





ಪುತ್ತೂರು: ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಪ್ರಯಾಣಿಕ ಮೃತನಾಗಲು ಕಾರಣರಾದ ಆರೋಪ ಎದುರಿಸುತ್ತಿದ್ದ ಚಾಲಕ ಹಾಗೂ ನಿರ್ವಾಹಕನನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.


ಘಟನೆಯ ವಿವರ:
2023ರ ಡಿಸೆಂಬರ್ 23ರಂದು ಪುತ್ತೂರಿನಿಂದ ಸುಳ್ಯಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವ್ಯಕ್ತಿಯೋರ್ವರು ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಎಡಭಾಗದ ಕಣ್ಣಿನ ಹುಬ್ಬಿಗೆ ತರಚಿದ ಗಾಯ, ಬಲಭಾಗದ ತಲೆಗೆ ಮತ್ತು ಎಡಭಾಗದ ತಲೆಗೆ ತೀವ್ರ ತರದ ಮೂಳೆ ಮುರಿದ ಗಾಯವಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿ 6.2.2024ರವರೆಗೆ ಚಿಕಿತ್ಸೆಯಲ್ಲಿದ್ದು, ಬಳಿಕ ಬಿಡುಗಡೆಗೊಂಡು ತನ್ನ ಮನೆಯಾದ ದೇಲಂಪಾಡಿಯ ಕುತ್ತಿಮೂಂಡದಲ್ಲಿ ಆರೈಕೆಯಲ್ಲಿದ್ದರು. 15.02.2024ರಂದು ಸಂಜೆ 6.30 ಗಂಟೆಗೆ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಮನೆಯವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಗಾಯಾಳು ದಾರಿ ಮಧ್ಯೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಸ್ಸನ್ನು ಅಜಾಗರೂಕತೆ ಮತ್ತು ತೀವ್ರ ನಿರ್ಲಕ್ಷತನದಿಂದ ಚಲಾಯಿಸಿದ ಆರೋಪದಡಿ ಚಾಲಕ ಶಕೀರ್ ಮತ್ತು ಹಿಂಬದಿ ಬಾಗಿಲನ್ನು ಹಾಕದೆ ನಿರ್ಲಕ್ಷ್ಯ ವಹಿಸಿದ ಆರೋಪದಡಿ ನಿರ್ವಾಹಕ ಮಂಜುನಾಥ್ ವಿರುದ್ಧ ಕಲಂ279, 304(ಎ) ಜೊತೆಗೆ 34 ಐಪಿಸಿಯಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ದೇವರಾಜ್ ವೈ.ಎಚ್ ರವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳ ಪರ ವಕೀಲರಾದ ದೇವಾನಂದ ಕೆ. ಮತ್ತು ಹರಿಣಿ ವಾದಿಸಿದ್ದರು.














