ನಾವು ಆಯ್ಕೆ ಮಾಡುವ ನಾಯಕರು ಭ್ರಷ್ಟಾಚಾರಿಗಳಾಗಿರಬಾರದು-ಡಾ.ಎಂ.ಕೆ ಪ್ರಸಾದ್
ಪುತ್ತೂರು:ನಾವು ಆಯ್ಕೆ ಮಾಡುವ ನಾಯಕರು ಗೌರವಾನ್ವಿತ ವ್ಯಕ್ತಿಗಳಾಗಿರಬೇಕು. ಅವರು ಭ್ರಷ್ಟಾಚಾರಿಗಳಾಗಿರಬಾರದು. ಅವರು ಲಂಚ ರಹಿತರಾಗಿರಬೇಕು. ಭ್ರಷ್ಟಾಚಾರದ ತಲೆ ಇರುವುದೇ ವಿಧಾನ ಸೌಧದಲ್ಲಿ. ಅಲ್ಲಿಂದಲೇ ನಿಯಂತ್ರಣವಾಗಬೇಕು. ಸರಕಾರಿ ಸೌಲಭ್ಯ ಜನರಿಗೆ ನೇರವಾಗಿ ದೊರೆಯಬೇಕು ಎಂದು ಆದರ್ಶ ಆಸ್ಪತ್ರೆಯ ವೈದ್ಯ ಡಾ.ಎಂ.ಕೆ ಪ್ರಸಾದ್ ಹೇಳಿದರು.
ನವರಾತ್ರಿ ಉತ್ಸವದ ಅಂಗವಾಗಿ ಪಡ್ಡಾಯೂರು ಶ್ರೀಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ಅ.4ರಂದು ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮಲ್ಲಿ ದೇಶ ಪ್ರೇಮ ಮುಖ್ಯವಾಗಿರಬೇಕು. ಯಾವುದೇ ಸ್ವಾರ್ಥವಿರಬಾರದು. ದೇಶದ ಬಗ್ಗೆ ಅಭಿಮಾನವಿರಬೇಕು. ರಾಜಕೀಯದಲ್ಲಿ ಒಬ್ಬ ನಾಯಕನಿಗೆ ಎರಡು ಬಾರಿಗಿಂತ ಹೆಚ್ಚು ಅವಕಾಶ ನೀಡಬಾರದು ಎಂದರು. ಭಾರತವನ್ನು ಎಂದಿಗೂ ಮುಸ್ಲಿಂ ರಾಷ್ಟ್ರ ಮಾಡಲು ಸಾಧ್ಯವಿಲ್ಲ. ದೇಶದ ಭವಿಷ್ಯಕ್ಕಾಗಿ ಸಮಾನ ನಾಗರಿಕ ಹಕ್ಕು ಜಾರಿಯಾಗಬೇಕು ಎಂದು ಹೇಳಿದ ಅವರು ಹಿಂದುಗಳ ಸಂಘಟನೆಗೆ ಭಜನ ಮಂದಿರ ಸಹಕಾರಿಯಾಗಿದ್ದು ಇಲ್ಲಿ ಎಲ್ಲರ ಒಗ್ಗಟ್ಡಿನಲ್ಲಿ ಭಾಗವಹಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಹಿರಿಯರು ಹಾಕಿಕೊಟ್ಟಂತಹ ಪುರಾತನ ಸಂಪ್ರದಾಯಗಳನ್ನು ಪಾಲಿಸಿದಾಗ ಧರ್ಮ ಉಳಿಯಲು ಸಾಧ್ಯ. ನವರಾತ್ರಿ ಉತ್ಸವಗಳಲ್ಲಿ ಶ್ರದ್ಧಾ ಭಕ್ತಿಯಲ್ಲಿ ಭಾಗವಹಿಸಬೇಕು. ನವರಾತ್ರಿಯಲ್ಲಿ ನಡೆಯುವ ಎಲ್ಲಾ ರೀತಿಯ ಕಾರ್ಯಕ್ರಮಗಳು ಸಂಭ್ರಮದ ಜೊತೆ ಧರ್ಮದ ರಕ್ಷಣೆಗೆ ಪ್ರೇರಣೆ ನೀಡುತ್ತದೆ. ಭಜನೆ ಮೂಲಕ ಯಾವುದೇ ಬೇಧ ಭಾವಗಳಿಲ್ಲದೆ ಒಟ್ಟು ಸೇರಲು ಸಹಕಾರಿ ಎಂದು ಹೇಳಿದರು.
ಧಾರ್ಮಿಕ ಉಪನ್ಯಾಸಕ ನೀಡಿದ ಗಿರಿಶಂಕರ ಸುಲಾಯ ಮಾತನಾಡಿ, ಹಿಂದು ಧರ್ಮದ ಸಂಘಟನೆ, ಜಾಗೃತಿಗಾಗಿ ಭಜನಾ ಮಂದಿರಗಳು ಸಹಕಾರಿ. ಭಜನೆಯು ಎಲ್ಲರನ್ನೂ ಒಟ್ಟು ಸೇರಿಸುವ ಸಾಧನವಾಗಿದೆ. ಭಜನಾ ಮಂದಿರವು ಜಾತಿ, ಧರ್ಮ ಹೊರತಾದ ಕೇಂದ್ರ. ಶಿಸ್ತು ಬದ್ದವಾದ ಬದುಕು ನಮ್ಮದಾಗಬೇಕು. ರಾಜಕೀಯವಾಗಿ ಬೆಳೆದವರೇ ನಾಯಕರಲ್ಲ. ಭಜನಾ ಮಂದಿರದ ಮೂಲಕ ಹಿಂದುತ್ವದ ನಾಯಕರ ಸೃಷ್ಟಿಯಾಗಬೇಕು. ಭಜನೆಯ ಜೊತೆಗೆ ಯೋಗ, ಆಯುರ್ವೇದ ಮೊದಲಾದ ಮಾನವನ ಜೀವನಕ್ಕೆ ಆವಶ್ಯಕವಾದ ಅಂಶಗಳನ್ನು ತಿಳಿಸುವ ಕೇಂದ್ರಗಳಾಗಿ ಬೆಳೆಯಬೇಕು. ನಮ್ಮ ನಮ್ಮೊಳಗೆ ಗೊಂದಲವಿಲ್ಲದೆ ಪ್ರತಿಯೊಬ್ಬರೂ ಏಕಮನಸ್ಸಿನಿಂದ ಕೂಡಿರಬೇಕು. ಹಿಂದು ಧರ್ಮಕ್ಕೆ ಬೆಳಕು ನೀಡುವ ಕಾರ್ಯಕ್ರಮಗಳನ್ನು ಭಜನಾ ಮಂದಿರದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪಡ್ಡಾಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೂವಪ್ಪು, ರುದ್ರಾಂಡಿ ನೇತ್ರಾಡಿ ಯುವಕ ಮಂಡಲದ ಕಾರ್ಯದರ್ಶಿ ಶರತ್ ಪಡ್ಡಾಯೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ;
ನಿವೃತ್ತ ಯೋಧ ವಿಜಯಕುಮಾರ್ ನೆಲಪ್ಪಾಲು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಚಿಂತನಾರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನಿಧಿಶ್ರೀ ಪಡ್ಡಾಯೂರು ಪ್ರಾರ್ಥಿಸಿದರು. ಭಜನಾ ಮಂದಿರದ ಅಧ್ಯಕ್ಷ ಗಣೇಶ್ ಗೌಡ ಪಡ್ಡಾಯೂರು ಸ್ವಾಗತಿಸಿದರು. ಸದಸ್ಯರಾದ ಮಧುಸೂದನ ಪಡ್ಡಾಯೂರು ಕಾರ್ಯಕ್ರಮ ನಿರೂಪಿಸಿದರು. ಮೋಹನ್ ವಂದಿಸಿದರು. ಭಜನಾ ಮಂದಿರದ ಕಾರ್ಯದರ್ಶಿ ಯತೀಶ್ ಪಡ್ಡಾಯೂರು, ಜಗನ್ನಾಥ ನಾಯ್ಕ್, ಕುಶಾಲಪ್ಪ ಗೌಡ, ವಸಂತ ಪೂಜಾರಿ ನೆಲಪ್ಪಾಲು, ಪ್ರದೀಪ್ ಅತಿಥಿಗಳಿಗೆ ಶಾಲು ಹೊದೆಸಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.