ಕೃಷಿ ಬೆಳೆಗಳ ತಲ್ಲಣಗಳ ನಡುವೆ ಕೃಷಿಕರ ಕೈಹಿಡಿಯಬಲ್ಲದು ಮೀನು ಸಾಕಾಣಿಕೆ

0

ಒಳನಾಡು ಮೀನುಗಾರಿಕೆಗೆ ಇದೆ ವಿಫುಲ ಅವಕಾಶ
ಕೇಂದ್ರ ಸರಕಾರದಿಂದಲೂ ದೊರೆಯುತ್ತಿದೆ ಉತ್ತೇಜನ

ಪುತ್ತೂರು: ಇಂದು ಉದ್ಯಮ ಕ್ಷೇತ್ರವು ಹಲವು ಏಳುಬೀಳುಗಳನ್ನು ಕಾಣುತ್ತಿದೆ. ಕೊರೋನಾ ಅವಧಿಯಲ್ಲಿ ಬಾಗಿಲು ಎಳೆದುಕೊಂಡ ಅದೆಷ್ಟೋ ಉದ್ಯಮಗಳು ಮತ್ತೆ ತಲೆಯೆತ್ತಿಲ್ಲ. ಈ ಅವಧಿಯಲ್ಲಿ ನಿಶ್ಚಿಂತೆಯಿಂದ ಇದ್ದುದು ಕೃಷಿಕರ ವರ್ಗ ಮಾತ್ರ. ಆದರೆ ಕೃಷಿಯೂ ಇಂದು ನಷ್ಟದ ಹಾದಿಯಲ್ಲೇ ಇದೆ. ಹವಾಮಾನ ವೈಪರೀತ್ಯ ಕೃಷಿ ಕ್ಷೇತ್ರವನ್ನು ತಲ್ಲಣಗೊಳಿಸುತ್ತಿದೆ. ಬೆಲೆ ಕುಸಿತ, ಮಾರುಕಟ್ಟೆಯ ಅಸ್ಥಿರತೆಯೂ ಕಾಡುತ್ತಿದೆ. ಇನ್ನು ಕರಾವಳಿ ಭಾಗದ ವಿಚಾರಕ್ಕೆ ಬಂದರೆ ಅಡಿಕೆ ಬೆಳೆಯು ಸದ್ಯಕ್ಕೆ ಬೆಳೆಗಾರರ ಕೈಹಿಡಿದಿದೆ. ಸದ್ಯ ಉತ್ತಮ ಬೆಲೆ ಹೊಂದಿರುವ ಅಡಿಕೆಯು ಇದೇ ಬೇಡಿಕೆಯನ್ನು ಉಳಿಸಿಕೊಳ್ಳುತ್ತದೆ ಎನ್ನಲು ಸಾಧ್ಯವಿಲ್ಲ. ಯಾಕೆಂದರೆ ವಿದೇಶಗಳಿಂದ ಮತ್ತೆ ಅಡಿಕೆ ಆಮದಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಮಲೆನಾಡಿನ ಜೊತೆಜೊತೆಗೆ ಬಯಲು ಸೀಮೆಗಳು, ಘಟ್ಟ ಪ್ರದೇಶಗಳಲ್ಲಿ ಕೂಡ ಅಡಿಕೆ ಬೆಳೆಯಲಾರಂಭಿಸಿದ್ದಾರೆ. ಹೀಗಾಗಿ ಅಡಿಕೆಯ ಬೆಲೆಯು ಮತ್ತೆ ಕಡಿಮೆಯಾಗಲಾರದು ಎನ್ನುವುದಕ್ಕೆ ಯಾವುದೇ ಖಾತ್ರಿಯಿಲ್ಲ. ಅಡಿಕೆಯ ಜೊತೆಗೆ ಇರುವ ತೆಂಗು, ಕೊಕೋ, ಕಾಳುಮೆಣಸು ಕೂಡ ನಿರೀಕ್ಷಿತ ಮಟ್ಟದಲ್ಲಿ ಕೃಷಿಕರ ಕೈಹಿಡಿಯುತ್ತಿಲ್ಲ. ಅಡಿಕೆ ತೋಟಗಳನ್ನು ನೆಲಸಮ ಮಾಡಿ ಹಾಕಿದ ರಬ್ಬರ್‌ನ ಬೆಲೆಯೂ ಸಂಪೂರ್ಣ ನೆಲಕಚ್ಚಿದೆ. ಹೀಗಾಗಿ ಈ ಭಾಗದ ರೈತರು ಪರ್ಯಾಯ ಆದಾಯದ ಮೂಲದತ್ತ ಗಮನಹರಿಸಲೇಬೇಕಾದ ಪರಿಸ್ಥಿತಿ ಉದ್ಭವವಾಗಿದೆ.

ಕೋವಿಡ್‌ನಂತಹ ಸಂದರ್ಭದಲ್ಲಿ ಕೂಡ ತನ್ನ ಬೇಡಿಕೆಯನ್ನು ಉಳಿಸಿಕೊಂಡ ಕ್ಷೇತ್ರ ಎಂದರೆ ಅದು ಆಹಾರೋದ್ಯಮ. ನಿಜ ವಿಚಾರ ಎಂದರೆ ಎಂತಹ ಕೋವಿಡ್, ಎಂತಹ ಲಾಕ್‌ಡೌನ್ ಬಂದರೂ ಎಂದಿಗೂ ಬೇಡಿಕೆಯನ್ನು ಕಳೆದುಕೊಳ್ಳದ ಕ್ಷೇತ್ರವಿದು. ಹೀಗಾಗಿ ಕೇಂದ್ರ ಸರಕಾರ ಕೂಡ ಆಹಾರೋತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಭಾಗದ ಕೃಷಿಕರು ಸುಲಭದಲ್ಲಿ ಮಾಡಿಕೊಳ್ಳಬಹುದಾದ, ಸುಲಭದಲ್ಲಿ ಆದಾಯ ಗಳಿಸಿಕೊಳ್ಳಬಹುದಾದ ಉದ್ಯಮವೆಂದರೆ ಅದು ಮೀನು ಸಾಕಾಣಿಕೆ. ಹೌದು, ಒಳನಾಡು ಮೀನು ಸಾಕಾಣಿಕೆ ಇಂದಿನ ದಿನಗಳಲ್ಲಿ ಹೆಚ್ಚಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಮಾತ್ರವಲ್ಲ, ಆಹಾರೋದ್ಯಮ ಕ್ಷೇತ್ರದ ಪ್ರಮುಖ ಅಂಗವಾಗಿ ಗುರುತಿಸಿಕೊಂಡಿದೆ.

ಒಳನಾಡು ಮೀನು ಸಾಕಾಣಿಕೆ: ಮೀನು ಒಂದು ಪೌಷ್ಠಿಕ ಮತ್ತು ಪೋಷಕ ಆಹಾರ, ಮೀನಿನ ಮಾಂಸ ನಮ್ಮ ದೇಹದ ದೃಢತೆಗೆ ಮತ್ತು ಆರೋಗ್ಯಕ್ಕೆ ಅಗತ್ಯವಾದ ಸಸಾರಜನಕ, ಜೀವಸತ್ವ ಮತ್ತು ಲವಣಗಳನ್ನು ಒದಗಿಸುತ್ತದೆ. ಇತರೆ ಮಾಂಸಗಳಿಗಿಂತ ಶ್ರೇಷ್ಠ ಮತ್ತು ಕಡಿಮೆ ಖರ್ಚಿನಲ್ಲಿ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಮೀನುಗಳು ಸಮುದ್ರದಲ್ಲಿ ಸಿಗುವುದು ಎನ್ನುವುದು ಬಹುತೇಕರ ಕಲ್ಪನೆ. ಆದರೆ ಎಲ್ಲವೂ ಸಮುದ್ರದಲ್ಲಿ ಸಿಗುವ ಮೀನುಗಳನ್ನೇ ನಾವು ತಿನ್ನುವುದು ಎನ್ನಲಾಗುವುದಿಲ್ಲ. ಯಾಕೆಂದರೆ ಸಿಹಿನೀರಿನಲ್ಲಿ ಬೆಳೆಯುವ ಮೀನುಗಳು ಕೂಡ ಹಲವು ಇವೆ. ಈ ಭಾಗಕ್ಕೆ ಒಳನಾಡು ಮೀನುಗಾರಿಕೆ ಹೊಸತಾದರೂ ಹಲವು ಕಡೆಗಳಲ್ಲಿ ಒಳನಾಡು ಮೀನುಗಾರಿಕೆ ಅಥವಾ ಸಾಕಾಣಿಕೆ ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಮುಖವಾಗಿ ಕೆರೆಗಳು, ಕೃಷಿ ಹೊಂಡ, ತಡೆ ಅಣೆಕಟ್ಟು, ಬೋರ್‌ವೆಲ್ ಆಧಾರಿತ ನೀರು ಸಂಗ್ರಹಣಾ ಕೊಳಗಳು, ನೀರಾವರಿ ಬಾವಿಗಳು ಮುಂತಾದ ಜಲ ಸಂಪನ್ಮೂಲಗಳಿದ್ದಲ್ಲಿ ಮೀನು ಸಾಕಣೆಗೆ ವಿಪುಲ ಅವಕಾಶವಿದೆ. ಈ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಮೀನು ಸಾಕಣೆ ಮಾಡಿದರೆ ಗ್ರಾಮೀಣ ಮಟ್ಟದಲ್ಲಿ ಕಡಿಮೆ ಖರ್ಚಿನಲ್ಲಿ ಪೌಷ್ಠಿಕ ಆಹಾರ ದೊರೆತಂತಾಗುತ್ತದೆಯಲ್ಲದೆ ರೈತರ ಆರ್ಥಿಕ ಅಭಿವೃದ್ಧಿಗೂ ಸಹ ಸಹಕಾರಿಯಾಗುತ್ತದೆ.

ನಮ್ಮಲ್ಲಿದೆ ವಿಫುಲ ಸಂಪನ್ಮೂಲ-ಅವಕಾಶ: ನಮ್ಮ ರಾಜ್ಯದಲ್ಲಿ ಒಟ್ಟಾರೆ ಸಿಹಿನೀರಿನ ಪ್ರದೇಶವು 18 ಲಕ್ಷ ಎಕರೆಗಳಿಗಿಂತಲೂ ಹೆಚ್ಚು ಇದೆ. ಇದರಲ್ಲಿ ಕೆರೆಗಳೇ ಸುಮಾರು 7.5 ಲಕ್ಷ ಎಕರೆಯನ್ನು ಒದಗಿಸಿವೆ. ಅದೂ ಸಾಲದೆಂಬಂತೆ 9000 ಕಿಲೋ ಮೀಟರ್‌ಗಳ ಉದ್ದದ ನದಿ ಕಾಲುವೆಗಳ ಹರಿವೂ ಸಿಗಲಿದೆ. ಇದೆಲ್ಲವೂ ನಾಡಿನ ಸಿಹಿನೀರಿನ ಸಂಪನ್ಮೂಲವಾಗಿದ್ದು, ಬಳಕೆಯನ್ನು ಮಾಡುವಷ್ಟು ಮಾಡುತ್ತಿಲ್ಲವೆಂಬುದು ಸತ್ಯ. ರಾಜ್ಯವು ಸಿಹಿನೀರಿನ ಪ್ರದೇಶವನ್ನು ಒಳಗೊಂಡಂತೆ ದೇಶದಲ್ಲೇ ಐದನೆಯ ಸ್ಥಾನದಲ್ಲಿದೆ, ಆದರೂ ಅದನ್ನು ಉತ್ಪನ್ನದಾಯಕವಾಗಿಸುವ ನಿಟ್ಟಿನಲ್ಲಿ ಹತ್ತನೇ ಸ್ಥಾನದಲ್ಲಿದೆ. ಇರುವ ಅವಕಾಶವನ್ನು ಬಳಸಿಕೊಳ್ಳುವಲ್ಲಿಯ ಜಾಣತನವನ್ನು ನಾವಿನ್ನೂ ತೋರಿಸಿಲ್ಲ ಎನ್ನುವುದು ಸತ್ಯ. ನಮ್ಮಲ್ಲಿ ಅನೇಕ ಜಲಾಶಯಗಳು, ಅಣೆಕಟ್ಟುಗಳು, ಸಾಲದೆಂಬಂತೆ ಅನೇಕ ಕೆರೆಗಳು ಇವೆ. ಈ ಭಾಗದಲ್ಲಿ ಹೆಚ್ಚು ಕೃಷಿ ತೋಟಗಳೇ ಇರುವುದರಿಂದ ತೋಟದಲ್ಲಿ ಕೃಷಿ ನೀರಾವರಿಗೆಂದೇ ಬಳಸುವ ಕೆರೆಗಳು, ಹಳ್ಳಗಳು ಬೇಕಾದಷ್ಟಿವೆ. ಇವುಗಳಲ್ಲೇ ಅತ್ಯಂತ ಸುಲಭವಾಗಿ ಮೀನು ಸಾಕಾಣಿಕೆ ಮಾಡಿ ಆದಾಯ ಗಳಿಸಲು ಬಹಳಷ್ಟು ಅವಕಾಶಗಳಿವೆ. ಕೃಷಿ ನೀರಾವರಿಗಷ್ಟೇ ಬಳಸುವ ಕೆರೆಗಳನ್ನು, ಬಾವಿಗಳನ್ನು ಇದಕ್ಕೆ ಬಳಸಿಕೊಳ್ಳಬಹುದು.

ಯಾವುದು ಸೂಕ್ತ?: ಮೀನು ಸಾಕಾಣಿಕೆಯಲ್ಲಿ ಹಲವು ಪ್ರಬೇಧಗಳು ಇವೆ. ಈ ಪೈಕಿ ಕಾರ್ಪ್, ಸಾಲ್ಮನ್, ಟಿಲಾಪಿಯಾ, ಬೆಕ್ಕುಮೀನು, ಕ್ಯಾಟ್ಲಾ, ರೋಹು, ಹುಲ್ಲು ಕಾರ್ಪ್, ಸಾಮಾನ್ಯ ಕಾರ್ಪ್, ಟಿಲಾಪಿಯಾ ಮೀನುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇವುಗಳನ್ನು ಮಿಶ್ರಬೆಳೆಯ ರೂಪದಲ್ಲಿಯೂ ಬೆಳೆಯಬಹುದು. ಜೊತೆಗೆ ಒಂದೇ ಪ್ರಬೇಧದ ಮೀನನ್ನು ಕೂಡ ಸಾಕಬಹುದು. ಆದರೆ ಮಿಶ್ರವಾಗಿ ಸಾಕುವುದರಿಂದ ವೆಚ್ಚ ಕಡಿಮೆ, ಲಾಭ ಹೆಚ್ಚು.

ತೋಟಕ್ಕೆ ಬೇಕೆಂದಿಲ್ಲ ಇತರೆ ಗೊಬ್ಬರ: ಮೀನು ಸಾಕಾಣಿಕೆ ಮಾಡುವುದರಿಂದ ಆರ್ಥಿಕವಾಗಿ ಬರುವ ಲಾಭ ಒಂದುಕಡೆಯಾದರೆ ಇದರ ಮೂಲಕ ಕೃಷಿಕರಿಗೆ ಪರೋಕ್ಷವಾಗಿ ಬಹಳಷ್ಟು ಲಾಭವಿದೆ. ಎಲ್ಲಿಯವರೆಗೆ ಅಂದರೆ ಕೃಷಿ ತೋಟಕ್ಕೆ ಬಳಸುವ ಗೊಬ್ಬರಗಳ ಖರ್ಚನ್ನು ಇದು ಸಂಪೂರ್ಣ ನಿವಾರಿಸುತ್ತದೆ. ಅದು ಹೇಗೆಂದರೆ, ಸಾಮಾನ್ಯವಾಗಿ ಅಡಿಕೆ ತೋಟಗಳಿಗೆ ಬೋರ್‌ವೆಲ್‌ನ ನೀರನ್ನು ನೇರವಾಗಿ ಹಾಯಿಸಲಾಗುತ್ತದೆ. ಬೋರ್‌ವೆಲ್ ನೀರಿನಲ್ಲಿ ಯಾವುದೇ ಬಗೆಯ ಬೆಳೆಯು ಬೆಳೆಯಲು ಬೇಕಾದಂತಹ ಅಂಶಗಳು ಇರುವುದಿಲ್ಲ. ಬೆಳೆಗಳಿಗೆ ಅಗತ್ಯವಾಗಿ ಬೇಕಾದ ಎನ್‌ಪಿಕೆಯನ್ನು ಗೊಬ್ಬರಗಳ ಮೂಲಕವೇ ಪೂರೈಕೆ ಮಾಡಬೇಕಾಗುತ್ತದೆ. ಆದರೆ ಅದೇ ಬೋರ್‌ವೆಲ್ ನೀರನ್ನು ಮೀನು ಸಾಕುವ ಟ್ಯಾಂಕ್ ಅಥವಾ ಕೊಳಕ್ಕೆ ಹಾಯಿಸಿ, ಅಲ್ಲಿಂದ ಆ ನೀರನ್ನು ಕೃಷಿಗೆ ಉಪಯೋಗ ಮಾಡಿದರೆ ಆ ನೀರಿನಲ್ಲಿರುವಷ್ಟು ಸತ್ವ ಗೊಬ್ಬರದಲ್ಲಿ ಸಿಗುವ ಎನ್‌ಪಿಕೆ ಮಟ್ಟಕ್ಕಿಂತಲೂ ಅಧಿಕವಾಗಿರುತ್ತದೆ. ಈ ನೀರನ್ನು ಬಳಸುವ ತೋಟದ ಮಂದಿ ಬೇರೆ ಯಾವುದೇ ಗೊಬ್ಬರ ಬಳಸಬೇಕಿಲ್ಲ ಎನ್ನುವುದು ಮೀನು ಸಾಕಾಣಿಕೆಯ ಮತ್ತೊಂದು ಲಾಭ.

ಆಹಾರ-ಪೂರೈಕೆ: ಮೀನುಗಳು ಕಡಿಮೆ ಅವಧಿಯಲ್ಲಿ ಉತ್ತಮ ಇಳುವರಿ ಪಡೆಯಬೇಕೆಂದರೆ ಸಂಪೂರ್ಣ ಸತ್ವಯುತ ಆಹಾರವನ್ನು ಒದಗಿಸುವುದು ಸೂಕ್ತ. ಮಾರುಕಟ್ಟೆಯಲ್ಲಿ ಹಲವು ಉತ್ಪನ್ನಗಳು ಲಭ್ಯವಿದ್ದರೂ ಗ್ರೋವಿನ್ ಮೀನಿನ ಆಹಾರವು ಉತ್ತಮ ಫಲಿತಾಂಶ ನೀಡುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ನೀಡುವ ಮೂಲಕ ಬೆಳೆಗಾರರಿಗೆ ಅನುಕೂಲ ಮಾಡಿಕೊಡುತ್ತದೆ. ಸರಿಸುಮಾರು 8-12 ತಿಂಗಳ ಅವಧಿಯಲ್ಲಿ ಪ್ರತೀ ಮೀನು 2 ರಿಂದ 2.5 ಕೆ.ಜಿ ಬೆಳವಣಿಗೆಯಾಗುತ್ತದೆ. ಕೆಜಿಗೆ 90 ರಿಂದ 120 ರೂ ಸಾಮಾನ್ಯವಾಗಿ ಇರುತ್ತದೆ. 15 ಸಾವಿರ ಮೀನುಗಳಿಗೆ ವರ್ಷದಲ್ಲಿ 3 ಲಕ್ಷ ರೂ ಖರ್ಚು ಬರುವುದು. 15 ಸಾವಿರ ಮೀನುಗಳಲ್ಲಿ 10 ಸಾವಿರ ಮೀನುಗಳಿದ್ದರೂ 10 ಲಕ್ಷ ಆದಾಯ ಬರುತ್ತದೆ, ಖರ್ಚನ್ನು ತೆಗೆದರೂ 6 ರಿಂದ 7 ಲಕ್ಷ ಲಾಭ ಗಳಿಸಬಹುದು. ಸಿಹಿನೀರಿನ ಮೀನುಗಳಿಗೆ ಕೂಡ ತನ್ನದೇ ಆದ ಮಾರುಕಟ್ಟೆ ಮೌಲ್ಯವಿದೆ, ಬೇಡಿಕೆಯೂ ಇದೆ.

ನಮ್ಮ ವಾತಾವರಣಕ್ಕೆ ಸೂಕ್ತ: ಹೇಳಿಕೇಳಿ ನಮ್ಮ ಭಾಗವು ಹೇರಳ ಜಲಸಂಪತ್ತು ಹೊಂದಿರುವ ಪ್ರದೇಶ. ಇಲ್ಲಿ ನೀರಾವರಿ ಕೆರೆಗಳು, ತೊರೆಗಳು ಬಹಳಷ್ಟಿವೆ. ಈ ನಡುವೆ ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಹಲವು ಕೃಷಿಕರು ತಮ್ಮ ತೋಟಗಾರಿಕಾ ಬೆಳೆಗಳ ನಡುವೆ ಮೀನು ಸಾಕಾಣಿಕೆಯನ್ನು ಆರಂಭಿಸಿದ್ದಾರೆ. ಈ ಮೂಲಕ ನಮ್ಮ ಭಾಗದಲ್ಲಿ ಕೂಡ ಮೀನು ಸಾಕಾಣಿಕೆ ಯಶಸ್ಸು ಕಾಣುತ್ತದೆ ಎನ್ನುವುದಕ್ಕೆ ನಿದರ್ಶನಗಳು ಇವೆ. ಹೀಗಾಗಿ ಮಾರುಕಟ್ಟೆಯಲ್ಲಿ ಮೀನು ಅಥವಾ ಮೀನು ಉತ್ಪನ್ನಗಳಿಗೆ ಬಹಳ ಬೇಡಿಕೆಯಿರುವುದರಿಂದ ನೀವು ಮೀನು ಕೃಷಿ ವ್ಯವಹಾರದಿಂದ ಉತ್ತಮ ಲಾಭವನ್ನು ಪಡೆಯಬಹುದು. ವಾಣಿಜ್ಯ ಮೀನು ಸಾಕಾಣಿಕೆಯಿಂದ ಹೊಸ ವೃತ್ತಿ, ವ್ಯವಹಾರ ಮತ್ತು ಆದಾಯದ ಮೂಲವನ್ನು ಸ್ಥಾಪಿಸಲು ಉತ್ತಮ ಅವಕಾಶಗಳಿವೆ. ಈ ವ್ಯವಹಾರದಿಂದ ಒಳ್ಳೆಯ ಲಾಭವನ್ನು ಸಹ ಪಡೆಯಬಹುದು.

ಪುತ್ತೂರಿನಲ್ಲಿ ಕೂಡ ಮೀನು ಸಾಕಾಣಿಕೆಯನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ದರ್ಬೆ ರೈ’ಸ್ ಸರ್ವೀಸ್ ಸ್ಟೇಷನ್‌ನ ಮಾಲಕ ಸಿದ್ಧಾರ್ಥ್ ಶೆಟ್ಟಿಯವರು ಯಶಸ್ವಿಯಾಗಿ ಮೀನು ಕೃಷಿ ಮಾಡುತ್ತಿದ್ದಾರೆ. ಮೀನು ಸಾಕಾಣಿಕೆ ಮಾಡಲು ಆಸಕ್ತಿಯುಳ್ಳವರಿಗೆ ಮಾರ್ಗದರ್ಶನ, ಮಾಹಿತಿ ನೀಡಲು ಸಜ್ಜಾಗಿದ್ದಾರೆ. ಆಸಕ್ತರು ಸಿದ್ಧಾರ್ಥ್ ಶೆಟ್ಟಿಯವರ ಮೊ.ಸಂ.9535216340ನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here