ದೂರು ನೀಡಿದರೂ ಕ್ರಮ ಕೈಗೊಳ್ಳದ ಪಂಚಾಯತ್ ವಿರುದ್ದ ಸ್ಥಳೀಯರ ಆಕ್ರೋಶ.
ಜಿ.ಪಂ. ಸಿ.ಒ, ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ದೂರು
ಕಡಬ: ಐತ್ತೂರು ಗ್ರಾ.ಪಂ. ವ್ಯಾಪ್ತಿಯ ಶಿವಾಜಿನಗರದಲ್ಲಿ ಪಂಚಾಯತ್ ಕುಡಿಯುವ ನೀರು ದುರ್ನಾತ ಬೀರುತ್ತಿದ್ದು, ನೀರು ಉಪಯೋಗಿಸಿದ ಹಲವರಲ್ಲಿ ಅನಾರೋಗ್ಯ ಸಮಸ್ಯೆ ಕಂಡು ಬಂದಿದ್ದು, ಈ ಸಮಸ್ಯೆಯನ್ನು ಪಂಚಾಯತ್ ನ ಗಮನಕ್ಕೆ ತಂದರೂ ಇದುವರೆಗೆ ಪಂಚಾಯತ್ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಶಿವಾಜಿನಗರ ನಿವಾಸಿಗಳು ದೂರು ನೀಡಿದ್ದಾರೆ.
ಶಿವಾಜಿನಗರದ ಕುಡಿಯುವ ನೀರಿನ ಟ್ಯಾಂಕ್ ತೊಳೆಯದೆ ಹಲವು ವರ್ಷಗಳೇ ಆಗಿದೆ, ಈ ನೀರನ್ನು ಉಪಯೋಗಿಸಿ ಇಲ್ಲಿನ ನಿವಾಸಿಗಳಿಗೆ ಆಗಾಗ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದೆ, ಈ ಬಗ್ಗೆ ಹಲವಾರು ಬಾರಿ ಪಂಚಾಯತ್ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದೆ ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ, ಪಂಚಾಯತ್ ನ ಈ ನಡೆಯಿಂದ ಇಲ್ಲಿನ ಜನರಿಗೆ ತೊಂದರೆ ಆಗಿರುತ್ತದೆ, ಅಲ್ಲದೆ ಈ ಟ್ಯಾಂಕಿಗೆ ನೀರು ಸರಬರಾಜು ಆಗುತ್ತಿರುವ ಪಂಪ್ ಶೆಡ್ ಗೆ ಸಂಪರ್ಕಿಸಿದ ವಿದ್ಯುತ್ ವಯರ್ ಕಳೆದ ಒಂದು ವರ್ಷದಿಂದ ನೆಲದಿಂದ ಕೇವಲ ಒಂದು ಮೀಟರ್ ನಷ್ಟು ಮೇಲೆ ಇದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಬಗ್ಗೆಯೂ ಪಂಚಾಯತ್ ನಿಂದ ಯಾವುದೇ ಕ್ರಮ ಕೈಗೊಂಡಿಲ್ಲ, ಜನ ಸಾಮಾನ್ಯರು ಪಂಚಾಯತ್ ಗೆ ಭೇಟಿ ನೀಡಿ ಸಮಸ್ಯೆ ಹೇಳಿಕೊಂಡಾಗ ಪಂಚಾಯತ್ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸದೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಬೇಕು ಇಲ್ಲದಿದ್ದಲ್ಲಿ ಪಂಚಾಯತ್ ವಿರುದ್ದ ಹೋರಾಟ ಮಾಡಬೇಕಾದಿತು ಎಂದು ಶಿವಾಜಿನಗರದ ಕುಡಿಯುವ ನೀರಿನ 13 ಮಂದಿ ಫಲಾನುಭವಿಗಳು ಸಹಿ ಮಾಡಿದ ದೂರು ಅರ್ಜಿಯಲ್ಲಿ ಎಚ್ಚರಿಸಿದ್ದಾರೆ.
ನಮ್ಮ ಗಮನಕ್ಕೆ ಬಂದಿಲ್ಲ-ಶ್ಯಾಮಲ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಐತ್ತೂರು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ಅವರು, ಸಮಸ್ಯೆ ಬಗ್ಗೆ ನಮ್ಮ ಗಮನಕ್ಕೆ ಯಾರು ತಂದಿಲ್ಲ, ಗಮನಕ್ಕೆ ತಂದಿದ್ದರೆ ನಾವು ಸ್ವಚ್ಚಗೊಳಿಸುವ ವ್ಯವಸ್ಥೆ ಮಾಡುತ್ತಿದ್ದೆವು, ಗ್ರಾ.ಪಂ.ನ ಇತರ ಕಡೆಗಳಲ್ಲಿನ ಕುಡಿಯುವ ನೀರಿನ ಟ್ಯಾಂಕಿಗಳನ್ನು ಸ್ವಚ್ಚಗೊಳಿಸಿದ್ದೇವೆ, ಶಿವಾಜಿನಗರದ ಟ್ಯಾಂಕಿಯನ್ನು ಕೂಡಲೇ ಸ್ವಚ್ಚಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.