- ಲಕ್ಷ್ಮೀ ಸ್ಟೋರ್‌ನಿಂದ 50 ಸಾವಿರ ನಗದು
- ಬಸ್ ನಿಲ್ದಾಣ ಬಳಿ ಮೊಬೈಲ್ ಶಾಪ್‌ನಿಂದ 5 ಸಾವಿರ ನಗದು ಕಳವು
- ಕಾಮತ್ ಕೋಲ್ಡ್ ಹೌಸ್‌ನಲ್ಲಿ ಡ್ರಾಯರ್ ಜಾಲಾಡಿದ ಕಳ್ಳರು
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆಯ ಎದುರಿನಲ್ಲಿ ಹಾರ್ಡ್‌ವೇರ್ ಅಂಗಡಿ ಸಹಿತ 3 ಕಡೆಯ ಅಂಗಡಿಗೆ ಕಳ್ಳರು ನುಗ್ಗಿದ್ದು, ಈ ಪೈಕಿ 2 ಅಂಗಡಿಯಿಂದ ನಗದು ಹಣ ಲೂಟಿ ಮಾಡಿದ್ದು, ಕೋಲ್ಡ್ ಹೌಸ್ ಒಂದರಲ್ಲಿ ಡ್ರಾಯರ್ ಜಾಲಾಡಿದ್ದು, ಅದರಲ್ಲಿ ಹಣ ಇಲ್ಲದ ಕಾರಣ ಅಲ್ಲಿಂದ ಬರಿ ಕೈಯಲ್ಲಿ ಮರಳಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆ ಎದುರುಗಡೆ ಇರುವ ಲಕ್ಷ್ಮೀ ಸ್ಟೋರ್‌ನ ಬಾಗಿಲಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಅಂಗಡಿಯ ಡ್ರಾಯರ್‌ನಲ್ಲಿದ್ದ ಸುಮಾರು ೫೦ ಸಾವಿರ ರೂಪಾಯಿ ನಗದು ದೋಚಿದ್ದಾರೆ. ಡ್ರಾಯರ್ ಪಕ್ಕದಲ್ಲಿ ಇದ್ದ 5 ಸಾವಿರ ಮುಖ ಬೆಲೆಯ ಸುಮಾರು 500 ರೂಪಾಯಿ ಇದ್ದ ನಾಣ್ಯದ ಕಟ್ಟು ಅಂಗಡಿಯ ಹೊರಗೆ ಬಿದ್ದುಕೊಂಡಿದ್ದು, ಕಳ್ಳ ಪಾರಾಗುವ ಅವಸರದಲ್ಲಿ ಅದು ಬಿದ್ದು ಹೋಗಿರುವ ಸಾಧ್ಯತೆ ವ್ಯಕ್ತವಾಗಿದೆ.
ಅಂಗಡಿಯ ಬೀಗವನ್ನು ಪಿಕ್ಕಾಸು ಮೂಲಕ ಮೀಟಿ ತೆಗೆದಿರುವ ಸಾಧ್ಯತೆ ವ್ಯಕ್ತವಾಗಿದೆ. ಕಳ್ಳ ತನ್ನ ಉದ್ದನೆ ಕೈಯ ಬನಿಯನ್ ಮತ್ತು ಟವೆಲ್ ಒಂದನ್ನು ಬಿಟ್ಟು ಹೋಗಿರುವುದು ಕಂಡು ಬಂದಿದೆ. ಅಂಗಡಿ ಮಾಲಕ ಗಣೇಶ್ ನಾಯಕ್ ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬಸ್ ನಿಲ್ದಾಣ ಬಳಿಯ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿರುವ ಸಲಾವುದ್ದೀನ್ ಎಂಬವರ ಸೆಲ್ ಸೈಟ್ ಮೊಬೈಲ್ ಶಾಪ್‌ನ ಬಾಗಿಲಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳ ಅಲ್ಲಿ ಡ್ರಾಯರ್‌ನಲ್ಲಿ ಇದ್ದ ಸುಮಾರು 5 ಸಾವಿರ ರೂಪಾಯಿ ನಗದು ಹಣವನ್ನು ದೋಚಿದ್ದಾರೆ.
ಹಣವೂ ಇಡುವುದಿಲ್ಲ, ಬೀಗವೂ ಹಾಕುವುದಿಲ್ಲ..!!
ಬ್ಯಾಂಕ್ ರಸ್ತೆಯಲ್ಲಿರುವ ಕಾಮತ್ ಕೋಲ್ಡ್ ಹೌಸ್ ಬೀಗ ಮುರಿದು ಒಳ ನುಗ್ಗಿರುವ ಕಳ್ಳ ಅಲ್ಲಿನ ಡ್ರಾಯರ್ ಜಾಲಾಡಿದ್ದು, ಅಲ್ಲಿ ನಗದು ಇಲ್ಲದೆ ಬರಿ ಕೈಯಲ್ಲಿ ಹೋಗಿದ್ದಾರೆ. ಈ ಬಗ್ಗೆ ಕೋಲ್ಡ್ ಹೌಸ್‌ನ ಸಂತೋಷ್ ಕಾಮತ್ ಪ್ರತಿಕ್ರಿಯಿಸಿ “ನಮ್ಮಲ್ಲಿಂದ ಈ ಹಿಂದೆ 2 ಬಾರಿ ಕಳವು ಆಗಿತ್ತು. ಪೊಲೀಸ್ ದೂರು ಕೊಟ್ಟಿದ್ದೆ, ಏನೂ ಪ್ರಯೋಜನ ಆಗಿಲ್ಲ, ಬದಲಾಗಿ ಮುರಿದ ಬೀಗ ಹೊಸದಾಗಿ ಹಾಕಲು, ಶೆಟರ್ ಮತ್ತು ಡ್ರಾಯರ್ ಸರಿ ಪಡಿಸಲು 3ರಿಂದ 5 ಸಾವಿರ ರೂಪಾಯಿ ಖರ್ಚು ಆಗಿದೆ. ಹೀಗಾಗಿ ಈದೀಗ ಡ್ರಾಯರ್‌ನಲ್ಲಿ ಹಣವೂ ಇಡುವುದಿಲ್ಲ, ಅದಿಕ್ಕೆ ಬೀಗವೂ ಹಾಕುವುದಿಲ್ಲ”
ಇಂದಿನ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಿಲ್ಲ, ದೂರು ನೀಡಬೇಕಾದರೆ ದಿನ ಇಡೀ ಠಾಣೆಯಲ್ಲಿ ಕಾಯಬೇಕು, ಆಗಾಗ್ಗೆ ಕರೆದಾಗಲೆಲ್ಲ ನಮ್ಮ ಕೆಲಸ ಬಿಟ್ಟು ಹೋಗಬೇಕು, ಹೋದರೂ ಏನೂ ಪ್ರಯೋಜನ ಆಗುವುದಿಲ್ಲ, ಇನ್ನು ಠಾಣೆಯ ಎದುರಿನಲ್ಲೇ ಕಳ್ಳ ಬಂದು ರಾಜಾರೋಷವಾಗಿ ಕದ್ದು ಹೋಗುತ್ತಾನೆ. ವ್ಯವಸ್ಥೆಯೇ ಸರಿ ಇಲ್ಲದ ಮೇಲೆ ದೂರು ನೀಡಿಯಾದರೂ ಏನು ಪ್ರಯೋಜನ ಎಂದು ಸಂತೋಷ್ ಕಾಮತ್ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಅಂಗಡಿಗಳವರ ನಿರ್ಲಕ್ಷತನದ ಬಗ್ಗೆ ಅಸಮಾಧಾನ
ಅಂಗಡಿಯವರು ತಮ್ಮ ಅಂಗಡಿ ಮುಂಭಾಗ, ರಸ್ತೆ ಕಾಣುವಂತೆ ಸಿ.ಸಿ. ಕೆಮರಾ ಅಳವಡಿಕೆ ಮಾಡುವ ಬಗ್ಗೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಹಲವು ಬಾರಿ ನಿರ್ಣಯ ಅಂಗೀಕರಿಸಿ ವರ್ತಕರಿಗೆ ಸೂಚನೆ ನೀಡಿತ್ತು ಮತ್ತು ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿತ್ತು. ಆದರೆ ವರ್ತಕರು ಮಾತ್ರ ಇದನ್ನು ಪಾಲಿಸುತ್ತಲೇ ಇಲ್ಲ, ಹೀಗಾಗಿ ಕಳ್ಳರಿಗೆ ಇದೆಲ್ಲ ವರದಾನವಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.