ವಿಟ್ಲ: ಯುವತಿಯರಿಬ್ಬರು ನಾಪತ್ತೆ ಪ್ರಕರಣ – ಹುಡುಕಿ ಬಂದ ತಂಡದಿಂದ ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರು ಯುವತಿಯರಿಗೆ ಹಲ್ಲೆ – ನಾಪತ್ತೆಯಾದವರು ಪುತ್ತೂರಿನಲ್ಲಿ ಪತ್ತೆ

0

ವಿಟ್ಲ: ಮನೆಯಲ್ಲಿ ಹೇಳದೆ ಗೆಳತಿಯೊಂದಿಗೆ ತೆರಳಿದ್ದ ಮುಸ್ಲಿಂ ಯುವತಿಯನ್ನು ಮನೆಯವರು ವಿಚಾರಿಸಿದ ವೇಳೆ ಕೋಪಗೊಂಡ ಯುವತಿ ತನ್ನ ಸ್ನೇಹಿತೆಯೊಂದಿಗೆ ಹಿಂದಿರುಗಿದ್ದು, ಆವರನ್ನು ಹುಡುಕಹೊರಟ ಸ್ವಧರ್ಮೀಯ ಯುವಕರ ತಂಡ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯರಿಬ್ಬರಿಗೆ ಹಲ್ಲೆ ನಡೆಸಿದ ಘಟನೆ ವಿಟ್ಲ ಪೇಟೆಯಲ್ಲಿ ನಡೆದಿದೆ.

ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕುಳಾಲು ನಿವಾಸಿ ಆಟೋ ಚಾಲಕರೋರ್ವರ ಪುತ್ರಿ ಅ.10ರಂದು ಬೆಳಗ್ಗಿನಿಂದ ಮನೆಯವರಲ್ಲಿ ತಿಳಿಸದೆ ತೆರಳಿದ್ದರೆನ್ನಲಾಗಿದೆ.

ಸಾಯಂಕಾಲ ಕಾಸರಗೋಡು ಮೂಲದ ತನ್ನ ಸ್ನೇಹಿತೆಯೊಂದಿಗೆ ಮನೆಗೆ ಹಿಂದಿರುಗಿದಾಗ ಹೆತ್ತವರು ಆಕೆಯನ್ನು ವಿಚಾರಿಸಿದ್ದರು. ಇದರಿಂದ ಕೋಪಗೊಂಡ ಯುವತಿ ಜೊತೆಗಿದ್ದ ತನ್ನ ಸ್ನೇಹಿತೆಯೊಂದಿಗೆ ಆಟೋ ಒಂದರಲ್ಲಿ ವಿಟ್ಲ ಕಡೆ ತೆರಳಿದ್ದರು. ಇದರಿಂದ ಆತಂಕಿತರಾದ ಮನೆಮಂದಿ ಇತರರಿಗೆ ವಿಚಾರ ತಿಳಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಸ್ವಧರ್ಮೀಯ ಯುವಕರ ತಂಡವೊಂದು ಯುವತಿಯರ ಹುಡುಕಾಟಕ್ಕೆ ಹೊರಟಿತ್ತು. ಈ ಮಧ್ಯೆ ವಿಟ್ಲ ಪೇಟೆಯಲ್ಲಿ ಅವರಿಬ್ಬರನ್ನು‌ ಹೋಲುವ ಇಬ್ಬರು ಮುಸ್ಲೀಂ ಯುವತಿಯರು ಕುದ್ದುಪದವು ಕಡೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದರು. ಪರಾರಿಯಾಗಿದ್ದ ಯುವತಿಯರು ಇವರೇ ಎಂದು ಭಾವಿಸಿದ ತಂಡ ಆ ಇಬ್ಬರು ಯುವತಿಯರಿಗೆ ಹಲ್ಲೆ ನಡೆಸಿತ್ತೆನ್ನಲಾಗಿದೆ. ಅವರಿಬ್ಬರು ನಾವು ಮನೆಗೆ ತೆರಳಲು ಎಂದು ಇಲ್ಲಿ ಬಸ್ಸಿಗಾಗಿ ಕಾಯುತ್ತಿರುವುದಾಗಿ ಎಷ್ಟೇ ತಿಳಿಸಿದರು ತಂಡ ಮಾತ್ರ ಅವರನ್ನು ಬಿಟ್ಟಿರಲಿಲ್ಲ. ವಿಚಾರ ತಿಳಿದ ವಿಟ್ಲ ಠಾಣಾ ಪೊಲೀಸರು ಅಲ್ಲಿದ್ದವರ ಪೈಕಿ ಓರ್ವನನ್ನು ತಮ್ಮ ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ. ಈ ಮಧ್ಯೆ ನಾಪತ್ತೆಯಾಗಿರುವ ಬಾಲಕಿಯರಿಬ್ಬರು ಪುತ್ತೂರಿನಲ್ಲಿ ಪತ್ತೆಯಾಗಿದ್ದು ಅವರನ್ನು ಅವರವರ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ಲಭಿಸಿದೆ. ಹಲ್ಲೆಗೊಳಗಾದ ಇಬ್ಬರು ಬಾಲಕಿಯರು ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ತೆರಳಿದ್ದು, ಈ ಬಗ್ಗೆ ಠಾಣೆಯಲ್ಲಿ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here