ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷ ವಿಶ್ವನಾಥ ಶೆಟ್ಟಿಯವರಿಗೆ ’ಜೆಸಿ ಕಲಾರತ್ನ ಪ್ರಶಸ್ತಿ’

0

ನೆಲ್ಯಾಡಿ: ಜೆಸಿಐನ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ’ಕಲಾರತ್ನ’ ಪ್ರಶಸ್ತಿಗೆ ನೆಲ್ಯಾಡಿ ಜೆಸಿಐ ಘಟಕದ ಪೂರ್ವಾಧ್ಯಕ್ಷ, ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಇತಿಹಾಸ ಉಪನ್ಯಾಸಕರೂ ಆಗಿರುವ ವಿಶ್ವನಾಥ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.

ವಿಶ್ವನಾಥ ಶೆಟ್ಟಿಯವರು ನೆಲ್ಯಾಡಿ ಜೆಸಿಐನ 2018ರ ಘಟಕಾಡಳಿತ ಮಂಡಳಿಯ ಅಧ್ಯಕ್ಷರಾಗಿ ಹಲವು ಕಾರ್ಯಕ್ರಮ ಆಯೋಜಿಸಿದ್ದರು. ಇವರು ಸಂಗೀತ, ಯಕ್ಷಗಾನ, ತುಳು ಹಾಗೂ ಕನ್ನಡ ನಾಟಕ ರಚನೆ, ನಿರ್ದೇಶನ ಮತ್ತು ನಟನೆ, ಸಂಗೀತ ನಿರ್ದೇಶಕರಾಗಿ, ಹಾಡುಗಾರರಾಗಿ, ಮ್ಯುಸಿಕ್ ಕಂಪೋಸರ್ ಆಗಿ, ಕೀಬೋರ್ಡ್ ವಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ದುಬೈ ಹಾಗೂ ಕುವೈಟ್‌ನಲ್ಲಿ ವಿವಿಧ ಕಾರ್ಯಕ್ರಮ ನೀಡಿದ್ದರು. ಉಡುಪಿಯಲ್ಲಿ ನಡೆದ ಶಿಕ್ಷಕರ ಪ್ರತಿಭಾಪ್ರದರ್ಶನದಲ್ಲಿ ಇವರು ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಅಲ್ಲದೇ ಸೀನಿಯರ್ ಛೇಂಬರ್ ವತಿಯಿಂದ ನಡೆದ ಆನ್‌ಲೈನ್ ಹಾಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಇವರ ನೇತೃತ್ವದಲ್ಲಿ ನೆಲ್ಯಾಡಿಯಲ್ಲಿ ನಡೆಯುತ್ತಿರುವ ಲಹರಿ ಸಂಗೀತ ಕಲಾಕೇಂದ್ರದಲ್ಲಿ ಸುಮಾರು ೬೦ ವಿದ್ಯಾರ್ಥಿಗಳು ಮ್ಯೂಸಿಕ್ ಹಾಗೂ ಕೀ ಬೋರ್ಡ್ ವಾದನ ಕಲಿಯುತ್ತಿದ್ದಾರೆ. ಅ.16ರಂದು ಬೆಳ್ಮಣ್‌ನ ಮುಹೂರ್ತ ಹಾಲ್‌ನಲ್ಲಿ ನಡೆಯುವ ವ್ಯವಹಾರ ಸಮ್ಮೇಳನ-2022 ಸಂಚಲನ ಸಾಧಕರ ಸಮಾಗಮ ಕಾರ್ಯಕ್ರಮದಲ್ಲಿ ಇವರಿಗೆ ’ಕಲಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪಕೀರಪ್ಪ ಶೆಟ್ಟಿ ಕೆ. ಹಾಗೂ ಪೂವಕ್ಕ ಶೆಟ್ಟಿ ದಂಪತಿ ಪುತ್ರರಾಗಿರುವ ಇವರು ಪತ್ನಿ ಸೌಮ್ಯ ರೈ ಪಿ.ಆರ್., ಪುತ್ರಿಯರಾದ ಸಾಯಿಧೃತಿ ಶೆಟ್ಟಿ ವಿ., ಸಾಯಿಧಾತ್ರಿ ಶೆಟ್ಟಿ ವಿಯವರೊಂದಿಗೆ ನೆಲ್ಯಾಡಿಯ ಕುಂಡಡ್ಕದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here