ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಪ್ರಕರಣ:ಪುತ್ತೂರು ಪುರಸಭಾ ಮುಖ್ಯಾಧಿಕಾರಿಯಾಗಿದ್ದ ಶಿವಲಿಂಗಂ ಕೊಂಡಗುಳಿಗೆ ಜೈಲು ಶಿಕ್ಷೆ- 1 ಕೋಟಿ ರೂ. ದಂಡ

0

ಪುತ್ತೂರು: ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ನೈರ್ಮಲ್ಯ ನಿರೀಕ್ಷಕ ಶಿವಲಿಂಗ ಕೊಂಡಗುಳಿ ವಿರುದ್ಧ ದಾಖಲಾಗಿದ್ದ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಪೂರ್ಣಗೊಳಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಶಿವಲಿಂಗಂ ಕೊಂಡಗುಳಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ ದಂಡ ವಿಧಿಸಿ ಆದೇಶಿಸಿದೆ.


ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸುವಂತೆ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಕರ್ನಾಟಕ ಲೋಕಾಯುಕ್ತ ವಿಭಾಗದ ಮಂಗಳೂರು ಪೊಲೀಸ್ ಉಪಾಧೀಕ್ಷಕ ಉಮೇಶ್ ಜಿ. ಶೇಟ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ಮಂಗಳೂರು ಇದರ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ಸರ್ಕಾರದ ಪರವಾಗಿ ವಾದಿಸಿದ್ದರು.
ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ನೈರ್ಮಲ್ಯ ನಿರೀಕ್ಷಕ ಶಿವಲಿಂಗ ಕೊಂಡಗುಳಿ ಅವರು ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎಂಬ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದ ಪೊಲೀಸರು 2013ರ ಫೆಬ್ರವರಿ 15ರಂದು ದಾಳಿ ನಡೆಸಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಲಂಚ ವಿರೋಧಿ ಕಾಯಿದೆ 1988ರ ರೀತಿಯಡಿ ಪ್ರಕರಣ ದಾಖಲಾಗಿತ್ತು. ಮಂಗಳೂರು 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಇದೀಗ ವಿಚಾರಣೆ ಪೂರ್ಣಗೊಳಿಸಿ ಆರೋಪಿ ಶಿವಲಿಂಗಂ ಕೊಂಡಗುಳಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 1 ಕೋಟಿ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಶಿವಾನಂದ ಕೊಂಡಗುಳಿ ಪ್ರಸ್ತುತ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಿರಿಯ ನೈರ್ಮಲ್ಯ ನಿರೀಕ್ಷಕರಾಗಿ ಸೇವೆಯಲ್ಲಿದ್ದರು. ಈ ಹಿಂದೆ ಅವರು ಪುತ್ತೂರು ಮತ್ತು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here