ಕಡಬ: ಐತ್ತೂರು ಗ್ರಾ.ಪಂ ವ್ಯಾಪ್ತಿಯ ಪಾದೆ ಮಜಲಿನಲ್ಲಿ ಹಲವು ವರ್ಷಗಳಿಂದ ಇದ್ದ ಕಾಲು ದಾರಿಯನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಂತಿ ಬೇಲಿ ಹಾಕಿ ಮುಚ್ಚಿರುವುದರಿಂದ ಶಾಲಾ ಮಕ್ಕಳು ಸೇರಿದಂತೆ ಆ ಭಾಗದ ಜನರು ಬೇಲಿ ಹಾರಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಕುರಿತು ಪಾದೆ ಮಜಲಿನ ಸೀತಾ ಎಂಬವರು ಐತ್ತೂರು ಗ್ರಾ.ಪಂ, ಕಂದಾಯ ಇಲಾಖೆ ಹಾಗೂ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಸದ್ರಿ ರಸ್ತೆಯು ಸರ್ಕಾರಿ ಸ್ಥಳದಲ್ಲಿದ್ದರೂ ಸ್ಥಳೀಯ ವ್ಯಕ್ತಿ ವರ್ಗ ಸ್ಥಳವೆಂದು ವಾದಿಸುತ್ತಿದ್ದು ಇದು ಸರ್ವೆ ನಂ. 176 ರಲ್ಲಿದೆ.
ಹುಕ್ರಪ್ಪ ಗೌಡ ಎಂಬವರಿಗೆ ಡಿಕ್ಲರೇಷನ್ ಸಿಗುವ ಮೊದಲೇ ಈ ಕಾಲು ದಾರಿ ಇತ್ತು. ಕಪ್ಪೆ ಹಳ-ಗಡಿ ಕೊಟ್ಟಿಗೆ (ಕೊಂಡಂಕಿರಿ) ಗಾದಿ ರಸ್ತೆ ಸಂಪರ್ಕ ಇದಾಗಿದ್ದು ನಡೆದುಕೊಂಡು ಹೋಗಲು ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಪೊಲೀಸರು ಈ ಹಿಂದೆ ತೆರವು ಮಾಡಿದ್ದರು: ಈ ಹಿಂದೆ ಇದೇ ದಾರಿಯನ್ನು ಸ್ಥಳೀಯ ವ್ಯಕ್ತಿ ಬಂದ್ ಮಾಡಿದ್ದ ಹಿನ್ನೆಲೆಯಲ್ಲಿ ಠಾಣೆಗೆ ದೂರು ನೀಡಲಾಗಿತ್ತು. ಹೀಗಾಗಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿ ಎಚ್ಚರಿಕೆ ನೀಡಿದ ಕಾರಣ ಬೇಲಿಯನ್ನು ತೆರವು ಮಾಡಲಾಗಿತ್ತು. ಈಗ ಮತ್ತೆ ಬೇಲಿ ಹಾಕಲಾಗಿದೆ.
ಶಾಲಾ ಮಕ್ಕಳಿಗೆ ನಿತ್ಯ ಹೋಗಲು ಹಾಗೂ ಕೂಲಿ ಕಾರ್ಮಿಕರಿಗೆ ಈ ಕಾಲು ದಾರಿ ಅಗತ್ಯವಾಗಿದೆ. ಅಧಿಕಾರಿಗಳು ಕೂಡಲೇ ಇದರ ಬಗ್ಗೆ ಪರಿಶೀಲಿಸಬೇಕು. ಇಲ್ಲವಾದಲ್ಲಿ ಅಲ್ಲಿನ ಜನರ ಸಹಕಾರದೊಂದಿಗೆ ಸಂಘಟನೆ ಮೂಲಕ ಗ್ರಾ.ಪಂ ಎದುರು ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಇದಕ್ಕೆ ಅಧಿಕಾರಿಗಳು ಆಸ್ಪದ ನೀಡುವುದು ಬೇಡ. ಸಮಸ್ಯೆಯನ್ನು ಕೂಡಲೇ ಪರಿಹರಿಸಿ ಎಂದು ಭೀಮ್ ಆರ್ಮಿ ಸಂಘಟನೆಯ ಕಡಬ ಘಟಕದ ಅಧ್ಯಕ್ಷ ರಾಘವ ಹೇಳಿದ್ದಾರೆ.