ಪ್ರತಿಭೆಗಳು ಸಾರ್ವಜನಿಕವಾಗಿ ಹೊರಹೊಮ್ಮಬೇಕು: ಸಚಿವ ಎಸ್.ಅಂಗಾರ
ಕಡಬ: ಪ್ರತಿಭೆಗಳು ಸಾರ್ವಜನಿಕವಾಗಿ ಹೊರಹೊಮ್ಮಿದಾಗ ಭವಿಷ್ಯದಲ್ಲಿ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆ ಸಿಗುತ್ತದೆ. ಕ್ರೀಡಾಳುಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಬೆಳೆಯಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ ಅವರು ಅಭಿಪ್ರಾಯಪಟ್ಟರು.
ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಕಡಬದ ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಗಳು ಮತ್ತು ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಶ್ರಯದಲ್ಲಿ ಕಡಬದ ಸೈಂಟ್ ಜೋಕಿಮ್ ಕ್ರೀಡಾಂಗಣದಲ್ಲಿ ಆಯೋಜಿಸಲ್ಪಟ್ಟಿರುವ ಅವಿಭಜಿತ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ ಬಾಲಕಿಯರ 2 ದಿನಗಳ ಕ್ರೀಡಾಕೂಟವನ್ನು ದೀಪ ಬೆಳಗಿಸಿ, ಗಿಡ ನೆಟ್ಟು ಬಳಿಕ ಪಾರಿವಾಳವನ್ನು ಆಗಸಕ್ಕೆ ಹಾರಿಬಿಡುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು. ಯಾವುದೇ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಚಿಗುರುವ ಸಾಮರ್ಥ್ಯ ನಮ್ಮಲ್ಲಿರಬೇಕು. ಕ್ರೀಡೆಗಳು ನಮಗೆ ಜೀವನವನ್ನು ಧೈರ್ಯದಿಂದ ಎದುರಿಸುವ ಪಾಠವನ್ನು ಹೇಳಿಕೊಡುತ್ತವೆ. ತಮ್ಮಲ್ಲಿನ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕಾದಲ್ಲಿ ಈ ರೀತಿಯ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅದರಿಂದ ನಮ್ಮಲ್ಲಿನ ಪ್ರತಿಭೆ ಸಾರ್ವಜನಿಕವಾಗಿ ಬಹಿರಂಗಗೊಂಡು ಇತರರಿಂದಲೂ ಪ್ರೋತ್ಸಾಹ, ಪ್ರೇರಣೆ ಸಿಗಲಿದೆ. ಪ್ರತಿಭೆಗೂ ಗೌರವ ದೊರೆತು ವ್ಯಕ್ತಿತ್ವವೂ ಬೆಳೆಯಲಿದೆ ಎಂದು ಅವರು ಹೇಳಿ ಶುಭಹಾರೈಸಿದರು. ಕ್ರೀಡಾಪಟುಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಪುತ್ತೂರಿನ ಸಂತ ಫಿಲೋಮಿನ ವಿದ್ಯಾಸಂಸ್ಥೆಗಳ ಸಂಚಾಲಕ ವಂ| ಲಾರೆನ್ಸ್ ಮಸ್ಕರೇನಸ್ ಅವರು ಕ್ರಿಯಾಶೀಲತೆಗೆ ಪೂರಕವಾಗಿರುವ ಕ್ರೀಡಾ ಸ್ಪರ್ಧೆಗಳು ಮನುಷ್ಯನ ಜೀವನಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ. ಮಾನವ, ಪ್ರಕೃತಿ ಮತ್ತು ದೇವರ ನಡುವೆ ಸಮತೋಲನ ಇದ್ದಾಗ ಮಾತ್ರ ನಾವು ಸಂತೋಷದಿಂದ ಬದುಕಲು ಸಾಧ್ಯ ಎಂದರು. ಸೈಂಟ್ ಜೋಕಿಮ್ ಮತ್ತು ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆಗಳ ಆತಿಥ್ಯದಲ್ಲಿ ಕ್ರೀಡಾಕೂಟವನ್ನು ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಡಬದ ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ| ಅರುಣ್ ವಿಲ್ಸನ್ ಲೋಬೋ ಅವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಕಡಬ ತಹಶೀಲ್ದಾರ್ ರಮೇಶ್ ಬಾಬು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಸೈಂಟ್ ಜೋಕಿಮ್ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ಸೈಮನ್ ಲೂವಿಸ್ ರೋಡ್ರಿಗಸ್, ಕಾರ್ಯದರ್ಶಿ ಜೇಮ್ಸ್ ಕ್ರಿಶಲ್ ಡಿ’ಸೋಜ, ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ದಯಾನಂದ ರೈ, ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್, ಸೈಂಟ್ ಆನ್ಸ್ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಜಿ.ಕೃಷ್ಣಪ್ಪ, ಉಪ ತಹಶೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಕಡಬ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್‌ಕುಮಾರ್ ನೆಲ್ಯಾಡಿ, ರಾಜ್ಯ ಪರಿಷತ್ ಸದಸ್ಯ ಮಾಮಚ್ಚನ್, ಪುತ್ತೂರು ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಕಡಬ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ, ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್‌ಕುಮಾರ್ ರೈ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಕಡಬ ಎಸ್.ಐ ಆಂಜನೇಯ ರೆಡ್ಡಿ, ಸೈಂಟ್ ಜೋಕಿಮ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಹಿಲ್ಡಾ ರೊಡ್ರಿಗಸ್, ಸೈಂಟ್ ಜೋಕಿಮ್ ಕಾಲೇಜಿನ ಪ್ರಾಂಶುಪಾಲ ಕಿರಣ್ ಕುಮಾರ್, ಸೈಂಟ್ ಜೋಕಿಮ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಲತಾ, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳಾದ ಸತೀಶ್ ನಾಯ್ಕ್ ಮೇಲಿನಮನೆ, ಅಂಜು ರವೀಂದ್ರ, ಆದಂ ಯೂನುಸ್ ಮುಂತಾದವರು ಉಪಸ್ಥಿತರಿದ್ದರು.
ಸೈಂಟ್ ಆನ್ಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ವಂ| ಅಮಿತ್‌ಪ್ರಕಾಶ್ ರೊಡ್ರಿಗಸ್ ಸ್ವಾಗತಿಸಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಪ್ರಸ್ತಾವನೆಗೈದರು. ಕ್ರೀಡಾಪಟು ಮಹಮ್ಮದ್ ಪ್ರತಿಜ್ಞಾವಿಧಿ ಬೋಧಿಸಿ, ಸೈಂಟ್ ಆನ್ಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ದಕ್ಷಾ ವಂದಿಸಿದರು. ಉಪನ್ಯಾಸಕ ರಾಜೇಶ್ ಎನ್., ಶಿಕ್ಷಕಿಯರಾದ ಭವಾನಿ ಮತ್ತು ಲೋಲಾಕ್ಷಿ ನಿರೂಪಿಸಿದರು.
ಸನ್ಮಾನ: ಅಂತರಾಷ್ಟ್ರೀಯ ಪವರ್ ಲಿಫ್ಟರ್‌ಗಳಾದ ವಿನ್ಸೆಂಟ್ ಪ್ರಕಾಶ್ ಕಾರ್ಲೋ ಹಾಗೂ ವೆನಿಜಿಯಾ ಆನಿ ಕಾರ್ಲೋ, ಕ್ರೀಡಾಕೂಟದ ಯಶಸ್ಸಿಗಾಗಿ ದುಡಿದ ವಂ| ಅರುಣ್ ವಿಲ್ಸನ್ ಲೋಬೋ, ವಂ| ಅಮಿತ್‌ಪ್ರಕಾಶ್ ರೊಡ್ರಿಗಸ್, ದೈಹಿಕ ಶಿಕ್ಷಣ ಶಿಕ್ಷಕರಾದ ಅಬ್ದುಲ್‌ಸಮದ್, ಅರುಣ್, ಆನಂದ ಪಿ., ಬಾಲ ಕಲಾವಿದ ವೇದಿಕ್ ಕೌಶಲ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಗೀತಾಮಣಿ, ಶಿವರಾಮ ಏನೆಕಲ್, ವಂದನಾ ಶರತ್ ಮುದಲಾಜೆ, ದಯಾನಂದ ರೈ, ಬಾಲಕೃಷ್ಣ ರೈ ಓಂತ್ರಡ್ಕ, ಶ್ರೀನಿವಾಸ ಎಚ್.ಬಿ., ಬಾಲಚಂದ್ರ ಕೊಲ, ಜಯರಾಮ ಗೌಡ ಹಾಗೂ ಪುರಂದರ ರೈ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.