ಕಡಬ: ಕಾಣಿಯೂರಿನಲ್ಲಿ ಮುಸ್ಲಿಂ ಬಡ ಜವಳಿ ವ್ಯಾಪಾರಸ್ಥರ ಮೇಲೆ ಅಮಾನುಷವಾಗಿ ಕ್ರೂರ ಹಲ್ಲೆಯನ್ನು ಮಾಡಲಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಕಡಬ ಎಸ್.ಐ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಡಬ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ ಮನವಿ ಸಲ್ಲಿಸಿದೆ.
ಜಿಲ್ಲೆಯಲ್ಲಿ ನಿರಂತರವಾಗಿ ಒಂದಲ್ಲೊಂದು ಸುಳ್ಳು ಕಾರಣಗಳನ್ನು ನೆಪವಾಗಿ ಇಟ್ಟುಕೊಂಡು ದಿನನಿತ್ಯ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮೇಲೆ ಹಲ್ಲೆ ದೌರ್ಜನ್ಯ ನಡೆಯುತ್ತಿದ್ದು ಪೊಲೀಸ್ ಇಲಾಖೆಯು ಕಣ್ಣು ಇದ್ದು ಕುರುಡರಂತೆ ವರ್ತಿಸುತ್ತಿದೆ. ತಪ್ಪಿತಸ್ಥರು ಯಾರೇ ಆದರು ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷಿಸಬೇಕೆ ಹೊರತು ನೈತಿಕ ಪೊಲೀಸ್ ಗಿರಿ ನಡೆಸುವ ಗೂಂಡಾಗಳನ್ನು ರಾಜರೋಷವಾಗಿ ಮೆರೆಯಲು ಅವಕಾಶ ನೀಡುವುದು ಸರಿಯಲ್ಲ.
ಕಾಣಿಯೂರಿನಲ್ಲಿ ಬಡ ವ್ಯಾಪಾರಸ್ಥರ ಮೇಲೆ ಸುಳ್ಳು ಅಪವಾದ ಹೊರಿಸಿ ಅಮಾನುಷವಾಗಿ ಹಲ್ಲೆ ನಡೆಸಿ ಅವರ ಹತ್ಯೆಗೆ ಸಂಚು ರೂಪಿಸಿದ ಆ ಗೂಂಡಾ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಗೂಂಡಾ ಆ್ಯಕ್ಟ್ ನಡಿಯಲ್ಲಿ ಕೇಸು ದಾಖಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಕಡಬ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ ದ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ ನೇತೃತ್ವದಲ್ಲಿ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ಕಡಬ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಪ್ ಶೇಡಿಗುಂಡಿ, ಕಡಬ ಪಂಚಾಯತ್ ಮಾಜಿ ಅಧ್ಯಕ್ಷ ಹನೀಫ್ ಕೆ.ಎಂ. ಐತ್ತೂರು ಗ್ರಾ.ಪಂ.ಮಾಜಿ ಸದಸ್ಯ ಯೂಸೂಫ್, ಕೆ.ಪಿ.ಸಿ.ಸಿ.ಅಲ್ಪಸಂಖ್ಯಾತ ಘಟಕದ ಸಂಯೋಜಕ ಎ.ಎಸ್.ಶರೀಫ್, ಪ್ರಮುಖರಾದ ಹಾಜಿ ಅಬ್ದುಲ್ ಹಮೀದ್, ಕೆ.ಎಂ.ಫಾರೂಕ್, ಹಾಜಿ ಎಸ್. ಅಬ್ಬಾಸ್, ಎನ್.ಕೆ.ಬದ್ರುದ್ದೀನ್ ಮುಸ್ಲಿಯಾರ್, ಇರ್ಷಾದ್ ಯು.ಕೆ, ಅಬ್ದುಲ್ ರಹಿಮಾನ್, ಅಬ್ದುಲ್ ಖಾದರ್ ಕಡಬ, ಮುಸ್ತಾಪ ಪನ್ಯ ಮೊದಲಾದವರು ಉಪಸ್ಥಿತರಿದ್ದರು.