ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ತಜ್ಞ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ

0

ಆರೋಗ್ಯ ದೊಡ್ಡ ವರ, ಕಾಳಜಿಯುತ ಕರ್ತವ್ಯ ಮುಖ್ಯ-ವಂ|ಲಾರೆನ್ಸ್ ಮಸ್ಕರೇನ್ಹಸ್

ಪುತ್ತೂರು:ಆರೋಗ್ಯವೇ ಭಾಗ್ಯ,ಆರೋಗ್ಯದಿಂದ  ಬದುಕಿನಲ್ಲಿ ನೆಮ್ಮದಿ, ಶಾಂತಿ ಸಿಗುತ್ತದೆ. ಆರೋಗ್ಯ ದೇವರು ಕೊಟ್ಟ ದೊಡ್ಡ ವರ, ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಕರ್ತವ್ಯ ವಹಿಸುವಂತಾಗಲಿ ಎಂದು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಪುತ್ತೂರು ಇದರ ಆರೋಗ್ಯ ಆಯೋಗ ಮತ್ತು ಸ್ರ್ತೀಯರ ಆಯೋಗದ ಮುಂದಾಳತ್ವದಲ್ಲಿ ಐಸಿವೈಎಂ, ವೈಸಿಎಸ್, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ, ಡೊನ್ ಬೊಸ್ಕೊ ಕ್ಲಬ್, ಸ್ರ್ತೀ ಸಂಘಟನೆ, ಸಂತ ವಿನ್ಸೆಂಟ್ ದೇ ಪಾವ್ಲ್ ಸಭಾ, ಕಥೋಲಿಕ್ ಸಭಾ, ಲೀಜನ್ ಆಫ್ ಮೇರಿ, ಕ್ರಿಸ್ಟೋಫರ್ ಅಸೋಸಿಯೇಶನ್ ಇವುಗಳ ಸಹಕಾರದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಕಂಕನಾಡಿ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಇವರು ಆಯೋಜಿಸುವ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ನ.6 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದಿದ್ದು, ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಅವರು ಮಾತನಾಡಿದರು.

ಮನುಷ್ಯನ ಒತ್ತಡದ ಬದುಕಿನ ಜಂಜಾಟದಲ್ಲಿ ಬೇರೆ ಬೇರೆ ಕಾರಣಗಳಿಂದ ರೋಗ ಬಾಧಿಸುತ್ತದೆ. ರಕ್ತ ನೀಡುವುದರಿಂದ ನಾವು ಇತರರ ಜೀವವನ್ನು ಉಳಿಸಿಕೊಳ್ಳಲು ಶಕ್ತರಾಗುತ್ತೇವೆ. ಈ ಶಿಬಿರದ ಯಶಸ್ವಿ ಹಿಂದೆ ಚರ್ಚ್ ನ ವಿವಿಧ ಸಂಘಟನೆಗಳು ನಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದರು.
ತುಂಬೆ ಫಾ|ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ|ಸಿಲ್ವೆಸ್ತರ್ ವಿನ್ಸೆಂಟ್ ಲೋಬೊರವರು ಮಾತನಾಡಿ, ಆರೋಗ್ಯ ಇದ್ದವರಿಗೆ ವೈದ್ಯರ ಅಗತ್ಯವಿಲ್ಲ. ನಾವು ರೋಗ ಬರದಂತೆ ನೋಡಿಕೊಳ್ಳಬೇಕು. ದೇವರು ವೈದ್ಯರ ಹಾಗೂ ಶುಶ್ರೂಷಕಿಯರ ಮುಖೇನ ನಮ್ಮನ್ನು ಗುಣಪಡಿಸುತ್ತಾನೆ. ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಸಿಗುತ್ತದೆ. ಮರಣಾನಂತರ ಮಾನವ ಅಂಗಾಂಗಗಳ ದಾನ ಮೂಲಕ ಮತ್ತೊಬ್ಬರ ಜೀವವನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.

ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ:
ಶಿಬಿರದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಇವರ ವಿಶೇಷ ವೈದ್ಯಕೀಯ ವಿಭಾಗಗಳಿಂದ ಜನರಲ್ ಮೆಡಿಸಿನ್, ಮಕ್ಕಳ ಆರೋಗ್ಯ ಚಿಕಿತ್ಸೆ, ಕಿವಿ, ಮೂಗು ಮತ್ತು ಗಂಟಲು ಚಿಕಿತ್ಸೆ, ಸ್ತ್ರೀ ರೋಗ ಚಿಕಿತ್ಸೆ, ಚರ್ಮ ರೋಗ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ಮೂಳೆ ರೋಗ ಚಿಕಿತ್ಸೆ, ದಂತ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಇದರ ತಪಾಸಣೆಯನ್ನು ನಡೆಸಲಾಯಿತು.

ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಫಾ.ಮುಲ್ಲರ್ ಮೆಡಿಕಲ್ ಕಾಲೇಜು ಸೂಪರಿಟೆಂಡೆಂಟ್ ಡಾ|ಕಿರಣ್ ಶೆಟ್ಟಿ, ಆರೋಗ್ಯ ಆಯೋಗದ ಸಂಚಾಲಕಿ ಝೀನಾ ಗೋವಿಯಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐಸಿವೈಎಂ ಸಂಘಟನೆಯ ಸದಸ್ಯರು ಪ್ರಾರ್ಥಿಸಿದರು. ಚರ್ಚ್ ನ 21 ಆಯೋಗಗಳ ಸಂಚಾಲಕ ಲ್ಯಾನ್ಸಿ ಮಸ್ಕರೇನ್ಹಸ್ ಸ್ವಾಗತಿಸಿದರು. ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಅಧ್ಯಕ್ಷ ಜೋಯೆಲ್ ಕುಟಿನ್ಹಾ, ಸ್ತ್ರೀ ಸಂಘಟನೆ ಸದಸ್ಯೆ ಲೀನಾ ರೇಗೊ, ಕಥೋಲಿಕ್ ಸಭಾ ಸದಸ್ಯ ಪಾವ್ಲ್ ಮೊಂತೇರೊರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸ್ತ್ರೀ ಆರೋಗ್ಯ ಆಯೋಗದ ಸಂಚಾಲಕಿ ವಿಲ್ಮಾ ಮರಿಯ ಡಿ’ಸೋಜ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಸಿಕ್ಕಂತಹ ಸೇವೆಗಳು..
ಶಿಬಿರದಿಂದ ಶಿಬಿರಾರ್ಥಿಗಳಿಗೆ ಡಯಾಬಿಟಿಸ್ ಕಾಯಿಲೆಯ ತಪಾಸಣೆ ಜಿ.ಆರ್.ಬಿ.ಎಸ್, ರಕ್ತದೊತ್ತಡ ಪರೀಕ್ಷೆ, ಔಷಧಿಗಳನ್ನು ಉಚಿತವಾಗಿ ಸೇವೆಯನ್ನು ನೀಡಲಾಯಿತು.

300ಕ್ಕೂ ಮಿಕ್ಕಿ ಫಲಾನುಭವಿಗಳು..
38 ಮಂದಿ ರಕ್ತದಾನ…
ಸುಮಾರು ಮುನ್ನೂರಕ್ಕೂ ಮಿಕ್ಕಿ ಫಲಾನುಭವಿಗಳು ಶಿಬಿರದಲ್ಲಿ ಭಾಗವಹಿಸಿದ್ದು ವಿಶೇಷ ವೈದ್ಯಕೀಯ ವಿಭಾಗಗಳಾದ ಜನರಲ್ ಮೆಡಿಸಿನ್, ಮಕ್ಕಳ ಆರೋಗ್ಯ ಚಿಕಿತ್ಸೆ, ಕಿವಿ, ಮೂಗು ಮತ್ತು ಗಂಟಲು ಚಿಕಿತ್ಸೆ, ಸ್ತ್ರೀ ರೋಗ ಚಿಕಿತ್ಸೆ, ಚರ್ಮ ರೋಗ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ಮೂಳೆ ರೋಗ ಚಿಕಿತ್ಸೆ, ದಂತ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಮುಂತಾದ ವಿಭಾಗಗಳಲ್ಲಿ ತಪಾಸಣೆಯಲ್ಲಿ ಪಾಲ್ಗೊಂಡರು.ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸಗ, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಫಿಲೋಮಿನಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಆಯೋಗಗಳ ಸಂಚಾಲಕ ಲ್ಯಾನ್ಸಿ ಮಸ್ಕರೇನ್ಹಸ್ ಸೇರಿದಂತೆ 38 ಮಂದಿ ರಕ್ತದಾನ ಮಾಡಿರುತ್ತಾರೆ.

LEAVE A REPLY

Please enter your comment!
Please enter your name here