ಉಪ್ಪಿನಂಗಡಿ: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ನೆಲೆಯಲ್ಲಿ ಪ್ರತಿ ತಾಲೂಕಿನಲ್ಲಿಯೂ ತುಳು ಕೂಟ ರಚನೆಯ ಬಗ್ಗೆ ಹಾಗೂ ಗ್ರಾಮ ಮಟ್ಟದಲ್ಲಿ ಒಂದು ವಾರ್ಡ್‌ನ್ನು ತುಳುವರ ವಾರ್ಡ್‌ನ್ನಾಗಿಸುವ ಬಗ್ಗೆ ಪ್ರಯತ್ನಗಳು ನಡೆಯಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಬಿ. ಕತ್ತಲ್‌ಸಾರ್ ಪ್ರತಿಪಾದಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಆಶ್ರಯದಲ್ಲಿ ಭಾನುವಾರದಂದು ಉಪ್ಪಿನಂಗಡಿಯ ನೇತ್ರಾವತಿ ಸಮುದಾಯ ಭವನದಲ್ಲಿ ಆಯೋಜಿಸಲಾದ ‘ಸಿರಿ ಚಾವಡಿ ಪುರಸ್ಕಾರ’ ತುಳು ಸಾಧಕರೆಗ್ ಮಾನಾದಿಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ, ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ಯೋಜನಾಬದ್ಧವಾಗಿ ಕಾರ್ಯೋನ್ಮುಖವಾದಾಗ ಮಾತ್ರ ಉತ್ತಮ ಕಾರ್ಯಕ್ರಮ ನಡೆಸಲು ಸಾಧ್ಯ ಎಂದರು.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ ಮಾತನಾಡಿ, ತುಳು ಲಿಪಿಯನ್ನು ಪ್ರಾಥಮಿಕ ಶಾಲಾ ಪಠ್ಯದಲ್ಲಿ ಕಲಿಕೆಗೆ ಅವಕಾಶ ಒದಗಿಸಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಅನೇಕ ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಡಬ ದಿನೇಶ್ ರೈ, ಜಯಂತ ಪೊರೋಳಿ, ಚಂದಪ್ಪ ಮೂಲ್ಯ, ಸುನಿಲ್ ಅನಾವು, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ರವಿ ಪಿ.ಎಂ. ಮಡಿಕೇರಿ, ನಾಗೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹರೀಶ್ ನಟ್ಟಿಬೈಲ್, ಏಕ ವಿಧ್ಯಾಧರ ಜೈನ್ , ಕೈಲಾರ್ ರಾಜಗೋಪಾಲ ಭಟ್ , ಗಾಯತ್ರಿ, ಚಂದ್ರಶೇಖರ್ ನಾಯಕ್, ಚಂದ್ರಶೇಖರ್ ಮಡಿವಾಳ, ಕಿಶೋರ್ ಜೋಗಿ, ಹರೀಶ್ ಭಂಡಾರಿ, ದಿವಾಕರ ಶೆಟ್ಟಿ , ವೆಂಕಟೇಶ್ ರಾವ್, ಪದ್ಮನಾಭ ಕುಲಾಲ್, ಶಾಂತಾ ಕುಂಟಿಣಿ, ಗಂಗಾಧರ್ ಟೈಲರ್, ಕೃಷ್ಣ ಪ್ರಸಾದ್, ವೆಂಕಪ್ಪ ಮಡಿವಾಳ ಮತ್ತಿತರರು ಭಾಗವಹಿಸಿದರು. ಮಲ್ಲಿಕಾ ಅಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.