ಆಲಂಕಾರು ಭಾರತಿ ಶಾಲೆಯ ಶಿಕ್ಷಕ ಯದುಶ್ರೀ ಆನೆಗುಂಡಿ ಸ್ವಯಂ ನಿವೃತ್ತಿ

0

ಪುತ್ತೂರು: ಆಲಂಕಾರು ಭಾರತಿ ಹಿ.ಪ್ರಾ.ಶಾಲೆಯ ಸ್ಥಾಪನಾ ಸದಸ್ಯನಾಗಿದ್ದು ಕಳೆದ 25 ವರ್ಷಗಳಿಂದ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದು ಯದುಶ್ರೀ ಆನೆಗುಂಡಿಯವರು ಶಿಕ್ಷಕ ವೃತ್ತಿಯಿಂದ ಸ್ವಯಂ ನಿವೃತ್ತಿಯಾಗಿದ್ದಾರೆ.

ಯುದಶ್ರೀಯವರು 1987ರಲ್ಲಿ ಹಾಸನದ ಗೊರೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸರಕಾರಿ ಶಿಕ್ಷಕರಾಗಿ ನೇಮಕಗೊಂಡಿದ್ದರೂ ಅನಿವಾರ್ಯವಾಗಿ ಅದನ್ನು ತ್ಯಜಿಸಿ ಕೊಯಿಲ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಗೌರವ ಶಿಕ್ಷಕರಾಗಿ 2 ವರ್ಷ ಸೇವೆ ಸಲ್ಲಿಸಿದ್ದರು. ಇವರು ಕಳೆದ 25 ವರ್ಷಗಳಿಂದ ಆಲಂಕಾರು ಭಾರತಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. ಅಯೋಧ್ಯೆಯ ಶ್ರೀರಾಮ ಮಂದಿರದ ಕರ ಸೇವೆಯಿಂದ ಪ್ರೇರಿತಗೊಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ಶಿವಮೊಗ್ಗ ನಗರ ಹಾಗೂ ಪುತ್ತೂರು ನಗರದಲ್ಲಿ ಸೇವೆ ಸಲ್ಲಿಸಿದರು. ಅನಂತರ ಆಲಂಕಾರು ಹಾಗೂ ರಾಮಕುಂಜ ಮಂಡಲಗಳ ಆರ್‌ಎಸ್‌ಎಸ್ ಕಾರ್ಯವಾಹರಾಗಿ ಹಾಗೂ ಕಡಬ ತಾಲೂಕು ಬೌದ್ದಿಕ್ ಪ್ರಮುಖರಾಗಿ ಸೇವೆ ಸಲ್ಲಿಸಿದರು. ಧಾರ್ಮಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದ ಯದುಶ್ರೀಯವರು, ಕೊಯಿಲ ಗೋಕುಲನಗರ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ, ಆತೂರು ಸದಾಶಿವ ದೇವಸ್ಥಾನದ ಜಾತ್ರೋತ್ಸವ, ಆತೂರು ಗಣೇಶನಗರ ಗಣೇಶೋತ್ಸವ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕೊಯಿಲ ಗ್ರಾಮದ ಶಾಖೆಪುರ, ದೇವಗಿರಿ, ಸಬಳೂರಿನ ಅಯೋಧ್ಯಾನಗರಗಳಲ್ಲಿ ಶಾಖೆ ಪ್ರಾರಂಭಿಸಿ ಕ್ರಮೇಣ ಯುವ ಸಂಘಟನೆಗಳು ಹುಟ್ಟಿಕೊಳ್ಳಲು ಪ್ರೇರಣೆಯಾದರು. ಇವರು ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಸದಾಶಿವ ಹಿಂದೂ ಪರಿಷತ್ ಎಂಬ ಸಂಘಟನೆಯನ್ನು ಪ್ರಾರಂಭಿಸಿ ದೇವಸ್ಥಾನಕ್ಕೆ ಅಗತ್ಯ ವಸ್ತು ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಾಯಿತು. ದೇವಸ್ಥಾನವನ್ನು ಕೇಂದ್ರವಾಗಿಟ್ಟುಕೊಂಡು ಗ್ರಾಮದಲ್ಲಿ ಬಾಲಗೋಕುಲ ಪ್ರಾರಂಭಿಸಿ ಊರಿನ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಉಚಿತ ಪುಸ್ತಕ ವಿತರಣೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನೀಡುವಂತಾದರು. ಪ್ರಸಕ್ತ ಇವರು ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾಗಿದ್ದಾರೆ. ಇವರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಸಾಮರಸ್ಯ, ವ್ಯವಸ್ಥೆ, ಅಭಿವೃದ್ಧಿ, ಸ್ವಾಭಿಮಾನ ಎಂಬ ಧ್ಯೇಯದೊಂದಿಗೆ ಎಲ್ಲಾ ವಿಧದಲ್ಲಿ ದೇವಸ್ಥಾನ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಮಾದರಿ ಗ್ರಾಮ ಅನ್ನುವ ಹೆಸರಿಗೆ ಪಾತ್ರವಾಗಿದೆ.

ಉದಾರ ಮನಸ್ಸು:

ತಮ್ಮ ಜಾಗದಲ್ಲೇ ತಮ್ಮ ತಂದೆಯವರು ಬಡ ಕುಟುಂಬಕ್ಕೆ ಗುಡಿಸಲು ನಿರ್ಮಿಸಿ ಆಶ್ರಯ ನೀಡಿದ್ದರು. ಅದೇ ಬಡ ಕುಟುಂಬಕ್ಕೆ ಸ್ವಲ್ಪ ಹೆಚ್ಚು ಜಾಗ ಕೊಟ್ಟು ಹೊಸದಾಗಿ ಉತ್ತಮ ರೀತಿಯ ಮನೆ, ಹೊಸ ಬಾವಿ, ಗೃಹಪ್ರವೇಶಕ್ಕಾಗಿ ಹಣ ಅಲ್ಲದೆ ಜಾಗದ ಹಕ್ಕುಪತ್ರ ಮಾಡಿಸಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡು ಮಾನವೀಯತೆ ಮರೆದಿದ್ದಾರೆ. ಇವರ ಪತ್ನಿ ಮಮತಾ ಹಾಗೂ ಮಕ್ಕಳೂ ಸಂಘದ ಸಂಘ ಪರಿವಾರದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಇವರ ಮನೆಯನ್ನು ’ಸಂಘದ ಮನೆ’ ಎಂದು ಕರೆಯುತ್ತಾರೆ. ಪತ್ರಿಕಾ ವರದಿಗಾರರಾಗಿಯೂ ದುಡಿದ ಅನುಭವ ಹೊಂದಿರುವ ಯದುಶ್ರೀಯವರು ಸರಳ, ಸಜ್ಜನಿಕೆಯ ಸಾಮಾನ್ಯ ವ್ಯಕ್ತಿವಾಗಿಯೂ ಗುರುತಿಸಿಕೊಂಡಿದ್ದು ಪ್ರಗತಿಪರ ಕೃಷಿಕರೂ ಆಗಿದ್ದಾರೆ. ಇವರು ಕೊಯಿಲ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ಪ್ರೌಢಶಿಕ್ಷಣ, ಉಪ್ಪಿನಂಗಡಿ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪ.ಪೂ.ಶಿಕ್ಷಣ ಪಡೆದು ಹಾಸನದಲ್ಲಿ ಶಿಕ್ಷಕ ತರಬೇತಿ ಪಡೆದುಕೊಂಡಿದ್ದರು.

LEAVE A REPLY

Please enter your comment!
Please enter your name here