ದಿ.ಪ್ರವೀಣ್ ನೆಟ್ಟಾರು ನೂತನ ಮನೆಯ ಶಂಕುಸ್ಥಾಪನೆ

0

ದಿ. ಪ್ರವೀಣ್ ನೆಟ್ಟಾರು ಮನೆಗೆ ಶಂಕುಸ್ಥಾಪನೆ

ಪ್ರವೀಣ್ ಕನಸಿನ ಮನೆಗೆ ಸಾಥ್ ನೀಡಿದ ನಳಿನ್

ಪುತ್ತೂರು: ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು(34ವ)ರವರ ಕನಸಿನ ಮನೆಗೆ ದ.ಕ. ಸಂಸದರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನ.2ರಂದು ಶಂಕು ಸ್ಥಾಪನೆ ನೆರವೇರಿಸಿದರು.
ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿರುವ ಪ್ರವೀಣ್ ಸಮಾಧಿ ಬಳಿಯ ಜಾಗದಲ್ಲಿ ಹೊಸ ಮನೆಗೆ ಶಂಕುಸ್ಥಾಪನೆ ಮಾಡಲಾಯಿತು.
ಮೊಗರೋಡಿ ಕನ್ಸ್ ಸ್ಟ್ರಕ್ಷನ್ ಕಂಪನಿಗೆ ಮನೆ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದೆ.‌ ಕೆಲ ದಿನಗಳ ಹಿಂದೆ ಪ್ರವೀಣ್ ಕುಟುಂಬಸ್ಥರಿಗೆ ಭರವಸೆ ನೀಡಿದ್ದ ‌ನಳಿನ್ ಅವರು ಕೊಟ್ಟ ಮಾತಿನಂತೆ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದರು.
ನ.2ರಂದು ಬೆಳಿಗ್ಗೆ 9.30ಕ್ಕೆ ಪ್ರವೀಣ್ ನೂತನ ಮನೆಗೆ ಶಂಕುಸ್ಥಾಪನೆ ಮಾಡಲಾಯಿತು. ಪ್ರವೀಣ್ ಪತ್ನಿ‌ ನೂತನಾರವರಿಗೆ ‌ದ.ಕ ಜಿಲ್ಲಾಧಿಕಾರಿ ‌ಕಚೇರಿಯಲ್ಲಿ ನೌಕರಿ‌ ಕೊಡಿಸುವಲ್ಲಿ‌ ಮುಖ್ಯ ಪಾತ್ರ ವಹಿಸಿದ್ದ ನಳಿನ್ ಕುಮಾರ್ ಕಟೀಲ್ ಅವರು ಇದೀಗ ಮನೆಯ ಕನಸ್ಸನ್ನು ನನಸಾಗಿಸುವತ್ತ ಹೆಜ್ಜೆ ಇರಿಸಿದ್ದಾರೆ.

ಶಂಕುಸ್ಥಾಪನೆ ‌ನೆರವೇರಿಸಿದ ಬಳಿಕ ಮಾತನಾಡಿದ‌ ನಳಿನ್ ಕುಮಾರ್ ಅವರು, ಪ್ರವೀಣ್ ಕನಸು ನನಸು ಮಾಡಲು ಪಕ್ಷ ಹೆಜ್ಜೆ ಇಟ್ಟಿದೆ.
ಅವರ ಹಳೆಯ ಮನೆ ಕೆಡವಿ ಇಂದು ಹೊಸ ಮನೆಗೆ ಗುದ್ದಲಿ ಪೂಜೆ ಮಾಡಿದ್ದೇವೆ. 60 ಲಕ್ಷ ರೂ ವೆಚ್ಚದಲ್ಲಿ 2700 ಚದರ ಅಡಿಯ ಮನೆ ನಿರ್ಮಾಣ ಆಗಲಿದೆ.
ಈಗಾಗಲೇ ಪ್ರವೀಣ್ ಪತ್ನಿಗೆ ಡಿಸಿ ‌ಕಚೇರಿಯಲ್ಲಿ ಕೆಲಸ ಸಿಕ್ಕಿದೆ ಎಂದರು. ಪ್ರವೀಣ್ ಮನೆಯವರಿಗೆ ಬಿಜೆಪಿಯಿಂದ 25 ಲಕ್ಷ ರೂ, ಸರ್ಕಾರದಿಂದ 25 ಲಕ್ಷ ರೂ ಹಾಗೂ ಯುವಮೋರ್ಛಾದಿಂದ 15 ಲಕ್ಷ ರೂ‌ ಕೊಡಲಾಗಿದೆ. ಪ್ರವೀಣ್ ನಮ್ಮ ಒಂದೊಳ್ಳೆಯ ಕಾರ್ಯಕರ್ತರಾಗಿದ್ದರು, ಅವರ ಕುಟುಂಬದ ಜೊತೆ ನಾವು ನಿಂತಿದ್ದೇವೆ. ಅವರ ಕೆಲಸಕ್ಕೆ ‌ಮೌಲ್ಯ ಕಟ್ಟಲು ಸಾಧ್ಯವೇ ಇಲ್ಲ, ಹಾಗಾಗಿ ಇಲ್ಲಿ ಹಣ ಮುಖ್ಯವಲ್ಲ. ಬಿಜೆಪಿ ತನ್ನ ಪಕ್ಷದ ಕಾರ್ಯಕರ್ತನ ಕುಟುಂಬದ ಪರ ಯಾವತ್ತೂ ‌ನಿಲ್ಲಲಿದೆ. ಹತ್ಯೆಯಾದ ವೇಳೆಯೇ ಕುಟುಂಬದ ಜೊತೆ ನಿಲ್ಲುವ ಭರವಸೆ ಕೊಟ್ಟಿದ್ದೆವು. ಅವರು ಪಕ್ಷಕ್ಕೆ ಸಾಕಷ್ಟು ಸಮಯ ಕೊಟ್ಟಿದ್ದರು. ಹಾಗಾಗಿ ಪಕ್ಷ ಅವರ ಕುಟುಂಬದ ಪರ ನಿಂತಿದೆ.
ಮನೆಯವರೇ ಕೊಟ್ಟ ನಕ್ಷೆಯ ಪ್ರಕಾರ ಈ ಮನೆ ನಿರ್ಮಾಣ ಆಗುತ್ತಿದೆ.

ಹಲವಾರು ಮಂದಿ ‌ಮನೆ ಕಟ್ಟಿ ಕೊಡಲು ಮುಂದೆ ಬಂದಿದ್ದರು. ಆದರೆ ಅವರ ಮನೆಯವರ ಅಭಿಪ್ರಾಯದಂತೆ ಪಕ್ಷವೇ ಮನೆ ಕಟ್ಟಿ ಕೊಡುತ್ತಿದೆ. ಇಡೀ ಮನೆಯ ವೆಚ್ಚವನ್ನು ಬಿಜೆಪಿ ಭರಿಸುತ್ತದೆ ಎಂದ ಅವರು ಈಗಾಗಲೇ ಹಂತಕರ ಬಂಧನ ಆಗಿದೆ, ಕೊಲೆಗೆ ಆರ್ಥಿಕ ಸಹಕಾರ ಕೊಟ್ಟವರಿಗೆ ಲುಕ್ ಔಟ್ ನೋಟೀಸ್ ಜಾರಿಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ‌ಸರಿಯಾದ ತನಿಖೆ ಮಾಡುತ್ತಿದೆ.
ಕೊಲೆಯ ಹಿಂದೆ ಇರುವ ಎಲ್ಲಾ ಶಕ್ತಿಗಳನ್ನು ಬಂಧಿಸುವ ಕೆಲಸ ಆಗುತ್ತಿದೆ ಪ್ರಮುಖ ಆರೋಪಿಗಳು ಜೈಲಿನ ಒಳಗೆ ಇದ್ದಾರೆ ಎಂದರು.
ಆರ್ಥಿಕ ಸಹಕಾರ, ವಾಹನ ಕೊಟ್ಟವರು, ಮಾನಸಿಕವಾಗಿ ಆರೋಪಿಗಳ ಜೊತೆ ನಿಂತವರನ್ನೂ ಬಿಡುವುದಿಲ್ಲ ಎಂದ‌ ನಳಿನ್ ಅವರು ಎನ್ಐಎ ತಪ್ಪಿಸಿಕೊಂಡವರ ಪತ್ತೆಗೆ ಬಹುಮಾನ ‌ಘೋಷಿಸಿದೆ. ಈಗಾಗಲೇ ಪ್ರವೀಣ್ ಹತ್ಯೆ ಬಳಿಕ ಪಿಎಫ್ಐ ನಿಷೇಧ ಆಗಿದೆ.
ಸದ್ಯ ‌ಹತ್ಯೆ ಕೇಸ್ ಆರೋಪಿಗಳು ಯಾವ ಕೋರ್ಟ್ ನಲ್ಲೂ ಹೊರ ಬರದ ಹಾಗೆ ಪ್ರಕರಣ ದಾಖಲಿಸಲಾಗಿದೆ. ಎನ್ ಐಎ ಇದಕ್ಕೆ ಸಂಬಂಧಿಸಿ ಎಲ್ಲಾ ರೀತಿಯ ಕೆಲಸ ಮಾಡುತ್ತಿದೆ ಎಂದರು. ಮನೆಯ ಗುದ್ದಲಿ ಪೂಜೆ ಬಳಿಕ ಪ್ರವೀಣ್ ಪತ್ನಿ ‌ನೂತನಾ ಮಾತನಾಡಿ
ಸಂಸದರು, ಸಚಿವರು ಮತ್ತು ಬಿಜೆಪಿ‌ ಮುಖಂಡರು ಪ್ರವೀಣ್ ಅವರ ‌ಕನಸಿಗೆ ಹೆಜ್ಜೆ ಇಟ್ಟಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು ಕನಸಿನ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಮ್ಮ ಮನೆಯವರ ಪರವಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ.
ಎಲ್ಲಾ ಪಕ್ಷದ ನಾಯಕರು ನಮ್ಮ ‌ಜೊತೆಗೆ ನಿಂತಿದ್ದಾರೆ. ಆರೋಪಿಗಳನ್ನ ಹಿಡಿಯುವಲ್ಲೂ ಸಹಕಾರ ಮುಂದೆಯೂ ಸಿಗಲಿ. ಇನ್ನೂ ಆರು ಜನರ ಪತ್ತೆ ಆಗಬೇಕು, ಅವರನ್ನೂ ಹಿಡಿಯಲು ಎಲ್ಲರೂ ಸಹಕರಿಸಬೇಕು ಎಂದರು.

ಸಚಿವ ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಪ್ರವೀಣ್ ಅವರ ತಂದೆ, ತಾಯಿ ಸಹಿತ ಹಲವರು ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here