ಶಕುಂತಳಾ ಶೆಟ್ಟಿಯವರು ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆಯಬೇಕಿತ್ತು- ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ

0

ಶ್ರೀಕೃಷ್ಣ ಉಪಾಧ್ಯಾಯರಿಂದ ಕಾಂಗ್ರೆಸ್ ಕಚೇರಿಯಲ್ಲಿ ಆಯುಧ ಪೂಜೆ ವಿಚಾರ

  • ಶಕುಂತಳಾ ಶೆಟ್ಟಿಯವರು ಊರಲ್ಲಿಲ್ಲ-ಬಂದು ಸ್ಪಷ್ಟನೆ ಕೊಡುವುದಾಗಿ ಹೇಳಿದ್ದಾರೆ -ಶಕೂರ್ ಹಾಜಿ
  • ಗೊಂದಲ ಉಂಟು ಮಾಡಲು ಸಣ್ಣ ತಂಡ ಪ್ರಯತ್ನಿಸುತ್ತಲೇ ಇದೆ -ಎಂ.ಬಿ.ವಿಶ್ವನಾಥ ರೈ
  • ಸಣ್ಣಪುಟ್ಟ ಸಮಸ್ಯೆಯನ್ನು ದೊಡ್ಡದಾಗಿ ವೈರಲ್ ಮಾಡುವ ಸಣ್ಣ ಗುಂಪು-ಆಲಿ

ಪುತ್ತೂರು:ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿರುವ ಶ್ರೀಕೃಷ್ಣ ಉಪಾಧ್ಯಾಯ ಅವರನ್ನು ಕರೆಸಿ ಕಾಂಗ್ರೆಸ್ ಕಚೇರಿಯಲ್ಲಿ ಆಯುಧ ಪೂಜೆ ನಡೆಸಿದ್ದ ವಿಚಾರ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಪ್ರಸ್ತಾಪವಾಗಿ, ಘಟನೆಗೆ ಸಂಬಂಧಿಸಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಸ್ಪಷ್ಟನೆ ನೀಡುತ್ತಿದ್ದರೆ ಇಷ್ಟೆಲ್ಲ ಗೊಂದಲಗಳಾಗುತ್ತಿರಲಿಲ್ಲ ಎಂದೂ ಕೆಲವು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು. ಅ.10ರಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಮಾಸಿಕ ಸಭೆಯಲ್ಲಿ ಈ ವಿದ್ಯಮಾನ ನಡೆಯಿತು.ಶಕುಂತಳಾ ಶೆಟ್ಟಿಯವರು ಹೊರರಾಜ್ಯ ಪ್ರವಾಸದಲ್ಲಿರುವುದರಿಂದ ಸಭೆಯಲ್ಲಿ ಉಪಸ್ಥಿತರಿರಲಿಲ್ಲ.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪೂಜೆ ಇನ್ನಿತರ ಕಾರ್ಯಕ್ರಮ ಮಾಡುವಾಗ ಯಾವುದೇ ಗೊಂದಲ ಹಾಗು ಪಕ್ಷಕ್ಕೆ ಮುಜುಗುರ ಆಗದ ರೀತಿಯಲ್ಲಿ ನೋಡಿಕೊಳ್ಳುವಂತೆ ಕಾರ್ಯಕರ್ತರು ಆಗ್ರಹಿಸಿದರು.ಕಾಂಗ್ರೆಸ್ ಕಚೇರಿಯಲ್ಲಿ ಆಯುಧ ಪೂಜೆ ನಡೆಸಿರುವುದಕ್ಕೆ ನಮ್ಮದೇನೂ ಆಕ್ಷೇಪವಲ್ಲ.ಆದರೆ, ಇಸ್ಲಾಂ ಧರ್ಮದ ವಿರುದ್ಧ ಮಾತನಾಡಿರುವ ಅರ್ಚಕರನ್ನು ಜಾತ್ಯಾತೀತ ಪಕ್ಷವಾಗಿರುವ ಕಾಂಗ್ರೆಸ್ ಕಚೇರಿಗೆ ಕರೆಸಿ ಪೂಜೆ ಮಾಡಿಸಿರುವುದರಿಂದ ನಮ್ಮ ಭಾವನೆಗೆ ಧಕ್ಕೆಯಾಗಿದೆ ಎಂದು ಕೆಲವು ಮುಸ್ಲಿಂ ಕಾರ್ಯಕರ್ತರು ತಮ್ಮ ಅಳಲನ್ನು ತೋಡಿಕೊಂಡರು.ಇತರ ಕೆಲ ಕಾರ್ಯಕರ್ತರೂ ಇದಕ್ಕೆ ಧ್ವನಿಗೂಡಿಸಿದರು. ಈ ವೇಳೆ ಮಾತನಾಡಿದ ಸನತ್ ರೈ ಏಳ್ನಾಡುಗುತ್ತು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮಾಜಿ ಶಾಸಕರಾಗಿರುವ ಶಕುಂತಳಾ ಶೆಟ್ಟಿಯವರಿಂದ ಯಾವುದೇ ತಪ್ಪಾಗಿಲ್ಲ.ಅವರ ಗಮನಕ್ಕೆ ಬಾರದೇ ಈ ಪ್ರಮಾದ ಆಗಿದೆ ಎಂದರು.

ಗೊಂದಲ ಉಂಟು ಮಾಡಲು ಸಣ್ಣ ಗುಂಪು ಪ್ರಯತ್ನಿಸುತ್ತಲೇ ಇದೆ-ಎಂ.ಬಿ.ವಿಶ್ವನಾಥ ರೈ:

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮಾತನಾಡಿ, ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಯುಧ ಪೂಜೆಯ ವಿಚಾರದಲ್ಲಿ ಪಕ್ಷದಲ್ಲಿ ಗೊಂದಲ ಉಂಟು ಮಾಡಲು ಒಂದು ಸಣ್ಣ ತಂಡ ಪ್ರಯತ್ನಿಸುತ್ತಲೇ ಬರುತ್ತಿದೆ. ಚುನಾವಣೆ ಸಂದರ್ಭದಲ್ಲಿ ಈ ತಂಡ ವಿರೋಧ ಪಕ್ಷದವರಿಂದ ಎಂಜಲು ಕಾಸು ಪಡೆದು ಪಕ್ಷವನ್ನು ಸೋಲಿಸುವ ಪ್ರಯತ್ನ ನಡೆಸುತ್ತಿದೆ.ಈ ಕುರಿತು ಜಾಗೃತರಾಗಬೇಕು ಎಂದು ಹೇಳಿದರು.ಆಯುಧ ಪೂಜೆ ಗೊಂದಲಕ್ಕೆ ಸಂಬಂಧಿಸಿ ನಾನು ಮತ್ತೊಮ್ಮೆ ಕ್ಷಮೆ ಯಾಚಿಸುತ್ತೇನೆ.ಈ ಗೊಂದಲ ಇಲ್ಲಿಗೆ ಮುಗಿಯಬೇಕು.ನಮ್ಮಿಂದ ಒಂದು ಸಣ್ಣ ತಪ್ಪು ಆಗಿದೆ.ಮುಂದೆ ಈ ರೀತಿ ಆಗದಂತೆ ನನ್ನ ಅವಧಿ ಎಲ್ಲಿಯ ತನಕ ಇರುತ್ತದೆಯೋ ಅಲ್ಲಿಯ ತನಕ ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.ಈ ವೇಳೆ ಮಾತನಾಡಿದ ಕಾರ್ಯಕರ್ತರು, ವಿವಾದಕ್ಕೆ ಸಂಬಂಧಿಸಿ ಬ್ಲಾಕ್ ಅಧ್ಯಕ್ಷರು ಈಗಾಗಲೇ ಕ್ಷಮೆ ಯಾಚಿಸಿದ್ದಾರೆ.ವಿವಾದಕ್ಕೆ ಸಂಬಂಧಿಸಿ ಆರಂಭದಲ್ಲಿಯೇ ಶಕುಂತಳಾ ಶೆಟ್ಟಿಯವರು ಸ್ಪಷ್ಟನೆ ನೀಡಬೇಕಿತ್ತು.ಅವರು ಸ್ಪಷ್ಟನೆ ನೀಡುತ್ತಿದ್ದರೆ ವಿವಾದ ಈ ರೀತಿ ಬೆಳೆಯುತ್ತಿರಲಿಲ್ಲ ಎಂದರು.

ಶಕುಂತಳಾ ಶೆಟ್ಟಿಯವರು ಊರಲ್ಲಿಲ್ಲ- ಬಂದು ಸ್ಪಷ್ಟನೆ ಕೊಡುವುದಾಗಿ ಹೇಳಿದ್ದಾರೆ-ಶಕೂರ್ ಹಾಜಿ:

ಈ ವೇಳೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ ಅವರು ಮಾತನಾಡಿ, ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿರುವ ಮತ್ತು ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಅರ್ಚಕರನ್ನು ಕರೆಸಿ ಕಾಂಗ್ರೆಸ್ ಕಚೇರಿಯಲ್ಲಿ ಆಯುಧ ಪೂಜೆ ಮಾಡಿರುವ ಬಗ್ಗೆ ನನ್ನಲ್ಲಿ ಕೆಲವರು ಕೇಳಿದ್ದು,ಇವತ್ತಿನ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಾಯಕರ ಗಮನಕ್ಕೆ ತರುತ್ತೇನೆ.ಅವರ ತೀರ್ಮಾನಕ್ಕೆ ನಾನು ಬದ್ಧನಾಗಿರುವುದಾಗಿ ಅವರಿಗೆ ಹೇಳಿದ್ದೇನೆ.ಮಾಜಿ ಶಾಸಕಿ ಶಕುಂತಳಾ ಶೆಟ್ಟಯವರಲ್ಲಿಯೂ ನಾನು ಈ ಕುರಿತು ಫೋನ್‌ನಲ್ಲಿ ಮಾತನಾಡಿದ್ದೇನೆ. ಅವರು ಈಗ ಊರಲ್ಲಿ ಇಲ್ಲ. ಹೊರ ರಾಜ್ಯಕ್ಕೆ ಹೋಗಿದ್ದಾರೆ. ಅವರು ಇವತ್ತು ಈ ಸಭೆಯಲ್ಲಿ ಇಲ್ಲದ ಕಾರಣ ಮಾತನಾಡುವುದು ಸರಿಯಲ್ಲ. ನಾನು ಬಂದು ಈ ಬಗ್ಗೆ ಸ್ಪಷ್ಟನೆ ನೀಡಲಿದ್ದೇನೆ ಎಂದು ಅವರು ಈಗಾಗಲೇ ಫೋನ್‌ನಲ್ಲಿ ಹೇಳಿದ್ದಾರೆ.ಆದ್ದರಿಂದ ಈ ವಿಷಯ ಇಲ್ಲಿಗೇ ಮುಗಿಯಬೇಕು.ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಬೇಕೆಂದು ಹೇಳಿದರು.

ಸಣ್ಣಪುಟ್ಟ ಸಮಸ್ಯೆಯನ್ನು ದೊಡ್ಡದಾಗಿ ವೈರಲ್ ಮಾಡುವ ಸಣ್ಣ ಗುಂಪು-ಆಲಿ:

ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿಯವರು ಮಾತನಾಡಿ ಪಕ್ಷದ ಕಾರ್ಯಕರ್ತರು ಏನು ಸಮಸ್ಯೆ ಹೇಳಿದರೂ ಸ್ಪಂದನೆ ಮಾಡುತ್ತೇವೆ.ಅವರ ಪರವಾಗಿ ಅವರೊಂದಿಗೆ ಹೋರಾಟಕ್ಕೆ ಸದಾ ಸಿದ್ದರಿದ್ದೇವೆ.ಆದರೆ, ಇಲ್ಲಿ ಸಣ್ಣ ಪುಟ್ಟ ಸಮಸ್ಯೆಯಾಗಿರುವುದನ್ನು ದೊಡ್ಡದಾಗಿ ವೈರಲ್ ಮಾಡುವವರೂ ನಮ್ಮವರೇ.ಇಲ್ಲಿ ಭಿನ್ನಮತ, ಗುಂಪುಗಾರಿಕೆಯಿಲ್ಲ.ಆದರೆ ಒಂದು ಸಣ್ಣ ಗುಂಪು ಪಕ್ಷದಲ್ಲಿ ಆಗುತ್ತಿರುವ ಸಂಘಟನೆಯನ್ನು ಸಹಿಸದೆ ಈ ರೀತಿಯ ಕುತಂತ್ರಗಳನ್ನು ನಡೆಸುತ್ತಿದೆ.ಪಕ್ಷದ ಪದಾಧಿಕಾರಿಗಳೆಂದು ಹೇಳಿಕೊಳ್ಳುವ ಕೆಲವರೇ ಸೋಶಿಯಲ್ ಮೀಡಿಯಾದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ.ಇದನ್ನು ಪಕ್ಷದ ನಾಯಕರ ಗಮನಕ್ಕೆ ತರುವುದಾಗಿ ಹೇಳಿದರು.ವೈಯುಕ್ತಿಕ ತೇಜೋವಧೆ ಮಾಡುವ ವಿಚಾರವೂ ಪಕ್ಷದೊಳಗೆ ಆಗುತ್ತಾ ಇದೆ. ಕಾರ್ಯಕರ್ತರು ಯಾರೇ ಆಗಿದ್ದರೂ ವೈಯಕ್ತಿಕ ತೇಜೋವಧೆ, ಅದು ನಮ್ಮ ವೈರಿಯಾಗಿದ್ದರೂ ಸರಿಯಲ್ಲ ಎಂದ ಆಲಿಯವರು, ನಾವೇನಿದ್ದರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಪಕ್ಷವನ್ನು ಸಂಘಟಿಸೋಣ ಎಂದು ಹೇಳಿದರು. ಕಾಂಗ್ರೆಸ್ ಕಚೇರಿಯಲ್ಲಿನ ಆಯುಧ ಪೂಜೆ ವಿಚಾರದ ಗೊಂದಲ ಮುಗಿದ ಅಧ್ಯಾಯ ಎಂದು ಸಭೆಯಲ್ಲಿದ್ದ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸುವ ಗೊಂದಲಕ್ಕೆ ತೆರೆ ಎಳೆದರು.

ಸನ್ಮಾನ: ಕೆಪಿಸಿಸಿ ವಕ್ತಾರರಾಗಿ ನೇಮಕಗೊಂಡ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಹಾಗು ಭಾರತ್ ಜೋಡೋ ಯಾತ್ರೆಯಲ್ಲಿ ಪುತ್ತೂರು ಬ್ಲಾಕ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಅಮಳ ರಾಮಚಂದ್ರ ಅವರು ಮಾತನಾಡಿ ನಾನು ಕಾಂಗ್ರೆಸ್‌ನ ಋಣ ತೀರಿಸಬೇಕಾಗಿದೆ. ಪಕ್ಷ ಇಷ್ಟು ದೊಡ್ಡ ಜವಾಬ್ದಾರಿ ನೀಡಿರುವುದು ಪಕ್ಷದ ಸಂಘಟನೆಗೆ ಮತ್ತಷ್ಟು ಉತ್ಸಾಹ ನೀಡುತ್ತದೆ. ನಾನು ಯಾವತ್ತಿಗೂ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ ಆಗಿರುತ್ತೇನೆ.ನನಗೆ ಹುದ್ದೆ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ದಿವ್ಯಪ್ರಭಾ ಗೌಡ ಅವರು ಮಾತನಾಡಿ ಭಾರತ್ ಜೋಡೋ ಕಾರ್ಯಕ್ರಮ ಎಲ್ಲರ ಪರಿಶ್ರಮದಿಂದ ಪುತ್ತೂರು ಬ್ಲಾಕ್ ಮಟ್ಟದಲ್ಲಿ ಯಶಸ್ವಿಯಾಗಿದೆ.ಇದರ ಎಲ್ಲ ಕೀರ್ತಿ ಬ್ಲಾಕ್ ಅಧ್ಯಕ್ಷ ಎಮ್.ಬಿ.ವಿಶ್ವನಾಥ್ ರೈ ಅವರಿಗೆ ಸಲ್ಲಬೇಕು.ಪುತ್ತೂರಿನಲ್ಲಿ ಯಾರೇ ಕಾಂಗ್ರೆಸ್ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕಾಗಿದೆ.ನಾವು ಎಲ್ಲರೂ ಒಂದು ಗೂಡಿ ಪರಿಶ್ರಮವಹಿಸಿ ಇಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಶಾಸಕರನ್ನು ತರುವ ಕೆಲಸ ಪ್ರತಿಯೊಬ್ಬರಿಂದ ನಡೆಯಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹೇಶ್ ರೈ ಅಂಕೊತ್ತಿಮಾರ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ,ಕಿಸಾನ್ ಘಟಕದ ಅಧ್ಯಕ್ಷ ಮುರಳೀಧರ ಗೌಡ ಕೆಮ್ಮಾರ, ಪುತ್ತೂರು ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಮೆಲ್ವಿನ್ ಮೊಂತೆರೋ, ಎಸ್ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸು, ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೇರಾ, ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜ, ಗೋಪಾಲಕೃಷ್ಣ ಬಿ., ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಭಾಸ್ಕರ್ ಗೌಡ ಕೋಡಿಂಬಾಳ, ವೆಂಕಟ್ರಮಣ ಕೆ.ಎಸ್., ಗಂಗಾಧರ್ ಕೊಯ್ಯುರು, ಜೊರೋಮ್, ಸಿರಿಲ್ ರೋಡ್ರಿಗಸ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್, ಮಾಧವ ಪೂಜಾರಿ ಬೆಟ್ಟಂಪಾಡಿ, ಶಶಿಕಿರಣ್ ರೈ ನೂಜಿಬೈಲು, ಬ್ಲಾಕ್ ಕಾಂಗ್ರೆಸ್ ಖಜಾಂಜಿ ವಲೇರಿಯನ್ ಡಯಾಸ್, ಪರಮೇಶ್ವರ್, ದಿನೇಶ್ ಪಿ.ವಿ.,ಸಂಜೀವ ನಾಯ್ಕ್ ಸೊರಕೆ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಮನಮೋಹರ್ ರೈ, ಸೂಫಿ ಪಡೀಲ್, ಹಬೀಬ್ ಕಣ್ಣೂರು, ರೋಶನ್ ರೈ ಬನ್ನೂರು, ನಗರಸಭಾ ಸದಸ್ಯ ಮೊಹಮ್ಮದ್ ರಿಯಾಜ್, ಹಿಂದುಳಿದ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್,ಶರೀಫ್, ಇಬ್ರಾಹಿಂ ಮುಲಾರ್, ಯಾಕೂಬ್ ಮುಲಾರ್, ಉಮ್ಮರ್ ಜನಪ್ರಿಯ, ಸರಸ್ವತಿ,ಎಸ್.ದಿವ್ಯ., ಡಿ.ಕೆ.ಅಬ್ದುಲ್ ರಹಿಮಾನ್, ಸಿರಿಲ್ ರೋಡ್ರಿಗಸ್, ಮೂಸಾನ್ ಹಾಜಿ ಕರ್ನೂರ್, ಸನತ್ ರೈ ಏಳ್ನಾಡುಗುತ್ತು, ಪುರಂದರ ರೈ ಕೋರಿಕ್ಕಾರ್, ವಿಶಾಲಾಕ್ಷಿ ಬನ್ನೂರು, ಶಾಫಿ ಪಾಣಾಜೆ, ಅಬೂಬಕ್ಕರ್, ಆಲಿಕುಂಞಿ, ಶಾಫಿ ಕಂಚಿಲ್‌ಕುಂಜ, ಮನೋಹರ್ ರೈ ಎಂಡೆಸಾಗು, ಬಾಬು ರೈ ಕೋಟ, ಸೀತಾ ಭಟ್, ಜಯಂತ ಕೆಂಗುಡೇಲು, ಪ್ರಜ್ವಲ್ ರೈ ತೊಟ್ಲ, ಆದಂ ಕಲ್ಲರ್ಪೆ, ಶಾಹುಲ್ ಹಮೀದ್ ಜಾಲಗದ್ದೆ, ಬಾಲಕೃಷ್ಣ ಗೌಡ ಕೆಮ್ಮಾರ, ಮಹಾಬಲ ರೈ ವಳತ್ತಡ್ಕ, ಸಂಜೀವ ನಾಯ್ಕ ಸೊರಕೆ, ರಾಮಚಂದ್ರ ಸೊರಕೆ, ಕೃಷ್ಣಪ್ರಸಾದ್ ಆಳ್ವ, ಹಮೀದ್ ಬೆಟ್ಟಂಪಾಡಿ, ನವೀನ್ ರೈ ಚಿಲ್ತಡ್ಕ, ಮೋನಪ್ಪ ಪೂಜಾರಿ ಮಾಡನ್ನೂರು, ಹಾರೀಸ್ ಸೆಂಟ್ಯಾರ್ ಮೊದಲಾದವರು ಉಪಸ್ಥಿತರಿದ್ದರು.ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ವಂದಿಸಿದರು.

ವಾಲ್ಮೀಕಿ ಜಯಂತಿ ಆಚರಣೆ:ಅಮಳ ರಾಮಚಂದ್ರ,‌ ದಿವ್ಯಪ್ರಭಾ ಗೌಡರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.ಕೆಪಿಸಿಸಿ ವಕ್ತಾರರಾಗಿ ನೇಮಕಗೊಂಡಿರುವ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಹಾಗೂ ಭಾರತ್ ಜೋಡೋ ಯಾತ್ರೆಯ ಸಂಯೋಜಕಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರನ್ನು ಸನ್ಮಾನಿಸಲಾಯಿತು.ಪುತ್ತೂರು ಬ್ಲಾಕ್ ಕಾಂಗ್ರೆಸ್, ಎಸ್ಸಿ ಘಟಕದ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ವಹಿಸಿದ್ದರು.ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಮತ್ತು ಜಿಲ್ಲಾ ಎಸ್ಸಿ ಘಟಕದ ಉಪಾಧ್ಯಕ್ಷ ಪ್ರಹ್ಲಾದ್ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here