ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಅಡಿಪಾಯ-ಪದ್ಮರಾಜ್ ಆರ್
ಪುತ್ತೂರು: ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಅಡಿಪಾಯ ಆಗಿದೆ. ವಿದ್ಯೆಯಿಂದ ಸ್ವತಂತ್ರರಾಗುವ ಮೂಲಕ ಮತ್ತು ರಾಜಕೀಯ ಸ್ವಾರ್ಥ ರಹಿತ ಸಂಘಟನೆಯಿಂದ ಮಾತ್ರ ಸಮಾಜಮುಖಿ ಸೇವೆ ಸಾಧ್ಯವಿದೆ ಎಂದು ಯುವ ನ್ಯಾಯವಾದಿ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.
ಯುವವಾಹಿನಿ ಉಪ್ಪಿನಂಗಡಿ ಘಟಕದ ಬೆಳ್ಳಿ ಹಬ್ಬದ ಸಂಭ್ರಮದೊಂದಿಗೆ ತುಳಸಿ ಹಬ್ಬದ ಪ್ರಯುಕ್ತ ಪೆರ್ನೆ ಸಮೃದ್ಧಿ ನಿಲಯದಲ್ಲಿ ಆಯೋಜಿಸಿದ್ದ ‘ಬೆಳ್ಳಿ ಬೆಳಕಿನ ಚಿತ್ತಾರ’ ಕಾರ್ಯಕ್ರಮದ ವೇದಿಕೆಯಲ್ಲಿ ‘ಬಿರುವೆರ್ ಪೆರ್ನೆ ಬಿಳಿಯೂರು’ ನೂತನ ಸಂಘಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಡಾ.ರಾಜಾರಾಮ್. ಕೆ.ಬಿ.ರವರು, ರಾಜಕೀಯ ರಹಿತವಾಗಿ ಜಾತಿ,ಮತ,ಧರ್ಮದ ಭೇದಭಾವವಿಲ್ಲದೇ ಸರ್ವರ ಹಿತವನ್ನು ಬಯಸಿ ಸಮಾಜಮುಖಿ ಕಾರ್ಯವನ್ನು ಮಾಡಿರುವುದರಿಂದಲೇ ಅರ್ಹವಾಗಿ ಯುವವಾಹಿನಿಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ ಎಂದರು.
ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ಅಸೋಸಿಯೇಟ್ ಪ್ರೊಫೆಸರ್ ಡಾ.ಉಮ್ಮಪ್ಪ ಪೂಜಾರಿ ಮಾತನಾಡಿ ಸತ್ಯೊಡು ಬತ್ತಂಡ ತಿಗಲೆಡ್ ಸಾದಿ ಕೊರುವ, ಅನ್ಯಾಯೊಡು ಬತ್ತಂಡ ಸುರಿಯೊಡು ಜವಾಬು ಕೊರುವ ಎಂಬ ಅವಳಿ ವೀರರ ಮಾತನ್ನು ನೆನಪಿಸಿ ಘರ್ಷಣೆಗೆ ಎಡೆಮಾಡದೆ ಸತ್ಯದ ಹಾದಿಯನ್ನು ಹಿಡಿಯೋಣ ಎಂದು ಹೇಳಿದರು. ಸರಳ ಜೀವನದ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದ ಅವರು ಆಡಂಬರ ರಹಿತ ಬದುಕು ನೈಜತೆಯಿಂದ ಕೂಡಿರುತ್ತದೆ ಎಂದರು. ಯುವವಾಹಿನಿ ಉಪ್ಪಿನಂಗಡಿ ಘಟಕದ ಗೌರವ ಸಲಹೆಗಾರ ವರದರಾಜ್ ಎಂ. ಮಾತನಾಡಿ ರಾಜಕೀಯ ರಹಿತ ಸಂಘಟನೆಯಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದರು. ಪರಿಶುದ್ಧವಾದ ಮನಸ್ಸು ಮತ್ತು ಸಂಕಲ್ಪದಿಂದ ಸಂಘಟನೆಯ ಪಾವಿತ್ರ್ಯತೆಯನ್ನು ದುಪ್ಪಟ್ಟು ಮಾಡಬೇಕು ಎಂದು ಅವರು ಹೇಳಿದರು.
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್ ಮಾತನಾಡಿ ಯುವಜನತೆ ಉತ್ಸುಕರಾಗಿ ಸಂಘಟನೆಯ ಜೊತೆಗೆ ಸೇರಿ ಬಲಯುತವಾಗಬೇಕು. ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡಿ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕುಶಾಲಪ್ಪ ಹತ್ತುಕಳಸೆ ನೂತನ ಸಂಘಟನೆ ‘ಬಿರುವೆರ್ ಪೆರ್ನೆ ಬಿಳಿಯೂರು’ಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ನಾಟಿವೈದ್ಯೆ ಅಪ್ಪಿ ಬಾಬು ಪೂಜಾರಿ ಪುರಿಯ ಅವರನ್ನು ಕುಟುಂಬ ಸಮೇತರಾಗಿ ಸನ್ಮಾನಿಸಲಾಯಿತು.
ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ 14 ಹಾಗೂ 17 ವರ್ಷದ ಒಳಗಿನ ತ್ರೋಬಾಲ್ ಪಂದ್ಯಾಟದಲ್ಲಿ ರಾಷ್ಟ್ರ ಮಟಕ್ಕೆ ಆಯ್ಕೆಯಾದ ಸ್ಥಳೀಯ ಪ್ರತಿಭೆಗಳಾದ ಜಿತೇಶ್ ಹಾಗೂ ಶ್ರೇಯರವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ
ಸಮಾಜ ಬಾಂಧವರಾದ ವಸಂತ ಪೂಜಾರಿ ಬೆಳ್ಳಿಪಾಡಿ(ಮಾತೃಶ್ರೀ ಸೌಂಡ್ಸ್&ಲೈಟ್ಸ್),ಮಹೇಶ್ ಪೂಜಾರಿ(ಶ್ರೀಗುರುಕೃಪಾ ಶಾಮಿಯಾನ ಪೆರ್ನೆ),ವಿಕ್ರಮ್ ಪೂಜಾರಿ(ವಿಕ್ಕಿ ಫೋಟೋಗ್ರಾಫಿ),ದಿವಾಕರ ಪೂಜಾರಿ (ಸತ್ಯಶ್ರೀ ಕೇಟರರ್ಸ್ ಪೆರ್ನೆ)ರವರನ್ನು ಗೌರವಿಸಲಾಯಿತು.
ಪುಣ್ಯಭೂಮಿ ತುಳುನಾಡು ಸೇವಾ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ್ ಬಿ.ಸಿ.ರೋಡ್, ಕಳೆಂಜ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು ಮತ್ತು ಮಾಜಿ ಅಧ್ಯಕ್ಷ ಚಂದಪ್ಪ ಪೂಜಾರಿ ಕೆಳಗಿನಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
‘ಬಿರುವೆರ್ ಪೆರ್ನೆ ಬಿಳಿಯೂರು’ ಸಂಘಟನೆಯ ಅಧ್ಯಕ್ಷ ತನಿಯಪ್ಪ ಪೂಜಾರಿ ಹೊಸಮನೆ ಸ್ವಾಗತಿಸಿ, ಯುವವಾಹಿನಿ ಉಪ್ಪಿನಂಗಡಿ ಘಟಕದ ಕಾರ್ಯದರ್ಶಿ ಉದಯ್ ಪೂಜಾರಿ ಮಠಂತಬೆಟ್ಟು ವಂದಿಸಿದರು.
ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.