಮಾಜಿ ಅಧ್ಯಕ್ಷರಾದ ಕೇಶವ ಪೈ, ಗಿಲೃರ್ಟ್ ಡಿ ಸೋಜ, ಭಾಸ್ಕರ ಬಾರ್ಯ, ಸುರೇಂದ್ರ ಕಿಣಿ, ಯು ಲೋಕೇಶ್ ಹೆಗ್ಡೆ, ಗೋಪಾಲಕೃಷ್ಣ ಭಟ್ ಸಾಮೆತ್ತಡ್ಕ ಮತ್ತು ಹಿರಿಯ ಸದಸ್ಯರಾದ ವಸಂತ ಕಾಮತ್, ರಘುನಾಥ ರಾವ್, ಸುಂದರ ಗೌಡ ಅವರನ್ನು ಗೌರವಿಸಲಾಯಿತು.

ಹೊಸ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ: 34 ಮಂದಿ ಹೊಸ ಸದಸ್ಯರನ್ನು ಗೌರವಿಸಿ ಅವರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಗುರುರಾಜ್ ಅವರು ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ ನಿರ್ವಹಿಸಿದರು. ಅತೀ ಹೆಚ್ಚು ಸದಸ್ಯರನ್ಬು ಸಂಘಕ್ಕೆ ಸೇರ್ಪಡೆ ಮಾಡಿದ ಸಂಘದ ಮ್ಯಾನೇಜರ್ ಉಲ್ಲಾಸ್ ಪೈ ಅವರನ್ನು ಗೌರವಿಸಲಾಯಿತು. ಕೆಯ್ಯೂರು ವರ್ತಕ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅವರನ್ನು ಗೌರವಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಭಗವಾನ್ ವರದಿ ವಾಚಿಸಿದರು. ಲೆಕ್ಕಪತ್ರ ಮಂಡನೆಯನ್ನು ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವಪ್ರಸಾದ್ ಅವರು ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ಇಸುಬು ಕೆ., ಸಂತೋಷ್ ಶೆಟ್ಟಿ, ಕಾರ್ಯದರ್ಶಿ ಮನೋಜ್ ಟಿ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತೀಶ್ ರೈ ಕಟ್ಟಾವು ಪ್ರಾರ್ಥಿಸಿದರು. ಶ್ರೀಕಾಂತ್ ಕೊಳತ್ತಾಯ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ನೂತನ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ ವಂದಿಸಿದರು. ಮಹಾಸಭೆಯ ಕೊನೆಯಲ್ಲಿ ಸಂಘದ ಸದಸ್ಯರಿಗೆ ಏರ್ಪಡಿಸಲಾದ ಲಕ್ಕಿ ಡ್ರಾವನ್ನು ಮಾಜಿ ಅಧ್ಯಕ್ಷ ಗಿಲ್ಬರ್ಟ್ ಡಿ ಸೋಜ, ರಘುನಾಥ್ ರಾವ್ ಅವರು ಚೀಟಿ ಎತ್ತುವ ಮೂಲಕ ನೆರವೇರಿಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಮನೋಜ್‌ರವರು ಲಕ್ಕಿ ಡ್ರಾ ನಿರ್ವಹಿಸಿದರು. ಜ್ಯೋಶಿ, ಶ್ರೀಧರ್ ಮತ್ತು ಸುರೇಂದ್ರ ಕಿಣಿ ಲಕ್ಕಿ ಕೂಪನ್ ವಿಜೇತರಾದರು.

ನೂತನ ಅಧ್ಯಕ್ಷರಾಗಿ ಜಾನ್ ಕುಟಿನ್ಹಾ ಪುನರಾಯ್ಕೆ

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಜಾನ್ ಕುಟಿನ್ಹಾರವರು ಪುನರಾಯ್ಕೆಗೊಂಡಿದ್ದಾರೆ. ಅದೇ ರೀತಿ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಉಲ್ಲಾಸ್ ಪೈ, ಕೋಶಾಧಿಕಾರಿಯಾಗಿ ರಾಜೇಶ್ ಕಾಮತ್, ಉಪಾಧ್ಯಕ್ಷರಾಗಿ ಪಿ.ವಾಮನ್ ಪೈ, ಸೂರ್ಯನಾಥ ಆಳ್ವ, ಜೊತೆಕಾರ್ಯದರ್ಶಿಯಾಗಿ ಮನೋಜ್ ಟಿ ಮತ್ತು ಮೊಹಮ್ಮದ್ ನೌಶದ್, ಕಾರ್ಯಕಾರಿ ಸಮಿತಿಗೆ ವಿಶ್ವಪ್ರಸಾದ್ ಸೇಡಿಯಾಪು, ಶ್ರೀಕಾಂತ್ ಕೊಳತ್ತಾಯ, ಕೃಷ್ಣನಾರಾಯಣ ಮುಳಿಯ, ಉಮೇಶ್ ನಾಯಕ್, ಅರವಿಂದ ಭಗವಾನ್ ರೈ, ಇಂದುಶೇಖರ್ ಪಿ.ಬಿ, ಶಶಿರಾಜ್ ರೈ, ಆಸ್ಕರ್ ಆನಂದ್, ಗುರುರಾಜ್ ಕೆ, ವಾಗೇಶ್, ಸಂತೋಷ್ ಶೆಟ್ಟಿ, ಸದಾನಂದ ಎ, ಉಮ್ಮರ್ ಫಾರೂಕ್, ರಾಜೇಶ್ ಯು.ಪಿ, ಮೊಹಮ್ಮದ್ ರಫೀಕ್, ಸತೀಶ್ ನಾಕ್ ಪರ್ಲಡ್ಕ, ಸತೀಶ್ ರೈ ಕಟ್ಟಾವು, ಅರವಿಂದ್‌ಕೃಷ್ಣ ಕಲ್ಲಾಜೆ, ವೆಂಕಟ್ರಮಣ ನಾಯಕ್, ರಮೇಶ್ ಪ್ರಭು, ರಾಮಚಂದ್ರ ನಾಯಕ್, ಗೋಪಾಲ್ ಎಂ.ಯು, ರವೀಂದ್ರ ಪೈ, ರವಿ ಕುಮಾರ್, ಉದಯ ಕುಮಾರ್ ಹೆಚ್ ಅವರು ಆಯ್ಕೆಯಾದರು. ಕಾನೂನು ಸಲಹೆಗಾರರಾಗಿ ಫಜಲ್ ರಹೀಮ್ ಮತ್ತು ಲೆಕ್ಕಪರಿಶೋಧಕರಾಗಿ ಗಣೇಶ್ ಜ್ಯೋಶಿ ಅವರನ್ನು ನೇಮಕ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಸಂಘದ ಮಾಜಿ ಅಧ್ಯಕ್ಷ ಸುರೇಂದ್ರ ಕಿಣಿಯವರು ನೂತನ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here