ಅಧ್ಯಕ್ಷ: ರಫೀಕ್ ಅಲ್‌ರಾಯ, ಪ್ರ.ಕಾರ್ಯದರ್ಶಿ: ಭವ್ಯ ರೈ, ಕೋಶಾಧಿಕಾರಿ: ಸಂಶುದ್ದೀನ್, ಉಪಾಧ್ಯಕ್ಷ: ಉದಯ ಆಚಾರ್ಯ, ರಮ್ಯಶ್ರಿ
ಪುತ್ತೂರು: ಕುಂಬ್ರ ವರ್ತಕರ ಸಂಘದ ಮಹಾಸಭೆಯು ನ.08 ರಂದು ಅಕ್ಷಯ ಆರ್ಕೇಡ್‌ನ ಸಭಾಭವನದಲ್ಲಿ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಅಝರ್ ಷಾ ಕುಂಬ್ರ ವರದಿ ವಾಚಿಸಿದರು. ಸಂಶುದ್ದೀನ್ ಎ.ಆರ್ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹೊಟೇಲ್ ಉದ್ಯಮಿ ರಫೀಕ್ ಅಲ್‌ರಾಯ, ಪ್ರಧಾನ ಕಾರ್ಯದರ್ಶಿಯಾಗಿ ಭವ್ಯ ರೈ, ಉಪಾಧ್ಯಕ್ಷರಾಗಿ ಉದಯ ಆಚಾರ್ಯ ಕೃಷ್ಣನಗರ, ಜತೆ ಕಾರ್ಯದರ್ಶಿಯಾಗಿ ಚರಿತ್ ಕುಮಾರ್ ಮತ್ತು ರೇಷ್ಮಾ ಮೆಲ್ವಿನ್ ಹಾಗೂ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಘದ ಗೌರವ ಸಲಹೆಗಾರರಾದ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಚಂದ್ರಕಾಂತ ಶಾಂತಿವನರವರು ಮಾತನಾಡಿ, ಜಾತಿ,ಮತ,ರಾಜಕೀಯ ಬೇಧ ಭಾವವಿಲ್ಲದೆ ಕಳೆದ ಹಲವು ವರ್ಷಗಳಿಂದ ವರ್ತಕರ ನೋವು ನಲಿವಿನಲ್ಲಿ ಸದಾ ಜೊತೆಗಿರುವ ಸಂಘವು ವರ್ತಕರಿಗಾಗಿ ಸದಾ ಸೇವೆ ಮಾಡುವ ಸಂಘವಾಗಿದೆ. ಹಲವು ಅಧ್ಯಕ್ಷರುಗಳು ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು ಇದೀಗ ನೂತನ ಸಮಿತಿಯಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.
ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು ಸಮಾರೋಪ ಭಾಷಣ ಮಾಡಿ, ವರ್ತಕರ ಆಗುಹೋಗುಗಳಿಗೆ ಸದಾ ಸ್ಪಂದನೆ ನೀಡುವ ಕೆಲಸ ಸಂಘದಿಂದ ನಡೆಯುತ್ತಾ ಬಂದಿದ್ದು ಮುಂದೆಯೂ ಸಂಘದಿಂದ ಎಲ್ಲಾ ರೀತಿಯ ಸಹಕಾರ ವರ್ತಕರಿಗೆ ಸಿಗಲಿದೆ. ಸಮಾಜಮುಖಿ ಕೆಲಸಗಳಿಂದ ತಾಲೂಕಿನಲ್ಲಿಯೇ ಹೆಸರು ಪಡೆದಿರುವ ಕುಂಬ್ರ ವರ್ತಕರ ಸಂಘದೊಂದಿಗೆ ಎಲ್ಲಾ ವರ್ತಕರು, ಗ್ರಾಮಸ್ಥರು ಕೈಜೋಡಿಸುವಂತೆ ಕೇಳಿಕೊಂಡು ಶುಭ ಹಾರೈಸಿದರು.
ಎಸ್.ಮಾಧವ ರೈ ಸ್ವಾಗತಿಸಿ, ಭವ್ಯ ರೈ ವಂದಿಸಿದರು. ನಾರಾಯಣ ಪೂಜಾರಿ ಕುರಿಕ್ಕಾರ ಕಾರ್ಯಕ್ರಮ ನಿರೂಪಿಸಿದರು. ಮೆಲ್ವಿನ್ ಮೊಂತೆರೋ, ದಿವಾಕರ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸದಸ್ಯರುಗಳು ಸಹಕರಿಸಿದ್ದರು.
‘ ವರ್ತಕರ ನೋವು ನಲಿವಿನಲ್ಲಿ ಸದಾ ಜೊತೆಗಿರುವ ಕುಂಬ್ರ ವರ್ತಕರ ಸಂಘಕ್ಕೆ ತಾಲೂಕಿನಲ್ಲೇ ಒಂದು ಒಳ್ಳೆಯ ಹೆಸರು ಇದ್ದು ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಮುಂದೆಯೂ ಸಂಘದಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲು ತಮ್ಮೆಲ್ಲರ ಸಹಕಾರ ಬಯಸುತ್ತೇನೆ.’
-ರಫೀಕ್ ಅಲ್‌ರಾಯ, ಅಧ್ಯಕ್ಷರು ವರ್ತಕರ ಸಂಘ ಕುಂಬ್ರ