ಅರಣ್ಯ ಇಲಾಖೆ ವತಿಯಿಂದ ಬಿದಿರು ಗಿಡಗಳ ನಾಟಿ
ಉಪ್ಪಿನಂಗಡಿ: ನದಿ ದಡದಲ್ಲಿ ಮಣ್ಣು ಸವಕಳಿ ತಡೆಗಟ್ಟುವ ಸಲುವಾಗಿ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ವತಿಯಿಂದ ನದಿ ದಡದಲ್ಲಿ ಬಿದಿರು ನಾಟಿ ಕಾರ್ಯ ಅ.11 ರಂದು ಆರಂಭಗೊಂಡಿತು.
ಇಳಂತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಿನಂಗಡಿ ನೇತ್ರಾವತಿ ಸೇತುವೆ ಬಳಿಯಿಂದ ಬಿದಿರು ಗಿಡಗಳ ನಾಟಿಗೆ ಚಾಲನೆ ನೀಡಲಾಯಿತು. ಇಳಂತಿಲ ಗ್ರಾಮ ಪಂಚಾಯಿತಿ ಸದಸ್ಯ ಯು.ಕೆ. ಇಸುಬು ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಬಂದಾರು ಶಾಖೆ ಉಪ ವಲಯ ಅರಣ್ಯ ಅಧಿಕಾರಿ ಬಿ. ಜೆರಾಲ್ಡ್ ಡಿ’ಸೋಜಾ ಮಾಹಿತಿ ನೀಡಿ ನೆರೆ ಪ್ರವಾಹಕ್ಕೆ ನದಿ ಬದಿಯ ಮಣ್ಣು ಕೊಚ್ಚಿ ಹೋಗುತ್ತಿದ್ದು, ಇದನ್ನು ತಡೆಗಟ್ಟುವ ಸಲುವಾಗಿ ಈ ಯೋಜನೆ ರೂಪಿತವಾಗಿದ್ದು, ನೇತ್ರಾವತಿ ಸೇತುವೆ ಬಳಿಯಿಂದ ಇಳಂತಿಲ ಭಾಗದಲ್ಲಿ 2 ಕಿ.ಮೀ. ದೂರ ಮುಗೇರಡ್ಕ ತನಕ ಸುಮಾರು 800 ಗಿಡಗಳ ನಾಟಿ ನಡೆಯಲಿದೆ. ಇದೇ ರೀತಿಯಲ್ಲಿ ನದಿಯ ಇನ್ನೊಂದು ಬದಿ ಉಪ್ಪಿನಂಗಡಿ ಭಾಗದಲ್ಲಿ ನೀರಕಟ್ಟೆ ತನಕ ಎರಡೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 1 ಸಾವಿರ ಗಿಡ ನಾಟಿ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಯು.ಟಿ. ಫಯಾಝ್, ಅರಣ್ಯ ರಕ್ಷಕ ಕೆ.ಎನ್. ಜಗದೀಶ್, ಅರಣ್ಯ ವೀಕ್ಷಕರಾದ ರವಿ ಬಿ., ಸೇಸಪ್ಪ ಗೌಡ ಉಪಸ್ಥಿತರಿದ್ದರು.