ಪುತ್ತೂರು;ಪೂರ್ವ ಕಾಲದಿಂದಲೂ ದೇಶದಲ್ಲಿ ಅನ್ಯೋನ್ಯತೆಯಿಂದಲೇ ಇದ್ದ ಹಿಂದು, ಮುಸ್ಲಿಮರ ಮಧ್ಯೆ ರಾಜಕೀಯ ಕಾರಣಕ್ಕಾಗಿ ಬಿತ್ತಲಾದ ಕೋಮು ವಿಷ ಬೀಜವು ಇಂದು ಬೆಳೆದು ಹೆಮ್ಮರವಾಗಿ ಇದರಿಂದಾಗಿ ದೇಶದ ಪ್ರಗತಿ ಕುಂಠಿತ ಗೊಂಡಿದೆ. ಕೋಮು ದ್ವೇಷವನ್ನು ಬೇರು ಸಮೇತ ಕಿತ್ತು ಹಾಕಲು ನಿಜವಾದ ದೇಶ ಪ್ರೇಮಿಗಳು ಎಲ್ಲವನ್ನೂ ಮೆರೆತು ಒಂದಾಗ ಬೇಕಾದ ಕಾಲ ಸನ್ನಿಹಿತವಾಗಿದೆ. ಹಿಂದು ಮುಸ್ಲಿಮರು ಪರಸ್ಪರರನ್ನು ದಮನಿಸಲು ಹೊರಟರೆ ಅದರಿಂದ ಎಲ್ಲರಿಗೂ ಸಂಕಷ್ಟ ಉಂಟಾಗಿ ಶಾಂತಿ ಮರೀಚಿಕೆಯಾಗುತ್ತೆ ಎಂದು ಸಾಮಾಜಿಕ ಚಿಂತಕ ಎಸ್ ಬಿ ದಾರಿಮಿ ಹೇಳಿದ್ದಾರೆ.
‘ನಿಮ್ಮೊಂದಿಗೆ ವೈರತ್ವ ಇಲ್ಲದ ಇತರ ಧರ್ಮೀಯರಿಗೆ ನೀವು ಸಾಧ್ಯವಾದಷ್ಟು ಸಹಾಯ,ಸಹಕಾರ ನೀಡಿರಿ’ ಎಂಬ ಕುರಾನಿನ ಸಂದೇಶ ಪಾಲಿಸಲು ಮುಸ್ಲಿಮರು ಹಾಗೂ ಜಗತ್ತಿನ ಸರ್ವರಿಗೂ ಒಳಿತಾಗಲಿ ಎಂಬ ಧರ್ಮೋಪದೇಶವನ್ನು ಪಾಲನೆ ಮಾಡಲು ಹಿಂದುಗಳು ಮುಂದೆ ಬಂದರೆ ದೇಶದ ಅರ್ಧಕ್ಕರ್ಧ ಸಮಸ್ಯೆ ತನ್ನಿಂತಾನೆ ಇಲ್ಲದಾಗುತ್ತೆ. ಪ್ರತೀ ದೇವಸ್ಥಾನ, ಮಸೀದಿ, ಇಗರ್ಜಿಗಳು ಎಲ್ಲಾ ಧರ್ಮೀಯರನ್ನು ಕರೆಸಿ ಸೌಹಾರ್ದ ಕಾರ್ಯಕ್ರಮಗಳನ್ನು ಇಟ್ಟು ಕೊಳ್ಳಲು ಮುಂದೆ ಬರಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾತ್ ಆಶ್ರಯದಲ್ಲಿ ಪುತ್ತೂರು ಬದ್ರಿಯಾ ಮಸೀದಿ ಸಭಾಂಗಣದಲ್ಲಿ ನಡೆದ ಮೀಲಾದ್ ಮೆಹಫಿಲ್ ಕಾರ್ಯಕ್ರಮದಲ್ಲಿ ಅವರು ಹಿತವಚನ ನೀಡಿದರು.
ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಪೂರ್ವಿಕರ ಹಾದಿಯಲ್ಲಿ ಪರಸ್ಪರ ಕೊಡುಕೊಳ್ಳುವಿಕೆಯೊಂದಿಗೆ ಬದುಕುವುದೇ ನಿಜವಾದ ಪ್ರವಾದಿ ಸಂದೇಶ. ದರ್ಮವನ್ನು ಸಂಕುಚಿತ ಗೊಳಿಸಿ ಪರಸ್ಪರ ದ್ವೇಷ ಕಟ್ಟಿಕೊಳ್ಳುವುದರಿಂದ ಧರ್ಮ ಹಾಳಾಗುತ್ತದೆ.ಪ್ರವಾದಿ ಪ್ರೇಮವನ್ನು ನಿಜ ಜೀವನದಲ್ಲಿ ಅಳವಡಿಸಿ ಕೊಂಡರೆ ನಮ್ಮ ಬದುಕು ಬಂಗಾರ ಆಗುತ್ತದೆ ಎಂದರು. ಸತ್ತಾರ್ ಸಖಾಫಿ ಪುತ್ತೂರುರವರು ಮಾತನಾಡಿ ಸಂಯುಕ್ತ ಜಮಾತ್ ಸಮಿತಿ ಇಂತಹ ಕಾರ್ಯಕ್ರಮಗಳನ್ನು ಸಂದರ್ಭಕ್ಕನುಸಾರ ಆಯೋಜಿಸುವ ಮೂಲಕ ಜನಮನ್ನಣೆ ಪಡೆದಿದೆ ಎಂದರು.
ಸಂಪ್ಯ ಅಬ್ದುಲ್ ಹಮೀದ್ ದಾರಿಮಿ ದುಆಗೈದರು. ಸಂಯುಕ್ತ ಜಮಾತ್ ಅಧ್ಯಕ್ಷ ಪುತ್ತೂರು ಟಿಂಬರ್‌ನ ಕೆ.ಪಿ. ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಲ್ ಟಿ ಅಬ್ದುಲ್ ರಝಾಕ್ ಹಾಜಿ ಸ್ವಾಗತಿಸಿದರು. ಕೋಶಾಧಿಕಾರಿ ಬಿ.ಎ. ಶಕೂರ್ ಹಾಜಿ ಕಲ್ಲೇಗ ವಂದಿಸಿದರು.
ಹಾಜಿ ಅಬ್ದಲ್ ರಹಿಮಾನ್ ಆಝಾದ್ ದರ್ಬೆ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಪ್ರಧಾನ ಕಾರ‍್ಯದರ್ಶಿ ಯಕೂಬ್ ಖಾನ್ ಬಪ್ಪಳಿಗೆ, ಅಬ್ದುಲ್‌ರಹಿಮಾನ್ ಮುಸ್ಲಿಯರ್, ಅಬ್ದುಲ್ ಅಝೀಝ್ ಹಾಜಿ ಮೊಟ್ಟೆತಡ್ಕ, ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ, ಖಾಸಿಂ ಹಾಜಿ ಮಿತ್ತೂರು, ಅಝೀಝ್ ಹಾಜಿ ದರ್ಬೆ, ಹಸೈನಾರ್ ದರ್ಬೆ, ಹಸೈನಾರ್ ಹಾಜಿ ಸಿಟಿ ಬಜಾರ್, ಯು ಅಬ್ದುಲ್ಲ ಹಾಜಿ ಸಾಲ್ಮರ, ನೂರುದ್ದೀನ್ ಸಾಲ್ಮರ, ಕುಂಞಾಲಿ ಹಾಜಿ, ಉಮ್ಮರ್ ಹಾಜಿ ಚಾಪಲ್ಲ, ಬಾಲಾಯ ಅಬ್ದುಲ ರಹಿಮಾನ್ ಹಾಜಿ, ಪತ್ರಕರ್ತ ಶೇಖ್ ಜೈನುದ್ದೀನ್, ಪಿ.ಬಿ. ಅಬ್ದುಲ್ಲ ಹಾಜಿ ಬಪ್ಪಳಿಗೆ, ಹಮೀದ್ ಸೋಂಪಾಡಿ, ಶರೀಪ್ ಸಾಲ್ಮರ, ಅಶ್ರಫ್ ಕಲ್ಲೇಗ, ಫಾಲುಲ್ ಹಾಜಿ ಪಡೀಲ್ , ನ್ಯಾಯವಾದಿ ಸಿದ್ಧೀಕ್, ಆರ್ ಪಿ ರಝಾಕ್, ಇಸ್ಮಾಯಿಲ್ ಸಾಲ್ಮರ, ಸೂಫಿ ಬಪ್ಪಳಿಗೆ, ಇಬ್ರಾಹಿಂ ಮುಸ್ಲಿಯಾರ್ ಭಾಗವಹಿಸಿದ್ದರು.