ಸುಳ್ಯಪದವು ಯುವಶಕ್ತಿ ಕಲಾ, ಕ್ರೀಡಾ ಬಳಗದಿಂದ `ಯುವಶಕ್ತಿ ಉತ್ಸವ’

0

ಗುರುವಂದನೆ, ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ

ಪುತ್ತೂರು: ಯುವಶಕ್ತಿ ದೇಶದ ಶಕ್ತಿಯಾಗಿದ್ದು ತಮ್ಮಲ್ಲಿರುವ ಶಕ್ತಿಯನ್ನು ಸ್ವಂತಕ್ಕೆ ಮತ್ತು ಸಮಾಜಕ್ಕೆ ಬಳಕೆ ಮಾಡಿದಾಗ ಯಶಸ್ಸು ಪ್ರಾಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿನ ಯುವಶಕ್ತಿ ಮತ್ತು ಕ್ರೀಡಾ ಬಳಗ ಕಾರ್ಯಾಚರಿಸುವ ಮೂಲಕ ಊರಿನ ಅಭಿವೃದ್ಧಿಗೆ ಕಾರಣವಾಗಬೇಕು ಎಂದು ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಅಧ್ಯಕ್ಷ ಶಿವರಾಮ ಎಚ್.ಡಿ ಹೇಳಿದರು.
ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ ಸುಳ್ಯಪದವು ವತಿಯಿಂದ ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಸಭಾಂಗಣದಲ್ಲಿ ಅ.22 ಮತ್ತು 23ರಂದು ಹಮ್ಮಿಕೊಂಡಿದ್ದ ಯುವಶಕ್ತಿ ಉತ್ಸವ-22-23ರಂದು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ರಘುನಾಥ ರೈ ನುಳಿಯಾಲು ಮಾತನಾಡಿ ಇಲ್ಲಿ ಶಿಕ್ಷಕರನ್ನು ಗೌರವಿಸುವ ಕಾರ್ಯ ನಡೆದಿದ್ದು ಇದು ಮಾದರಿ ಕಾರ್ಯಕ್ರಮವಾಗಿದೆ. ಗುರುಗಳಲ್ಲಿ ಶಿಷ್ಯರು ತೋರುವ ಪ್ರೀತಿಯೇ ದೊಡ್ಡ ಪ್ರಶಸ್ತಿ, ಅದು ಪದ್ಮಶ್ರೀ, ಜ್ಞಾನಪೀಠವನ್ನೂ ಮೀರಿಸಿದ ಪ್ರಶಸ್ತಿಯಾಗಿದೆ. ಗುರುಗಳನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯಾಗಿದೆ ಎಂದು ಹೇಳಿದರು.

ಸುಳ್ಯಪದವು ಶ್ರೀ.ಬಾ.ಸು.ಹಿ.ರಾ.ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಪ್ರೇಮಾ ಎನ್ ಕಲ್ಲೂರಾಯ ಮಾತನಾಡಿ ಯುವಶಕ್ತಿ ದೇಶದ ಆಸ್ತಿಯಾಗಿದ್ದು ಇಲ್ಲಿ ಗುರುಗಳಿಗೆ ನೀಡಿರುವ ಗೌರವ ಸರಕಾರದ ಕೊಡುವ ಎಲ್ಲ ಪ್ರಶಸ್ತಿಗಳನ್ನು ಮೀರಿದ್ದು ಎಂದು ಹೇಳಿ ಕಾರ್ಯಕ್ರಮ ಆಯೋಜಕರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಪಂಜ ಉಪ ವಲಯಾರಣ್ಯಾಧಿಕಾರಿ ಸಂತೋಷ್ ರೈ ಕೆ ಮಾತನಾಡಿ ಯುವಶಕ್ತಿ ಬಳಗದಿಂದ ಮಾದರಿಯೋಗ್ಯವಾದ ಕಾರ್ಯಕ್ರಮ ಆಯೋಜನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ ಸುಳ್ಯಪದವು ಇದರ ಗೌರವಾಧ್ಯಕ್ಷ ಗೋಪಾಲಕೃಷ್ಣ ಬಟ್ಟಂಗಳ ಮಾತನಾಡಿ ಯುವಜನರು ಕೆಟ್ಟ ವಿಚಾರಗಳಿಂದ ದೂರವಿದ್ದು ಉತ್ತಮ ಆದರ್ಶವನ್ನು ಮೈಗೂಡಿಸಿಕೊಂಡು ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.

ಗುರುವಂದನೆ:
ಸುಳ್ಯಪದವು ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಶಿಕ್ಷಕರಾದ ಪ್ರೇಮಾ ಎನ್ ಕಲ್ಲೂರಾಯ, ರಘನಾಥ ರೈ ನುಳಿಯಾಲು, ವಿಷ್ಣು ಭಟ್ ಪಡ್ಪು, ರಾಮಣ್ಣ ಗೌಡ ಬಸವಹಿತ್ತಿಲು, ಶಿವರಾಮ ಎಚ್.ಡಿ, ಸುಬ್ಬಣ್ಣ ರೈ ಮೇಗಿನಮನೆ, ಗೋಪಾಲಕೃಷ್ಣ ಭಟ್, ವೆಂಕಟ್ರಾವ್ ಪಿ.ಜಿ, ಸುಶೀಲ, ನಾರಾಯಣ ಭಟ್, ಪುರಂದರ ರೈ, ಮನೋಹರಿ ಮೊದಲಾದವರನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿದ ನಿವೃತ್ತ ಶಿಕ್ಷಕರು ಯುವ ಶಕ್ತಿ ಬಳಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.


ಸಾಧಕರಿಗೆ ಸನ್ಮಾನ:
ಉಜಿರೆ ಎಸ್‌ಡಿಎಂ ಕಾಲೇಜಿನ ನಿವೃತ್ತ ದೈ.ಶಿ.ನಿರ್ದೇಶಕ ಬಾಲಭಾಸ್ಕರ ಕೆ, ಯಕ್ಷಗಾನ ಕಲಾವಿದ ಜಯಪ್ರಕಾಶ್ ಕಲ್ಮಡ್ಕ, ಜನಪದ ಕಲಾವಿದ ಡಾ.ರವೀಶ ಪರವ ಪಡುಮಲೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದವರು ಮಾತನಾಡಿ ಯುವಶಕ್ತಿ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು.

ಪ್ರತಿಭಾ ಪುರಸ್ಕಾರ:
ರಾಷ್ಟ್ರೀಯ ಕ್ರೀಡಾಪಟು ಅಶ್ವಿತ ಬಿ, ರಾಜ್ಯ ಮಟ್ಟದ ಕ್ರೀಡಾ ಪಟುಗಳಾದ ರಂಜಿತ್ ಕುಮಾರ್ ಎಂ, ರಾಹುಲ್ ಆರ್.ಎಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಎಸ್ಸೆಸ್ಸೆಲ್ಸಿಯಲ್ಲಿ 2021-22 ನೇ ಸಾಲಿನ ಡಿಸ್ಟಿಂಕ್ಷನ್ ಪಡೆದ 15 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್‌ರಿಗೆ ಸನ್ಮಾನ:
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಶ್ರೀನಿವಾಸ್ ನಾಯಕ್ ಮಾತನಾಡಿ ಜೀವನದಲ್ಲಿ ಅನೇಕ ಸನ್ಮಾನಗಳನ್ನು ನಾನು ಸ್ವೀಕರಿಸಿದ್ದೇನೆ, ಆದರೆ ನನ್ನ ಹುಟ್ಟೂರಿನಲ್ಲಿ ಸಿಕ್ಕಿದ ಸನ್ಮಾನ ನಿಜಕ್ಕೂ ಹೆಚ್ಚು ಖುಷಿ ನೀಡಿದೆ ಎಂದರು. ಇಲ್ಲಿ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿ ವಿಚಾರದ ಬಗ್ಗೆ ಹೇಳಿದ್ದು ಅದರ ಬಗ್ಗೆ ನಾನು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ ಅಲ್ಲದೇ ಯುವಶಕ್ತಿ ಬಳಗದ ಕಾರ್ಯಚಟುವಟಿಕೆಗಳಿಗೆ ಶಾಶ್ವತ ಕಟ್ಟಡಕ್ಕೆ ಜಿಲ್ಲಾಧಿಕಾರಿಯವರಲ್ಲಿ ಕೇಳಿದ್ದು ಸ್ಥಳ ಗುರುತು ಆದರೆ ಖಂಡಿತ ಅದರ ಬಗ್ಗೆಯೂ ಅಧಿಕಾರಿ ಮಟ್ಟದಲ್ಲಿ ಮಾತನಾಡಿ ನಾನು ಎಲ್ಲ ಪ್ರಯತ್ನಗಳನ್ನು ಮಾಡಿ ಶಾಶ್ವತ ಕಟ್ಟಡ ಒದಗಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು. ನಿಮ್ಮೆಲ್ಲರ ಸಹಕಾರವಿದ್ದರೆ ಈ ಊರಿನ ಮತ್ತು ಶಾಲೆಯ ಅಭಿವೃದ್ಧಿಗೆ ನನ್ನಿಂದಾಗುವ ಎಲ್ಲ ಕೊಡುಗೆಗಳನ್ನು ನೀಡುವುದಾಗಿ ತಿಳಿಸಿದ ಶ್ರೀನಿವಾಸ್ ನಾಯಕ್ ಅವರು ಯುವಶಕ್ತಿಯವರ ಸಮಾಜಪರ ಕಾರ್ಯಕ್ಕೆ ನನ್ನ ತಂದೆಯ ಹೆಸರಿನಲ್ಲಿ ಕೊಡುಗೆ ನೀಡುವುದಾಗಿಯೂ ಹೇಳಿದರು.


ಸಹಕರಿಸಿದವರಿಗೆ ಗೌರವಾರ್ಪಣೆ:
ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಗೋಪಾಲಕೃಷ್ಣ ಬಟ್ಟಂಗಳ, ಸಂತೋಷ್ ರೈ ಕೆ, ಜನಾರ್ದನ ಪೂಜಾರಿ ಪದಡ್ಕ, ಗಂಗಾಧರ ರೈ ಎನ್.ಜಿ, ಸುಂದರ ಕನ್ನಡ್ಕ, ಪ್ರಕಾಶ ಮರದಮೂಲೆ, ಸುಧೀರ್ ನಾಯಕ್ ಇಂದಾಜೆ, ಹರಿಶ್ಚಂದ್ರ ಕೆ, ಅನಿಲ್ ಕುಮಾರ್, ಅಣ್ಣು ಮೂಲ್ಯ, ಅಜಿತ್, ಸತೀಶ್ ಬೆಂಗಳೂರು ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ, ಸರ್ವೊದಯ ವಿದ್ಯಾಸಂಸ್ಥೆಗಳ ಸಂಚಾಲಕ ಮಹಾದೇವ ಭಟ್ ಕೊಲ್ಯ, ಮಂಗಳೂರು ಶ್ರೀ ಕಟೀಲ್ ಲಾಜಿಸ್ಟಿಕ್‌ನ ಜನಾರ್ದನ ಪೂಜಾರಿ ಪದಡ್ಕ, ಬಡಗನ್ನೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಗಂಗಾಧರ ರೈ ಎನ್.ಜಿ, ಸುಳ್ಯಪದವು ಆಯುಧ ಪೂಜಾ ಸಮಿತಿ ಅಧ್ಯಕ್ಷ ಸುಂದರ ಕನ್ನಡ್ಕ, ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಕಾರ್ಯದರ್ಶಿ ಪ್ರಕಾಶ ಮರದಮೂಲೆ, ಉದ್ಯಮಿ ಸತೀಶ್ ಕುಲಾಲ್ ಬೆಂಗಳೂರು, ಬಡಗನ್ನೂರು ಗ್ರಾ.ಪಂ ಮಾಜಿ ಸದಸ್ಯ ಗುರುಪ್ರಸಾದ್ ರೈ, ಸುಳ್ಯಪದವು ರಾಮನಾಥ ಟ್ರೇಡರ್‍ಸ್‌ನ ಸುಧೀರ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರಾಜೇಶ್ ಎಂ ವಂದಿಸಿದರು. ಚಂದ್ರಶೇಖರ ಸುಳ್ಯಪದವು ಕಾರ್ಯಕ್ರಮ ನಿರೂಪಿಸಿದರು. ನೂರಾರು ಮಂದಿ ಉಪಸ್ಥಿತರಿದ್ದರು.

ಯುವಶಕ್ತಿ ಉತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮ:
ಅ.22ರಂದು ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ನಡೆಯಿತು. ಅ.23ರಂದು ಅಂಗನವಾಡಿ ಪುಟಾಣಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ ನಡೆಯಿತು.
ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಸುಳ್ಯಪದವು ಶ್ರೀದುರ್ಗಾ ಸೇವಾ ಕೇಂದ್ರದಿಂದ ಅಭಾ ಕಾರ್ಡ್ ನೋಂದಣಿ ಶಿಬಿರ ನಡೆಯಿತು. ಸಂಜೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಿತು.

1987 ರಲ್ಲಿ ಪ್ರಾರಂಭಗೊಂಡ ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗವು ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಸಮಾಜಮುಖಿಯಾದ ಅನೇಕ ಕಾರ್ಯಕ್ರಮಗಳನ್ನು ನಾವು ನಿರಂತರವಾಗಿ ನಡೆಸುತ್ತಾ ಬಂದಿದ್ದು ಉರವರು ಉತ್ತಮ ಸಹಕಾರ ನೀಡುತ್ತಿದ್ದಾರೆ.
-ಗುರುಕಿರಣ್ ರೈ ಎನ್.ಜಿ, ಅಧ್ಯಕ್ಷರು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ ಸುಳ್ಯಪದವು

LEAVE A REPLY

Please enter your comment!
Please enter your name here