ಕಡಬ: ಪಂಜ ರಸ್ತೆಯ ಕೋಡಿಂಬಾಳದಲ್ಲಿ ಅಟೋ ರಿಕ್ಷಾ ಮತ್ತು ಪಿಕಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ಕರ ಹರೆಯದ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ನ.10ರಂದು ಸಂಜೆ ನಡೆದಿದೆ. ಮೃತಪಟ್ಟ ಬಾಲಕನ ಕೂತ್ಕುಂಜ ಗ್ರಾಮದ ಮೀನಡ್ಕ ಕಟ್ಟಪುಣಿ ನಿವಾಸಿ ನವೀನ್ ಮತ್ತು ನಿಶ್ಮಿತಾ ದಂಪತಿಯ ಪುತ್ರ ಹಾರ್ದಿಕ್ ಎಂದು ಗುರುತಿಸಲಾಗಿದೆ.
ನೆಟ್ಟಣದಲ್ಲಿ ಮೆಡಿಕಲ್ ಹೊಂದಿರುವ ನವೀನ್ ಅವರು ತಮ್ಮ ಮಗುವನ್ನು ಕಡಬದ ಸರಸ್ವತಿ ವಿದ್ಯಾಲಯದ ಶಿಶು ಮಂದಿರಕ್ಕೆ ಸೇರ್ಪಡೆಗೊಳಿಸಿದ್ದರು.
ಮಗು ದಿನಾ ಶಾಲಾ ಬಸ್ಸಲ್ಲಿ ಹೋಗಿ ಬರುತ್ತಿತ್ತು. ಗುರುವಾರ ಮಗುವಿನ ತಾಯಿ ನಿಶ್ಮಿತಾ ಅವರು ಶಾಲೆಗೆ ಬಂದು ಇವತ್ತು ನಮಗೆ ಬೇರೆಡೆಗೆ ಹೋಗಲು ಇರುವುದರಿಂದ ಸ್ವಲ್ಪ ಬೇಗ ಕಳುಹಿಸಿಕೊಡಿ ಎಂದು ಶಾಲಾ ಶಿಕ್ಷಕಿಯ ಅನುಮತಿ ಪಡೆದು, ಮಲಗಿದ್ದ ಮಗುವನ್ನು ಎಬ್ಬಿಸಿ ತನ್ನ ಜೊತೆ ಕರೆದುಕೊಂಡು ಅನಂದ ಎಂಬವರ ಅಟೋ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಟೋ ರಿಕ್ಷಾ ಕೋಡಿಂಬಾಳದ ಮುರಚೆಡವು ಎಂಬಲ್ಲಿಗೆ ತಲುಪುತ್ತಿದ್ದ ವೇಳೆ, ಹರೀಶ್ ಎಂಬವರು ಚಲಾಯಿಸುತ್ತಿದ್ದ ಪಿಕಪ್ ತಿರುವಿನಲ್ಲಿ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು ,ರಿಕ್ಷಾದ ಒಂದು ಬದಿಯಲ್ಲಿ ಕುಳಿತಿದ್ದ ಬಾಲಕ ಹಾರ್ದಿಕ್ ಗಂಭೀರ ಗಾಯ ಗೊಂಡಿದ್ದರಿಂದ ತಕ್ಷಣ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಬಾಲಕ ಅಸುನೀಗಿದ್ದಾನೆ. ಮಗುವಿನ ತಾಯಿ ನಿಶ್ಮಿತಾ, ರಿಕ್ಷಾ ಚಾಲಕ ಸೇರಿದಂತೆ ರಿಕ್ಷಾದಲ್ಲಿದ್ದ ಇತರರು ಸಣ್ಣಪುಟ್ಟ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.