ಬಾಲಕಿಗೆ ಲೈಂಗಿಕ ಕಿರುಕುಳ, ಆತ್ಮಹತ್ಯೆಗೆ ದುಷ್ಪ್ರೇರಣೆ: ಪೊಲೀಸ್ ಕಾನ್ಸ್ಟೇಬಲ್ ಪ್ರವೀಣ್ ಸಾಲ್ಯಾನ್ ಗೆ ಜೀವಾವಧಿ ಶಿಕ್ಷೆ

0

ಪುತ್ತೂರು: ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ ನೀಡಿದ ಪ್ರಕರಣದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ಕಾನ್‌ಸ್ಟೆಬಲ್ ಪ್ರವೀಣ್ ಸಾಲ್ಯಾನ್ (35)ಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಪೋಕ್ಸೋ)ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಂಗಳೂರು ಬಜಪೆ ಸಿದ್ಧಾರ್ಥ ನಗರ ನಿವಾಸಿ ಪ್ರವೀಣ್ ಸಾಲ್ಯಾನ್ 2015ರ ಫೆ. 16ರಂದು ಅಪ್ರಾಪ್ತ ವಯಸ್ಕ ಬಾಲಕಿಯನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ. ಅನಂತರ ತಾನು ಪ್ರೀತಿಸುತ್ತಿರುವುದಾಗಿ ನಾಟಕವಾಡಿದ್ದ ಆತ ನಿರಂತರ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಆಕೆಯನ್ನು ಸಂಪರ್ಕಿಸುತ್ತಿದ್ದ. ತನ್ನ ಗುಪ್ತಾಂಗದ ಚಿತ್ರಗಳನ್ನು ಆಕೆಗೆ ಕಳುಹಿಸಿ ಅಶ್ಲೀಲ ಸಂಭಾಷಣೆ ನಡೆಸುತ್ತಿದ್ದ. ಬಳಿಕ ಅಕೆಯಲ್ಲಿ ಒಂದು ಲಕ್ಷ ರೂ ಹಣ ಅಥವಾ ಚಿನ್ನ ನೀಡಬೇಕು ಎಂದು ಬೇಡಿಕೆಯಿಟ್ಟು ಬೆದರಿಸಿದ್ದ. ಇದರಿಂದ ಆತಂಕಗೊಂಡ ಆಕೆ 2015ರ ಜೂ. 10ರಂದು ಬೆಳಗ್ಗೆ 5ರಿಂದ 6.15ರ ನಡುವೆ ತನ್ನ ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಮಗ್ರ ವಿಚಾರಣೆ ನಡೆಸಿದ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1 (ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಪ್ರಕರಣದ ಕುರಿತು ವಿಚಾರಣೆ ನಡೆಸಿ ಅಪರಾಧಿಗೆ ಐಪಿಸಿ305ರಡಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಹಾಗೂ ಸೆಕ್ಷನ್ 12ರಡಿ (ಪೋಕ್ಸೋ) 3 ವರ್ಷ ಕಠಿಣ ಸಜೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದರು. ಸಹನಾದೇವಿ ಅವರ ಸಹೋದರಿ ಚೇತನಾದೇವಿ ಪುತ್ತೂರು ನ್ಯಾಯಾಲಯದಲ್ಲಿ ಎಪಿಪಿಯಾಗಿದ್ದಾರೆ.

LEAVE A REPLY

Please enter your comment!
Please enter your name here