ಕೌಕ್ರಾಡಿ: ಕಡಬ ತಹಶೀಲ್ದಾರ್ ಗ್ರಾಮವಾಸ್ತವ್ಯ: ಪ್ಲಾಟಿಂಗ್ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರ ಆಗ್ರಹ

0

ನೆಲ್ಯಾಡಿ: ಕಡಬ ತಾಲೂಕು ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಡಬ ತಾಲೂಕು ತಹಶೀಲ್ದಾರ್ ರಮೇಶ್‌ಬಾಬುರವರ ನೇತೃತ್ವದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅ.15ರಂದು ಕೌಕ್ರಾಡಿ ಗ್ರಾ.ಪಂ.ವ್ಯಾಪ್ತಿಯ ಹೊಸಮಜಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಸುಮಾರು 29 ಅರ್ಜಿಗಳು ಗ್ರಾಮವಾಸ್ತವ್ಯದಲ್ಲಿ ಸಲ್ಲಿಕೆಯಾಗಿದೆ.

ಪ್ಲಾಟಿಂಗ್ ಸಮಸ್ಯೆ ಬಗೆಹರಿಸಿ:
ಸರ್ವೆ ನಂ.43ರ ಪ್ಲಾಟಿಂಗ್‌ಗೆ ಅರ್ಜಿ ಸಲ್ಲಿಸಿದರೂ ಪ್ಲಾಟಿಂಗ್ ಆಗಿಲ್ಲ. ಸಮಸ್ಯೆ ನಿವಾರಿಸಿಕೊಂಡು ಶೀಘ್ರ ಪ್ಲಾಟಿಂಗ್‌ಗೆ ಕ್ರಮ ಕೈಗೊಳ್ಳಬೇಕೆಂದು ನಿವೃತ್ತ ಮುಖ್ಯಶಿಕ್ಷಕ ವೆಂಕಟ್ರಮಣರವರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ರಮೇಶ್‌ಬಾಬು ಅವರು, 50,100 ಎಕ್ರೆ ಒಳಗಡೆ ಜಾಗದ ಪ್ಲಾಟಿಂಗ್ ಬೇಗ ಆಗುತ್ತಿದೆ. ಆದರೆ 3500, 5 ಸಾವಿರ ಎಕ್ರೆ ಇರುವ ಜಾಗದ ಪ್ಲಾಟಿಂಗ್ ತಡವಾಗುತ್ತಿದೆ. ತಹಶೀಲ್ದಾರ್, ಎಡಿಎಲ್‌ಆರ್, ಎಸಿ, ಡಿಡಿಎಲ್‌ಆರ್ ಹಂತದಲ್ಲಿ ಇದು ಅನುಮೋದನೆಯಾಗಬೇಕಾಗುತ್ತದೆ ಎಂದರು.

ಕೌಕ್ರಾಡಿ ಗ್ರಾಮದ ಸರ್ವೆ ನಂ.123ರ ಪ್ಲಾಟಿಂಗ್‌ಗೆ ಸಲ್ಲಿಸಿದ್ದ ಅರ್ಜಿ ಕಳೆದ ಒಂದೂವರೇ ತಿಂಗಳಿನಿಂದ ಸಹಾಯಕ ಆಯುಕ್ತರ ಕಚೇರಿಯಲ್ಲಿಯೇ ಇದೆ. ಅಲ್ಲಿಂದ ಮುಂದೆ ಹೋಗುತ್ತಿಲ್ಲ ಎಂಬ ಆರೋಪವೂ ಸಭೆಯಲ್ಲಿ ಕೇಳಿಬಂತು. ಈ ವೇಳೆ ಮಾತನಾಡಿದ ಗ್ರಾಮಸ್ಥರೂ ಆದ, ಪುತ್ತೂರು ಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡರವರು, ಜಿಲ್ಲಾಧಿಕಾರಿಗಳು ಕಡಬದಲ್ಲಿ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಫಲಾನುಭವಿಗಳು ಅರ್ಜಿ ಕೊಟ್ಟರೇ ಸಾಕು. ಅದಕ್ಕೆ ಸಂಬಂಧಿಸಿದ ದಾಖಲೆ ಕಂದಾಯ ಇಲಾಖೆಯ ಅಧಿಕಾರಿಗಳೇ ಸಂಗ್ರಹಿಸಬೇಕೆಂದು ಸೂಚನೆ ನೀಡಿದ್ದಾರೆ. ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಸಾಲದು. ಸಮಸ್ಯೆ ಪರಿಹಾರ ಸಿಗಬೇಕೆಂದು ಹೇಳಿದರು.

ಶಿರಾಡಿ ಘಾಟಿ ವಾಹನ ಸಂಚಾರ ವಿವಾದ;
ಮಾರನಹಳ್ಳಿಯಿಂದ ಸಕಲೇಶಪುರ ತನಕ ರಾಷ್ಟ್ರೀಯ ಹೆದ್ದಾರಿ ಕುಸಿತಗೊಂಡಿರುವುದರಿಂದ ಶಿರಾಡಿ ಘಾಟಿಯಲ್ಲಿ ರಾತ್ರಿ ಘನ ವಾಹನ ಸಂಚಾರಕ್ಕೆ ಹಾಸನ ಜಿಲ್ಲಾಧಿಕಾರಿಯವರು ನಿಷೇಧ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜೆ6 ಗಂಟೆಯಿಂದಲೇ ಗುಂಡ್ಯದಲ್ಲಿ ಘನ ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗುತ್ತಿದೆ. ಇದು ಗುಂಡ್ಯದಲ್ಲಿ ಪದೇ ಪದೇ ಘರ್ಷಣೆಗೆ ಕಾರಣವಾಗುತ್ತಿದೆ. ಮಾರನಹಳ್ಳಿಯಿಂದ ಮುಂದಕ್ಕೆ ರಸ್ತೆ ಕೆಟ್ಟುಹೋಗಿರುವುದರಿಂದ ಶಿರಾಡಿ ಘಾಟಿಯಲ್ಲಿ ಮಾರನಹಳ್ಳಿ ತನಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ರಮೇಶ್‌ಬಾಬುರವರು, ಲಿಖಿತ ಮನವಿ ಕೊಡಿ, ಜಿಲ್ಲಾಧಿಕಾರಿಯವರ ಗಮನಕ್ಕೆ ತರುವುದಾಗಿ ಹೇಳಿದರು.

ಪುತ್ಯೆ ರಸ್ತೆ ದುರಸ್ತಿಗೊಳಿಸಿ:
ನೆಲ್ಯಾಡಿಯಿಂದ ಬೆಳ್ತಂಗಡಿ ತಾಲೂಕಿನ ಕೊಕ್ಕಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪುತ್ಯೆ ಎಂಬಲ್ಲಿ 800 ಮೀ.ನಷ್ಟು ಸಂಪೂರ್ಣ ಕೆಟ್ಟುಹೋಗಿದ್ದು ವಾಹನ ಸಂಚಾರಕ್ಕೆ ಕಷ್ಟ ಆಗುತ್ತಿದೆ. ಈ ಬಗ್ಗೆ ಹಲವು ಸಲ ಮನವಿ ಮಾಡಿದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ವೆಂಕಟ್ರಮಣ ಭಟ್‌ರವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ್‌ರವರು, ಸದ್ರಿ ರಸ್ತೆ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ಪುತ್ಯೆ ಎಂಬಲ್ಲಿ ಕಾಂಕ್ರಿಟೀಕರಣಕ್ಕೆ ೩ ಕೋಟಿ ರೂ.,ಪ್ರಸ್ತಾವನೆ ಸಲ್ಲಿಸಲಾಗಿದೆ. ಮಾದೇರಿ ರಸ್ತೆಯೂ ಮೇಲ್ದರ್ಜೆಗೇರಿದ್ದು ಅಗಲೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ನೆಲ್ಯಾಡಿ-ಬಲ್ಯ ರಸ್ತೆಯ ಗೋವಿಂದಕಟ್ಟೆಯಲ್ಲಿ ಹೆದ್ದಾರಿ ಬದಿ ಕುಸಿತಗೊಂಡಿದ್ದು ಬಸ್ಸು ಓಡಾಟಕ್ಕೆ ಸಮಸ್ಯೆಯಾಗಿದೆ. ಇದರ ದುರಸ್ತಿಗೂ ಕ್ರಮ ಕೈಗೊಳ್ಳಬೇಕೆಂದು ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ ಒತ್ತಾಯಿಸಿದರು.

ಪ್ರತ್ಯೇಕ ಗ್ರಾ.ಪಂ.ಬೇಡಿಕೆ:
ಇಚ್ಲಂಪಾಡಿ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯಿತಿ ರಚನೆ ಆಗಬೇಕೆಂದು ಗ್ರಾಮಸ್ಥರಾದ ಜಾರ್ಜ್‌ಕುಟ್ಟಿ ಉಪದೇಶಿ, ವರ್ಗೀಸ್ ಅಬ್ರಹಾಂ, ಡೈಸಿ ವರ್ಗೀಸ್ ಮತ್ತಿತರರು ಒತ್ತಾಯಿಸಿದರು. ಇದು ಸರಕಾರದ ಹಂತದಲ್ಲಿ ಆಗಬೇಕಿದೆ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು. ಉಪತಹಶೀಲ್ದಾರ್ ಗೋಪಾಲ್‌ರವರು ಮಾತನಾಡಿ, ಗ್ರಾ.ಪಂ.ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಗ್ರಾಮ ಪಂಚಾಯಿತಿಗೆ ಜಿಲ್ಲಾಧಿಕಾರಿಯವರಲ್ಲಿ ಬೇಡಿಕೆ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು. ಗ್ರಾ.ಪಂ.ರಸ್ತೆಗಳ ದಾಖಲೀಕರಣ ಮಾಡಬೇಕೆಂದು ಗ್ರಾಮಸ್ಥ ಎನ್.ವಿ.ವ್ಯಾಸ ಹೇಳಿದರು.

ಸಿಸಿಟಿವಿ ಅಳವಡಿಸಿ:
ಪೆರಿಯಶಾಂತಿಯಲ್ಲಿ ಸಿಸಿಟಿವಿ ಅಳವಡಿಸಬೇಕೆಂದು ಕಳೆದ ಗ್ರಾಮಸಭೆಯಲ್ಲಿ ಮನವಿ ಮಾಡಿದ್ದೇವೆ. ಇದು ಏನಾಗಿದೆ ಎಂದು ಗ್ರಾಮಸ್ಥ ಜಾರ್ಜ್‌ಕುಟ್ಟಿ ಉಪದೇಶಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ್ಪಿನಂಗಡಿ ಪೊಲೀಸ್ ಠಾಣೆ ಸಿಬ್ಬಂದಿ, ಸಿಸಿಟಿವಿ ಅಳವಡಿಕೆಗೆ ಜಾಗ ಗುರುತಿಸಲಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಅಳವಡಿಕೆ ಮಾಡಿಲ್ಲ. ಸಿಸಿಟಿವಿ ಅಳವಡಿಕೆಗೆ ಇಲಾಖೆಯಿಂದ ಯಾವುದೇ ಅನುದಾನ ಸಿಗುವುದಿಲ್ಲ. ಗ್ರಾಮ ಪಂಚಾಯಿತಿ, ಗ್ರಾಮಸ್ಥರು ಸಹಕಾರ ನೀಡಬೇಕೆಂದು ಹೇಳಿದರು.

ರಸ್ತೆ ಬಂದ್ ತೆರವುಗೊಳಿಸಿ:
ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಸರ್ವೆ ನಂ.201/1ಎ2ರಲ್ಲಿ ಹಾದು ಹೋಗುವ, ಸಾರ್ವಜನಿಕರು ಹಿಂದಿನಿಂದಲೇ ಉಪಯೋಗಿಸುತ್ತಿದ್ದ ರಸ್ತೆ ಬಂದ್ ಮಾಡಲಾಗಿದೆ. ಸದ್ರಿ ಸ್ಥಳದ ಮರು ಅಳತೆ ಮಾಡಿ ಬಂದ್ ಮಾಡಿರುವ ರಸ್ತೆ ತೆರವು ಮಾಡಿಕೊಡಬೇಕೆಂದು ಗ್ರಾಮಸ್ಥರ ಪರವಾಗಿ ಕೌಕ್ರಾಡಿ ಗ್ರಾ.ಪಂ.ಸದಸ್ಯ ಕೆ.ಎಂ.ಹನೀಫ್‌ರವರು ಮನವಿ ಮಾಡಿದರು.

ವೋಟರ್ ಐಡಿಗೆ ಆಧಾರ್ ಲಿಂಕ್:
ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬ್ರ ಲಿಂಕ್ ಮಾಡಲು ಚುನಾವಣಾ ಆಯೋಗದಿಂದ ಸುತ್ತೋಲೆ ಬಂದಿದೆ. ಕಡಬ ತಾಲೂಕಿನಲ್ಲಿ ಈ ಕೆಲಸ ಈಗಾಗಲೇ ಶೇ.೮೨ರಷ್ಟು ಆಗಿದೆ. ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ತಹಶೀಲ್ದಾರ್ ರಮೇಶ್‌ಬಾಬುರವರು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು. ಸಭೆಯಲ್ಲಿ ಫಲಾನುಭವಿಗಳಿಗೆ ವಿವಿಧ ಪಿಂಚಣಿ ಯೋಜನೆಯ ಪತ್ರ ನೀಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕಡಬ ತಹಶೀಲ್ದಾರ್ ರಮೇಶ್‌ಬಾಬುರವರು ಉದ್ಘಾಟಿಸಿ, ಗ್ರಾಮವಾಸ್ತವ್ಯದ ಉದ್ದೇಶದ ಬಗ್ಗೆ ತಿಳಿಸಿದರು. ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷೆ ವನಿತಾ, ಉಪಾಧ್ಯಕ್ಷೆ ಭವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಕಡಬ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ದೈಹಿಕ ಶಿಕ್ಷಣ ಪರವೀಕ್ಷಣಾಧಿಕಾರಿ ಸುಂದರ ಗೌಡ, ಉಪ್ಪಿನಂಗಡಿ ವಲಯ ಉಪವಲಯಾರಣ್ಯಾಧಿಕಾರಿ ಸಂದೀಪ್, ಪಿಡಬ್ಲ್ಯುಡಿ ಇಲಾಖೆಯ ಪ್ರಮೋದ್‌ಕುಮಾರ್, ಅಬಕಾರಿ ಉಪನಿರೀಕ್ಷಕ ಅಬ್ದುಲ್ ಹಮೀದ್, ಕೃಷಿ ಇಲಾಖೆಯ ಭರಮಣ್ಣನವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪುಷ್ಪಾವತಿ, ಮೆಸ್ಕಾಂ ಜೆಇ ರಮೇಶ್ ಹಾಗೂ ಇತರೇ ಇಲಾಖೆ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ ಮತ್ತಿತರರು ವಿವಿಧ ಸಮಸ್ಯೆ ಪ್ರಸ್ತಾವಿಸಿದರು. ಕೌಕ್ರಾಡಿ ಗ್ರಾ.ಪಂ.ಸದಸ್ಯರು, ಗ್ರಾಮಸ್ಥರು, ವಿವಿಧ ಯೋಜನೆಯ ಫಲಾನುಭವಿಗಳು ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೃಷಿ ಅಧಿಕಾರಿಯೊಂದಿಗೆ ಜಟಾಪಟಿ:
ಕೃಷಿ ಅಧಿಕಾರಿ ಭರಮಣ್ಣನವರ ಹಾಗೂ ಕೊಣಾಜೆ ಗ್ರಾಮಸ್ಥ ಲೋಕಯ್ಯ ಗೌಡರ ನಡುವೆ ಸಭೆಯಲ್ಲಿ ಜಟಾಪಟಿಯೂ ನಡೆಯಿತು. ಭರಮಣ್ಣನವರ ಕೃಷಿ ಇಲಾಖೆ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಲೋಕಯ್ಯ ಗೌಡರವರೂ ಮಾಡಿದ ಆರೋಪ ಸಂಘರ್ಷಕ್ಕೆ ಕಾರಣವಾಯಿತು. ಇಬ್ಬರೂ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿದ್ದು ಮಾತಿನ ಜಟಾಪಟಿಗೂ ಕಾರಣವಾಯಿತು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಉಪತಹಶೀಲ್ದಾರ್ ಗೋಪಾಲ್‌ರವರು, ಗ್ರಾಮಸ್ಥರು ಸೌಮ್ಯದಿಂದಲೇ ತಮ್ಮ ಸಮಸ್ಯೆ ಪ್ರಸ್ತಾಪಿಸಿ, ಸಂಘರ್ಷದಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಯಾವುದೇ ಸಮಸ್ಯೆ, ದೂರುಗಳಿದ್ದಲ್ಲಿ ಲಿಖಿತವಾಗಿ ತಹಶೀಲ್ದಾರ್‌ಗೆ ನೀಡಬೇಕೆಂದು ಹೇಳಿ ಚರ್ಚೆಗೆ ತೆರೆ ಎಳೆದರು.

LEAVE A REPLY

Please enter your comment!
Please enter your name here