ಮಜ್ಜಾರಡ್ಕದಲ್ಲಿ ರಂಗೇರಿದ ಕೆಸರುಡೊಂಜಿ ದಿನ

0

ಆಟೋಟ ಸ್ಪರ್ಧೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ವೈಭವ

ಪುತ್ತೂರು: ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಆಶ್ರಯದಲ್ಲಿ 5 ನೇ ವರ್ಷದ ವಿಜೃಂಭಣೆಯ ಕೆಸರುಡೊಂಜಿ ದಿನ ಅ.30 ರಂದು ಅರಿಯಡ್ಕ ಗ್ರಾಮದ ಮಜ್ಜಾರು ಗದ್ದೆಯಲ್ಲಿ ನಡೆಯಿತು.

ಬೆಳಿಗ್ಗೆ ಕಾರ್ಯಕ್ರಮದ ಉದ್ಘಾಟನೆ ನಡೆದು ಸ್ಥಳೀಯರಿಗೆ ಕೆಸರಿನಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಮುಖ್ಯವಾಗಿ ಹಗ್ಗ ಜಗ್ಗಾಟ, ತ್ರೋಬಾಲ್, ವಾಲಿಬಾಲ್ ಪಂದ್ಯಾಟ ಸೇರಿದಂತೆ ವಿವಿಧ ಕೆಸರುಗದ್ದೆ ಆಟೋಟ ಸ್ಪರ್ಧೆಗಳು ಮನರಂಜಿಸಿತು. ವಿಜೇತರಾದವರಿಗೆ ಬಹುಮಾನ, ಟ್ರೋಫಿ ನೀಡಿ ಗೌರವಿಸಲಾಯಿತು. ಬೆಳಿಗ್ಗೆ ಉಪಹಾರ ವ್ಯವಸ್ಥೆ ಮಧ್ಯಾಹ್ನ ಮತ್ತು ರಾತ್ರಿ ಬೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು. ರಾತ್ರಿ ದೀರ್ಘ ಡ್ಯಾನ್ಸ್ ಅಕಾಡೆಮಿ ಸುರತ್ಕಲ್ ಇದರ ಸದಸ್ಯರಿಂದ ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿಜಯಕುಮಾರ್ ಕೋಡಿಯಾಲ್‌ಬೈಲ್ ರಚಿಸಿ,ನಿರ್ದೇಶಿಸಿರುವ ಮಣಿಕಂಠ ಮಹಿಮೆ ಎನ್ನುವ ತುಳು ನಾಟಕ ಮನರಂಜಿಸಿತು. ಸಾವಿರಾರು ಪ್ರೇಕ್ಷಕರು ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ನೋಡಿ ಖುಷಿಪಟ್ಟರು.

ಉದ್ಘಾಟನಾ ಸಮಾರಂಭ
ಬೆಳಿಗ್ಗೆ ಕಾರ್ಯಕ್ರಮವನ್ನು ಅರಿಯಡ್ಕ ಗ್ರಾಮದೈವ ಶ್ರೀಧೂಮಾವತಿ ದೈವದ ಪ್ರಧಾನ ಪಾತ್ರಿ ಸದಾಶಿವ ಮಣಿಯಾಣಿ ಕುತ್ಯಾಡಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಭಾ ಅಧ್ಯಕ್ಷತೆ ವಹಿಸಿದ್ದ ಬಳಗದ ಗೌರವ ಅಧ್ಯಕ್ಷ ಮೋಹನ್ ರೈ ಓಲೆಮುಂಡೋವುರವರು ಮಾತನಾಡಿ, ನಾವು ಹೆಜ್ಜೆ ಹಾಕುವುದಾದರೆ ಸಮಾಜಮುಖಿ ಕೆಲಸ ಮಾಡುವ ಸಂಘ ಸಂಸ್ಥೆಗಳ ಜೊತೆ ಹೆಜ್ಜೆ ಹಾಕಬೇಕು, ಯುವಶಕ್ತಿ ಬಳಗವು ಒಂದು ಒಳ್ಳೆಯ ಸಂಘಟನೆಯಾಗಿದ್ದು ಸಮಾಜಮುಖಿ ಕೆಲಸಗಳಿಗೆ ತುಡಿಯುವ ಯುವಮನಸ್ಸುಗಳು ಈ ಸಂಘಟನೆಯಲ್ಲಿವೆ. ಸಂಘಟನೆಯಿಂದ ಇನ್ನಷ್ಟು ಒಳ್ಳೆಯ ಕೆಲಸಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು. ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಅರಿಯಡ್ಕ ಗ್ರಾಪಂ ಸದಸ್ಯ ಉಷಾರೇಖಾ ರೈ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು, ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್‌ರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಯುವಶಕ್ತಿ ಬಳಗದ ಉಪಾಧ್ಯಕ್ಷ ರಘುನಾಥ ಪೂಜಾರಿ ಗೋಳ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರೀಶ್ ಸ್ವಾಮಿನಗರ ಮತ್ತು ದೀಪಕ್ ಕೋಡಿಯಡ್ಕ ಪ್ರಾರ್ಥಿಸಿದರು. ಬಳಗದ ಅಧ್ಯಕ್ಷ ಉದಯ ಕುಮಾರ್ ಸ್ವಾಮಿನಗರ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಬಳಗದ ಪ್ರಧಾನ ಕಾರ್ಯದರ್ಶಿ ಭವಿತ್ ಮಜ್ಜಾರ್ ಸ್ವಾಗತಿಸಿ, ಚೈತ್ರಾ ಮಾವಿಲಕೊಚ್ಚಿ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.


ಸಮಾರೋಪ ಸಮಾರಂಭ, ಸನ್ಮಾನ
ಸಂಜೆ ನಡೆದ ಸಮಾರೋಪ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಸಾರ್ವಜನಿಕ ಕಾರ್ಯಕ್ರಮಗಳು ಎಷ್ಟೇ ಇದ್ದರೂ ನಮ್ಮ ಮನೆಯವರೊಂದಿಗೆ ಬೆರೆಯುವುದನ್ನು ಮರೆಯಬಾರದು, ವಾರದ ಒಂದು ದಿನವಾದರೂ ಮನೆಯವರೊಂದಿಗೆ, ಮಕ್ಕಳೊಂದಿಗೆ ಬೆರೆಯಲು ಮೀಸಲಿಡಬೇಕು ಎಂದ ಅವರು, ಮಜ್ಜಾರಡ್ಕದ ಶ್ರೀ ವಿಷ್ಣು ಯುವಶಕ್ತಿ ಬಳಗದ ಕಾರ್ಯಕ್ರಮ ಒಂದು ಅಂತರರಾಷ್ಟ್ರೀಯ ಸಂಸ್ಥೆಯೊಂದು ಮಾಡುವ ಕಾರ್ಯಕ್ರಮದಂತೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಪ್ರಶಸ್ತಿಯು ಸಿಗಲಿ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಮಾತನಾಡಿ, ಒಳ್ಳೆಯ, ಸಮಾಜಮುಖಿ ಮನಸ್ಸುಗಳ ಇರುವ ಸಂಘಟನೆ ಇದಾಗಿದೆ ಆದ್ದರಿಂದ ಈ ಸಂಘಟನೆಯಿಂದ ಬಹಳಷ್ಟು ಸಮಾಜಮುಖಿ ಕಾರ್ಯಗಳು ನಡೆಯುತ್ತಿದೆ. ಸಂಘಟನೆಯಿಂದ ಇನ್ನಷ್ಟು ಒಳ್ಳೆಯ ಕೆಲಸಗಳು ಮೂಡಿಬರಲಿ ಅಶೋಕ್ ರೈ ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿ ಶುಭ ಹಾರೈಸಿದರು.

ಅತಿಥಿಗಳಾಗಿದ್ದ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳು ಸಿನಿಮಾ ನಟ ವಿನೀತ್ ಕುಮಾರ್, ಕಾಂತಾರ ಸಿನೆಮಾ ನಟ ಸ್ವರಾಜ್ ಶೆಟ್ಟಿ, ಬಳಗದ ಗೌರವ ಸಲಹೆಗಾರ, ಉದ್ಯಮಿ ಕಿಶೋರ್ ಶೆಟ್ಟಿ ಅರಿಯಡ್ಕ, ಪದ್ಮಶ್ರೀ ಸೋಲಾರ್‌ನ ಸೀತಾರಾಮ ರೈ ಕೆದಂಬಾಡಿಗುತ್ತು, ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ಶೈಲಜಾ ರಾಜೇಶ್, ಶ್ವಾನ ಪ್ರೇಮಿ ರಜನಿ ದಾಮೋದರ್ ಶೆಟ್ಟಿ ಬಳ್ಳಾಲ್‌ಬಾಗ್‌ರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಬಳಗದ ಅಧ್ಯಕ್ಷ ಉದಯ ಕುಮಾರ್ ಸ್ವಾಮಿನಗರ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಯುವಶಕ್ತಿ ಬಳಗದ ಹೊಸ ಲೋಗೋವನ್ನು ಬಿಡುಗಡೆಗೊಳಿಸಲಾಯಿತು. ಬಳಗದ ಪ್ರಧಾನ ಕಾರ್ಯದರ್ಶಿ ಭವಿತ್ ಮಜ್ಜಾರು, ಪ್ರಜ್ಞಾ ಕುಲಾಲ್, ಕೂತುಹಲ ವಿಜಯ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಣಿಕಂಠ ಮಹಿಮೆ ತುಳು ನಾಟಕ ನಡೆಯಿತು. ಆದ್ಯ ಆರ್.ಜೆ ಗೋಳ್ತಿಲ ಮತ್ತು ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ವಸಂತ ಪೂಜಾರಿ ಮಲಾರು ಆಟೋಟ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ್ದರು. ಬಳಗದ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಸಹಕರಿಸಿದ್ದರು.

ಮಗುವಿಗೆ ಮಿಡಿದ ಹೃದಯಗಳು
ವರ್ಷಿಣಿ ಎಂಬ ಮಗುವಿನ ಚಿಕಿತ್ಸೆಗೆ ಧನ ಸಂಗ್ರಹಕ್ಕೆ ನಾಗೇಶ್ ಬೆಳ್ಳಾರೆ ಮತ್ತು ಚುಕ್ಕಿ ವಿಟ್ಲರವರುಗಳು ಹಾಕಿದ ವೇಷಗಳು ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ತಮ್ಮ ಕೈಲಾದ ಧನ ಸಹಾಯ ಮಾಡಿದರು. ಅಲ್ಲದೆ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದಲೂ ಧನ ಸಹಾಯ ನೀಡಲಾಯಿತು.

ಸಾಧಕರಿಗೆ ಸನ್ಮಾನ, ಯುವ ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ಶೈಲಜಾ ರಾಜೇಶ್, ಶ್ವಾನ ಪ್ರೇಮಿ ರಜನಿ ದಾಮೋದರ ಶೆಟ್ಟಿ ಬಳ್ಳಾಲ್‌ಬಾಗ್, ಪುತ್ತೂರು ಬೀರಮಲೆಯ ಪ್ರಜ್ಞಾ ಮಾನಸಿಕ ವಿಕಲಚೇತನ ಮತ್ತು ಪುನರ್ವಸತಿ ಕೇಂದ್ರದ ಜ್ಯೋತಿ ಮತ್ತು ಅಣ್ಣಪ್ಪ ದಂಪತಿ ಹಾಗೂ ಡ್ರಾಮಾ ಜ್ಯೂನಿಯರ್ ಸೀಸನ್ ೪ ರ ರನ್ನರ್ ಅಫ್ ಮಾ| ವೇದಿಕ್ ಕೌಶಲ್‌ರವರಿಗೆ ಶಾಲು,ಸ್ಮರಣಿಕ,ಪೇಟಾ ತೊಡಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಯುವಶಕ್ತಿ ಬಳಗದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಓರ್ವ ಸದಸ್ಯನಿಗೆ ಈ ವರ್ಷದಿಂದ ಯುವ ಪ್ರಶಸ್ತಿ ನೀಡಲಾಗುತ್ತಿದ್ದು ಈ ವರ್ಷ ಲೋಕೇಶ್ ಸ್ವಾಮಿನಗರರವರಿಗೆ `ಯುವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ನಾಟಕ ಮತ್ತು ಬೋಜನ ಪ್ರಾಯೋಜಕರಿಗೆ ಸನ್ಮಾನ
ರಾತ್ರಿ ನಡೆದ ಮಣಿಕಂಠ ಮಹಿಮೆ ನಾಟಕವನ್ನು ಶ್ರೀ ವಿಷ್ಣು ಯುವಶಕ್ತಿ ಬಳಗದ ಗೌರವಾಧ್ಯಕ್ಷರಾಗಿರುವ ಮೋಹನ್ ರೈ ಓಲೆಮುಂಡೋವು, ಮೀರಾ ಮೋಹನ್ ರೈ ಹಾಗೂ ಮನ್ಮಿತ್ ರೈ ಓಲೆಮುಂಡೋವು ಪ್ರಾಯೋಜಿಸಿದ್ದರು. ಮಧ್ಯಾಹ್ನ ಮತ್ತು ರಾತ್ರಿಯ ಬೋಜನದ ವ್ಯವಸ್ಥೆಯನ್ನು ಬಳಗದ ಗೌರವ ಸಲಹೆಗಾರರಾದ ಮನ್ಮಿತ್ ರೈ ಓಲೆಮುಂಡೋವು ಪ್ರಾಯೋಜಿಸಿದ್ದರು. ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮೋಹನ್ ರೈ ಓಲೆಮುಂಡೋವುರವರನ್ನು ಬಳಗದ ವತಿಯಿಂದ ಶಾಲು,ಸ್ಮರಣಿಕೆ,ಪೇಟಾ,ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

“ ಬಳಗದ ವತಿಯಿಂದ ನಡೆದ 5 ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮದ ಯಶಸ್ವಿಗೆ ಅನೇಕ ಮಂದಿ ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಮುಂದೆಯೂ ನಿಮ್ಮೆಲ್ಲರ ಸಹಕಾರದೊಂದಿಗೆ ನಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತೇವೆ. ನಿಮ್ಮೆಲ್ಲರ ಸಹಕಾರ ಇರಲಿ, ಎಲ್ಲರಿಗೂ ಕೃತಜ್ಞತೆಗಳು.”
ರಾಜೇಶ್ ಮಯೂರ ಗೋಳ್ತಿಲ, ಸಂಘಟನಾ ಕಾರ್ಯದರ್ಶಿ ಶ್ರೀ ವಿಷ್ಣು ಯುವಶಕ್ತಿ ಬಳಗ

LEAVE A REPLY

Please enter your comment!
Please enter your name here