ಮಾಣಿ ಗ್ರಾ.ಪಂ.ನಲ್ಲಿ ಆರೋಗ್ಯವಂತ ಹೆಣ್ಣು ಶಿಶು ಪ್ರದರ್ಶನ

0

ಮಕ್ಕಳ ಪಾಲನೆ ಪೋಷಣೆಯಲ್ಲಿ ಪೋಷಕರ ಪಾತ್ರ ಮಹತ್ವದ್ದು: ಬಾಲಕೃಷ್ಣ ಆಳ್ವ ಕೊಡಾಜೆ

ವಿಟ್ಲ: ಮನೆಯಲ್ಲಿ ತಯಾರಿಸುವ ಆಹಾರವೇ ಮಕ್ಕಳ ಆರೋಗ್ಯಕ್ಕೆ ಅತೀ ಉತ್ತಮ. ದಿನಬಳಕೆಯ ಗುಣಮಟ್ಟದ ಆಹಾರದಲ್ಲಿ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಅಂಶಗಳಿದ್ದು, ಪೋಷಕರು ಈ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.

ಮಾಣಿ ಗ್ರಾಮ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಇವರ ಜಂಟಿ ಆಶ್ರಯದಲ್ಲಿ ಮಾಣಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಗಳನ್ನು ಉಳಿಸಿ ಮಗಳನ್ನು ಓದಿಸಿ ಯೋಜನೆಯ ಅಂಗವಾಗಿ ಜರುಗಿದ ಆರೋಗ್ಯವಂತ ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಸರಿಸುಮಾರು ಹದಿನೈದು ವರ್ಷಗಳಿಂದ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಸರಕಾರ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿದ್ದು, ಗ್ರಾಮೀಣ ಭಾಗದ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಅಂಗನವಾಡಿ ಮೇಲ್ವಿಚಾರಕಿ ರೋಹಿಣಿ ಮತ್ತು ಕಿರಿಯ ಆರೋಗ್ಯ ಸಹಾಯಕಿ ಭಾರತಿಯವರು, ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ವಹಿಸಬೇಕಾದ ಕಾಳಜಿಯ ಬಗ್ಗೆ ತಿಳಿಯಪಡಿಸಿದರು.

ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರಾದ ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ.ಕೆ.ಮಾಣಿ, ನಾರಾಯಣ ಶೆಟ್ಟಿ, ರಮಣಿ.ಡಿ.ಪೂಜಾರಿ, ಸೀತಾ, ಸುಜಾತಾ, ಅಭಿವೃದ್ಧಿ ಅಧಿಕಾರಿ ಗಿರಿಜಾ, ಕಾರ್ಯದರ್ಶಿ ಭಾರತಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಂಗನವಾಡಿ ಶಿಕ್ಷಕಿ ಲಲಿತಾ ಸ್ವಾಗತಿಸಿದರು. ಶಶಿಕಲಾ ವಂದಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು. ಆರೋಗ್ಯವಂತ ಹೆಣ್ಣು ಶಿಶು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here