ಪುತ್ತೂರು, ಕಡಬ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟನೆ

0

ನಮ್ಮ ಸರಕಾರದಿಂದ ಸಮಾಜವನ್ನು ಒಟ್ಟು ಮಾಡುವಂತಹ ಕ್ರೀಡಗಳಿಗೆ ಪ್ರಾಮುಖ್ಯತೆ – ಸಂಜೀವ ಮಠಂದೂರು

ಪುತ್ತೂರು: ಗ್ರಾಮೀಣ ಮಟ್ಟದ ಕ್ರೀಡಾಪಟುಗಳನ್ನು ಗುರುತಿಸಬೇಕು. ಆ ಪ್ರತಿಭೆಗಳು ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲೂ ಪ್ರತಿನಿಧಿಸಬೇಕೆಂಬ ನಿಟ್ಟಿನಲ್ಲಿ ಇವತ್ತು ಜಿ.ಪಂ, ತಾ.ಪಂ, ಕ್ರೀಡಾ ಇಲಾಖೆ ವಿಶೇಷವಾದಂತಹ ಸ್ಪರ್ಧೆಗಳನ್ನು ಗ್ರಾಮೀಣ ಭಾಗದಲ್ಲಿ ಮಾಡಲಾಗುತ್ತಿದೆ. ಇದು ಒಂದಷ್ಟು ಹಿರಿಯರ ಕಾಲದಿಂದ ಸಮಾಜವನ್ನು ಒಟ್ಟು ಮಾಡುವಂತಹ ಕ್ರೀಡೆಗಳಾಗಿದ್ದು, ಇದಕ್ಕೆ ಪ್ರಾಮುಖ್ಯತೆಯನ್ನು ನಮ್ಮ ಸರಕಾರ ನೀಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ತಾಲೂಕು ಪಂಚಾಯತ್ ಪುತ್ತೂರು, ಕಡಬ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಕಡಬ, ಸೌಜನ್ಯ ಯುವಜನ ಸಂಘ ಸಾಜ, ಸವಣೂರು ಯುವಕ ಮಂಡಲ ಸವಣೂರು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ಇದರ ಸಹಯೋಗದೊಂದಿಗೆ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನ.12ರಂದು ನಡೆದ ಗ್ರಾಮೀಣ ಕ್ರೀಡಾಕೂಟವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕೋವಿಡ್‌ನ 2 ವರ್ಷದ ಬಳಿಕ ಕ್ರೀಡಾಕೂಟ ನಡೆಸಲಾಗುತ್ತಿದೆ. ಗ್ರಾಮೀಣ ಬದುಕಿನೊಂದಿಗೆ ಕ್ರೀಡೆಯು ಬೆಳೆಯಬೇಕು ಎಂದ ಅವರು ಈಗಾಗಲೇ ಪುತ್ತೂರಿನಲ್ಲಿ ಕಬಕ ಗ್ರಾಮದ ಕೊಡಿಪ್ಪಾಡಿ ಭಾಗದಲ್ಲಿ 23 ಎಕ್ರೆ ಕ್ರಿಕೆಟ್ ಸ್ಟೇಡಿಯಮ್ ಆಗಲಿದೆ. ಇದರ ಜೊತೆಗೆ ತಾಲೂಕು ಮಟ್ಟದ ಉತ್ತಮ ಕ್ರೀಡಾಂಗಣ ತೆಂಕಿಲದ 19 ಎಕ್ರೆಯಲ್ಲಿ ಅತಿ ಶೀಘ್ರವಾಗಿ ನಿರ್ಮಾಣಕ್ಕೆ ಕಾರ್ಯ ಪ್ರಗತಿಯಲ್ಲಿದೆ ಎಂದರು. ತ್ರೋಬಾಲ್ ಪಂದ್ಯಾಟದಲ್ಲಿ ಮಹಿಳಾ ತಂಡವನ್ನು ಪ್ರತಿನಿಧಿಸಿದ ಪುತ್ತೂರಿನ ಮಹಿಳಾ ತಂಡ, ಜಾವಾಲಿನ್ ತ್ರೋದಲ್ಲಿ ಕಂಚಿನ ಪದಕ ಪಡೆದು ಕೊಂಡ ಕೀರ್ತಿರಾಜ್, ಜಿಗಿತದಲ್ಲಿ ಚಿನ್ನದ ಪದಕ ಪಡೆದವರನ್ನು ಇದೇ ಸಂದರ್ಭದಲ್ಲಿ ಶಾಸಕರು ಗೌರವಿಸಿದರು.

ಪೊಲೀಸ್ ಉದ್ಯೋಗದಲ್ಲೂ ಕ್ರಿಡೆಗೆ ಮೀಸಲಾತಿ:

ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಮಾತನಾಡಿ ಉತ್ತಮ ಕ್ರೀಡಾ ಸಾಧಕರಿಗೆ ಉದ್ಯೋಗದಲ್ಲೂ ಮೀಸಲಾತಿ ಇದೆ. ಪಿಎಸ್‌ಐ ಹುದ್ದೆಗಳಲ್ಲೂ ಶೇ.5 ಮೀಸಲಾತಿ ಇದೆ. ಇದರ ಪ್ರಯೋಜನವನ್ನು ಕ್ರೀಡಾಪಟುಗಳು ಪಡೆಯಬಹುದು ಎಂದರು.

ದೇವಸ್ಥಾನಗಳಲ್ಲೂ ಕ್ರೀಡಾಕೂಟವಿತ್ತು:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಗ್ರಾಮೀಣ ಕ್ರೀಡಾಕೂಟಕ್ಕೆ ಇವತ್ತು ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಹಿಂದೆ ದೇವಸ್ಥಾನಗಳಲ್ಲೂ ದಾರ್ಮಿಕ ಸಂಬಂಧಿತ ಅಪ್ಪಂಗಾಯಿ, ಕಂಬಳ ಸಹಿತ ಹಲವು ಕ್ರೀಡೆಗಳಿತ್ತು. ಇದಕ್ಕೆ ಪೂರಕವಾಗಿ ಗ್ರಾಮೀಣ ಕ್ರೀಡಾಕೂಟ ನಡೆಯುತ್ತಿದೆ ಎಂದರು. ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಅವರು ಮಾತನಾಡಿ ಕಡಬ ತಾಲೂಕಿನಲ್ಲೂ ತಾಲೂಕು ಮಟ್ಟದ ಕ್ರೀಡಾಂಗಣ ಅಗತ್ಯವಾಗಿ ಬೇಕಾಗಿದೆ ಎಂದು ಹೇಳಿದರು.

ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ಸೌಜನ್ಯ ಯುವಜನ ಸಂಘದ ಅಧ್ಯಕ್ಷ ಅಣ್ಣು ನಾಯ್ಕ, ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಎನ್ ಕಲ್ಲರ್ಪೆ, ಸವಣೂರು ಗ್ರಾ.ಪಂ ಅಧ್ಯಕ್ಷ ಕೆ.ರಾಜೀವಿ ಶೆಟ್ಟಿ, ಮುಂಡೂರು ಗ್ರಾ.ಪಂ ಅಧ್ಯಕ್ಷ ಪುಷ್ಪ ಪುರಂದರ ಗೌಡ, ಬಲ್ನಾಡು ಗ್ರಾ.ಪಂ ಉಪಾಧ್ಯಕ್ಷೆ ಪರಮೇಶ್ವರಿ ಭಟ್, ಕಡಬ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಚೆನ್ನಪ್ಪ ಗೌಡ, ತಾ.ಪಂ ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜರಾಧಾಕೃಷ್ಣ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವ ಸಬಲೀಕರಣ ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ ಕಾರ್ಯನಿರ್ವಾಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಸ್ವಾಗತಿಸಿದರು. ಅಪೂರ್ವ ಪ್ರಾರ್ಥಿಸಿದರು. ಯುವಜನ ಸೇವಾಕ್ರೀಡಾಧಿಕಾರಿ ಜಯರಾಮ ಗೌಡ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮೀಣ ಕ್ರೀಡಾಕೂಟಕ್ಕೆ ಸಂಬಂಧಿಸಿ ಖೋ ಖೋ ಮತ್ತು ಕಬಡ್ಡಿ ಪಂದ್ಯಾಗಳು ನಡೆಯಿತು. ದೈಹಿಕ ಶಿಕ್ಷಣ ಶಿಕ್ಷಕರು ಪಂದ್ಯಾಟವನ್ನು ಏರ್ಪಡಿಸಿದರು.

LEAVE A REPLY

Please enter your comment!
Please enter your name here