ಪುತ್ತೂರು: 8 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗ್ರೂಪ್ ‘ಬಿ’ಗೆ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ.2ರಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆಸಲುದ್ದೇಶಿಸಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಮುಖ್ಯಮಂತ್ರಿಗಳ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಪಿಡಿಒಗಳ ಜಿಲ್ಲಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿರುವ ಆರ್ಯಾಪು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ.ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.ಪಿಡಿಒಗಳ ಬೇಡಿಕೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪರಿಷತ್ ಪದಾಧಿಕಾರಿಗಳೊಂದಿಗೆ ಚರ್ಚಿಸಿದ್ದು ಹದಿನೈದು ದಿನಗಳೊಳಗೆ ಬೇಡಿಕೆ ಈಡೇರಿಕೆ ಕುರಿತು ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.ಅವರ ಭರವಸೆ ಮೇರೆಗೆ ಉದ್ದೇಶಿತ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.ನೀಡಿರುವ ಭರವಸೆಯಂತೆ ಹದಿನೈದು ದಿನಗಳೊಳಗೆ ಕ್ರಮಕೈಗೊಳ್ಳದೇ ಇದ್ದಲ್ಲಿ ಮತ್ತೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ನಾಗೇಶ್ ಅವರು ತಿಳಿಸಿದ್ದಾರೆ.
8 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪಂಚಾಯತ್ ಅಭಿವೃದ್ಧಿ ಅಽಕಾರಿಗಳ ಹುದ್ದೆಯನ್ನು ಗ್ರೂಪ್ ‘ಬಿ’ಗೆ ಮೇಲ್ದರ್ಜೆಗೇರಿಸಬೇಕು.2006-2007ರಿಂದ 2011-2012ರ ವರೆಗೆ ನರೇಗಾ ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ತನಿಖೆ ಮಾಡಲು ಲೋಕಾಯುಕ್ತಕ್ಕೆ ವಹಿಸಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಗ್ರಾ.ಪಂ. ಅಧಿಕಾರಿ, ನೌಕರರಿಗೆ ಹಲ್ಲೆ ನಡೆಸಿದವರ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಬೇಕು. ಕೊರೋನಾದಿಂದ ಮರಣ ಹೊಂದಿದ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಗ್ರಾ.ಪಂ. ಸಿಬ್ಬಂದಿಗೆ ಪರಿಹಾರಧನ ತಕ್ಷಣ ಪಾವತಿಸಬೇಕು. ಅನ್ಯ ಇಲಾಖೆಯ ಕೆಲಸ ವಹಿಸುವುದನ್ನು ಸಂಪೂರ್ಣ ರದ್ದುಪಡಿಸಬೇಕು. ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಿಯಮವನ್ನು ಕೂಡಲೇ ಜಾರಿಗೊಳಿಸಬೇಕು.16ಎ ರದ್ದು ಮಾಡಿರುವುದರಿಂದ ಅಂತರ್ ಜಿಲ್ಲೆಗೆ ವರ್ಗಾವಣೆಗೆ ಅವಕಾಶ ಇರುವುದಿಲ್ಲ.ಹಾಗಾಗಿ ವಿಶೇಷ ನಿಯಮಗಳನ್ನು ರಚಿಸಿ ನೌಕರರು ಇಚ್ಛಿಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆಗೆ ಅವಕಾಶ ನೀಡಬೇಕು ಹಾಗೂ ಮನರೇಗಾ ಕೂಲಿಕಾರರ ಹಾಜರಾತಿ ಪಡೆಯಲು ಬಯೋಮೆಟ್ರಿಕ್ ಜಾರಿ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯವ್ಯಾಪಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ನ.2ರಿಂದ ಬೆಂಗಳೂರು ಚಲೋ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು.ಹೋರಾಟ ಮುಗಿಯುವವರೆಗೆ ಕುಡಿಯುವ ನೀರು ಹಾಗೂ ಬೀದಿದೀಪ ಸೇವೆಗಳ ಹೊರತು ಇನ್ನುಳಿದ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದರು.ಧರಣಿ ಕೈಗೊಳ್ಳುವ ದಿನದಿಂದ ಅನಿರ್ದಿಷ್ಟಾವಧಿಗೆ ಕೇಂದ್ರಸ್ಥಾನ ಬಿಡಲು ಹಾಗೂ ಹೋರಾಟದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಕೋರಿ ಪಿಡಿಒಗಳು ಆಯಾ ಜಿ.ಪಂ.ಸಿಇಒಗಳಿಗೆ ಈಗಾಗಲೇ ಮನವಿ ಕೂಡ ಸಲ್ಲಿಸಿದ್ದಾರೆ.ಹೋರಾಟದಲ್ಲಿ ಭಾಗವಹಿಸಿದ ದಿನಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹಕ್ಕಿನಲ್ಲಿರುವ ರಜಾ ದಿನಗಳೆಂದು ಪರಿಗಣಿಸುವಂತೆ ಕೋರಿದ್ದರು.ಇದೀಗ ಸಿಎಂ ಭರವಸೆ ಮೇರೆಗೆ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.