ಕಾಮದೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್‌ನಿಂದ ವಿಶಿಷ್ಠ ಶೈಲಿಯಲ್ಲಿ ಕನ್ನಡ ರಾಜ್ಯೋತ್ಸವ

0

ರಿಕ್ಷಾ ಚಾಲಕರಿಗೆ ಸನ್ಮಾನ, ವಿವಿಧ ನಿಲ್ದಾಣಗಳಲ್ಲಿ ರಸಪ್ರಶ್ನೆ

ಪುತ್ತೂರು: ಕಾಮದೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಗಾಂಧೀಕಟ್ಟೆಯಲ್ಲಿ ಹಿರಿಯ ರಿಕ್ಷಾ ಚಾಲಕರಿಗೆ ಸನ್ಮಾನ, ವಿವಿಧ ರಿಕ್ಷಾ ನಿಲ್ದಾಣಗಳಲ್ಲಿ ಚಾಲಕರಿಗೆ ರಸಪ್ರಶ್ನೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಠ ಶೈಲಿಯಲ್ಲಿ ಸಂಭ್ರಮಿಸಿದರು.

ಗಾಂಧೀಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಟೋ ರಿಕ್ಷಾ ಚಾಲಕರಾದ ರಾಜೀವ ಎಸ್.ಆರ್., ಸದಾನಂದ ಪೂಜಾರಿ, ಸಾಬು ಸಾಹೇಬ್, ಸಹರಾಬಾನು ಸನಮ್, ಬಾಲಕೃಷ್ಣ ರೈ ಪೊಳಲಿ, ಸಂಕಪ್ಪ ಮುಂಡೂರು, ಶೇಖರ ಬನ್ನೂರು, ಬಿ.ಕೆ ದೇವಪ್ಪ ಗೌಡ, ಸತೀಶ್ ಪ್ರಭು ಮಣಿಯ, ಶೇಖರ ಪೂಜಾರಿ ಪುರುಷರಕಟ್ಟೆ, ಕೆ.ಪಿ ಸುಲೈಮಾನ್, ಎನ್. ಗಂಗಾಧರ ನೈತ್ತಾಡಿ, ಮಹಮ್ಮದ್ ಮುಂಡೂರು, ನಾರಾಯಣ ಬಿ. ಕೆಮ್ಮಾಯಿ ಹಾಗೂ ನಾಸಿರ್ ಇಡಬೆಟ್ಟುರವರನ್ನು ಸನ್ಮಾನಿಸಲಾಯಿತು.

ಆಟೋ ಚಾಲಕರನ್ನು ಸನ್ಮಾನಿಸಿದ ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮ್ಹಾಲಕರ ಸಂಘದ ಗೌರವಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ ಮಾತನಾಡಿ, ಕನ್ನಡ ರಾಜ್ಯೋತ್ಸವದ ಆಚರಣೆಯು ಇಂದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸೀಮಿತವಾಗಿದೆ. ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ಕರ್ತವ್ಯ ಮಾತ್ರವಲ್ಲ. ಇಂದು ಸಾಂಕೇತಿಕವಾಗಿ ನಡೆಯುತ್ತಿದೆ. ಹಿಂದೆ ಬಡತನವಿದ್ದರೂ ಬಹಳಷ್ಟು ಸಂಭ್ರಮವಿತ್ತು. ಈಗ ಸ್ವಂತಕ್ಕಾಗಿ ಯೋಚನೆಗಳು ಮಾತ್ರವಾಗಿದೆ. ಸಾಮಾಜಿಕ ಚಿಂತನೆಗಳಿಲ್ಲ ಎಂದ ಅವರು, ಕಷ್ಟದಲ್ಲಿದ್ದವರನ್ನು ಕಂಡಾಗ ಮಾರುದ್ದ ದೂರ ಹೋಗುವ ಕಾಲದಲ್ಲಿ ಅಸಹಾಯಕರ ನೆರವಿಗೆ ಬರುತ್ತಿರುವ ದಿವ್ಯಪ್ರಭಾ ಗೌಡರವರ ಕಾರ್ಯವನ್ನು ಶ್ಲಾಘಿಸಿದರು. 

ಬಿಎಂಎಸ್ ಆಟೋ ರಿಕ್ಷಾ ಚಾಲಕ ಮ್ಹಾಲಕ ಸಂಘದ ಅಧ್ಯಕ್ಷ ರಾಜೇಶ್ ಮಾತನಾಡಿ, ಸಾಮಾನ್ಯ ಆಟೋ ಚಾಲಕರ ಸೇವಾ ಕಾರ್ಯವನ್ನು ಗುರುತಿಸಿ, ಸನ್ಮಾನಿಸುತ್ತಿರುವ ಕಾರ್ಯವೂ ಬಹಳಷ್ಟು ಸಂತೋಷ ತಂದಿದೆ ಎಂದರು.

ಆಟೋ ರಿಕ್ಷಾ ಚಾಲಕರ ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ಜಯರಾಮ ಕುಲಾಲ್ ಮಾತನಾಡಿ, ಎಲ್ಲರ ಕಷ್ಟಗಳಲ್ಲಿ ಭಾಗಿಗಳಾಗುವ ರಿಕ್ಷಾ ಚಾಲಕರು ಸಂಕಷ್ಟದಲ್ಲಿರುವಾಗ ಯಾರೂ ಕೇಳುವವರೇ ಇಲ್ಲ. ನಗರದಲ್ಲಿ ಒಂದೇ ಒಂದು ಆಟೋ ಪಾರ್ಕಿಂಗ್ ಇಲ್ಲ. ಗ್ರಾಮಾಂತರ ಪ್ರದೇಶದಲ್ಲಿದ್ದರೂ ನಗರದಲ್ಲಿರುವವರು ವಂಚಿತರಾಗಿದ್ದೇವೆ. ಇದ್ದ ಪಾರ್ಕಿಂಗ್ ತೆರವು ಮಾಡಿದ್ದಾರೆ. ಇದರ ಬಗ್ಗೆ ಹೋರಾಟ ಮಾಡಲಾಗುವುದು. ಘನ ವಾಹನಗಳು ಮುಖ್ಯರಸ್ತೆಯಲ್ಲಿ ನೇರವಾಗಿ ಸಂಚರಿಸಬಹುದು. ಆದರೆ ಸಣ್ಣ ಆಟೋ ರಿಕ್ಷಾಗಳು ನೇರವಾಗಿ ಸಂಚರಿಸುವುದಕ್ಕೆ ನಿರ್ಬಂಧವಿದೆ. ಇದರ ಬಗ್ಗೆ ಅರಿವಿಲ್ಲದೆ ಹೊರಭಾಗದಿಂದ ಬರುವಂತ ಆಟೋ ಚಾಲಕರ ಮೇಲೆ ಪೊಲೀಸರು ಕೇಸು ಹಾಕುತ್ತಾರೆ. ನಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರೂ ಬೆಲೆ ದೊರೆತಿಲ್ಲ ಎಂದು ನೋವನ್ನು ವ್ಯಕ್ತಪಡಿಸಿದರು.

ಆಟೋ ಚಾಲಕ ಸತೀಶ್ ಪ್ರಭು ಮಣಿಯ ಮಾತನಾಡಿ, ಆಟೋ ಚಾಲಕರ ವೃತ್ತಿಯನ್ನು ಯಾರೂ ಗುರುತಿಸಿಲ್ಲ. ನಮ್ಮ ವೃತ್ತಿಯನ್ನು ಗೌರವಿಸಿ ಗುರುತಿಸಿರುವ ದಿವ್ಯಪ್ರಭಾ ಗೌಡ ಚಿಲ್ತಡ್ಕರವರಿಗೆ ಅಭಿನಂದನೆ ಸಲ್ಲಿಸಿದ ಅವರು, ಆಟೋ ಚಾಲಕರಲ್ಲಿರುವ ಹಲವು ಸಮಸ್ಯೆಗಳಿಗೆ ಸಹಕರಿಸುವಂತೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಮದೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮಾತನಾಡಿ, ಆಟೋ ರಿಕ್ಷಾ ಚಾಲಕರ ಎಲ್ಲಾ ರೀತಿಯ ಸಮಸ್ಯೆಗಳಿಗೆ ಸಹಕರಿಸುತ್ತೇನೆ. ನಿಮ್ಮ ಸಮಸ್ಯೆಗಳನ್ನು ನನ್ನ ಜೊತೆ ಹಂಚಿಕೊಳ್ಳಿ. ನಿಮ್ಮ ಸಮಸ್ಯೆಗಳಿಗೆ ನಾನು ಸ್ಪಂಧಿಸುತ್ತೇನೆ. ಸಮಸ್ಯೆಗಳನ್ನು ಪರಿಹರಿಸಲು ಚಿಂತಿಸಿ, ಎಲ್ಲರ ಅಭಿಪ್ರಾಯ ಪಡೆದು ಚಾಲಕರ ಕುಟುಂಬಕ್ಕೆ ಪೂರಕವಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮೋಹನ ಗುರ್ಜಿನಡ್ಕ, ಕಾಮದೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮಾಧವ ಗೌಡ, ಕುಂಬ್ರ ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಉಪಸ್ಥಿತರಿದ್ದರು.

ದಿವ್ಯಪ್ರಭಾ ಗೌಡ ಚಿಲ್ತಡ್ಕ ಸ್ವಾಗತಿಸಿದರು. ಶಿವನಾಥ ರೈ ಮೇಗಿನಗುತ್ತು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಮೃದ್ಧಿ ಮ್ಯೂಸಿಕಲ್ಸ್‌ನ ಶಿವಾನಂದ ಶೆಣೈ ನೇತೃತ್ವದಲ್ಲಿ ಕನ್ನಡ ಭಾವ ಗಾನ ಕಾರ್ಯಕ್ರಮ ನೆರವೇರಿತು.

ಸಭಾ ಕಾರ್ಯಕ್ರಮದ ಬಳಿಕ ತಾಲೂಕಿನ ಸುಮಾರು 20 ಆಟೋ ರಿಕ್ಷಾ ನಿಲ್ದಾಣಗಳಿಗೆ ತೆರಳಿ, ಅಲ್ಲಿ ಆಟೋ ಚಾಲಕರಿಗೆ ರಶಪ್ರಶ್ನೆಗಳನ್ನು ಏರ್ಪಡಿಸಿ, ವಿಜೇತರಾದವರಿಗೆ ಬಹುಮಾನ ವಿತರಿಸಿದರು.

LEAVE A REPLY

Please enter your comment!
Please enter your name here