ವೈದೇಹಿ, ವೈಷ್ಣವಿ ಮಹಿಳಾ ಭಜನಾ ಮಂಡಳಿಯ ದಶಮಾನೋತ್ಸವ, ಲಕ್ಷ್ಮೀನಾರಾಯಣ ಹೃದಯ ಹೋಮ

ಪುತ್ತೂರು: ವೈದೇಹಿ ಮತ್ತು ವೈಷ್ಣವಿ ಮಹಿಳಾ ಭಜನಾ ಮಂಡಳಿ ಬೊಳುವಾರು, ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಕನಕ ಜಯಂತಿ ಆಚರಣೆಯೊಂದಿಗೆ ೧೦ನೇ ವಾರ್ಷಿಕೋತ್ಸವದ ಅಂಗವಾಗಿ ಲಕ್ಷ್ಮೀನಾರಾಯಣ ಹೃದಯ ಹೋಮ ನ.೧೧ರಂದು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನೆರವೇರಿತು.


ಬೆಳಿಗ್ಗೆ ವೇ.ಮೂ ಹರಿಪ್ರಸಾದ್ ವೈಲಾಯರವರ ನೇತೃತದಲ್ಲಿ ಲಕ್ಷ್ಮೀನಾರಾಯಣ ಹೃದಯ ಹೋಮ ನೆರವೇರಿತು. ಕಾರ್ಯಕ್ರಮದಲ್ಲಿ ವೈದೇಹಿ ಮತ್ತು ವೈಷ್ಣವಿ ಮಹಿಳಾ ಭಜನಾ ಮಂಡಳಿ ಇದರ ಸದಸ್ಯೆಯರಿಂದ ಕನಕದಾಸರ ಕೀರ್ತನೆಗಳ ಗಾಯನ, ಮಂಡಳಿ ಅಧ್ಯಕ್ಷೆ ಪ್ರೇಮಲತಾ ರಾವ್‌ರವರು ಕೀ ಬೋರ್ಡ್ ಮೂಲಕ ಎರಡು ಕೀರ್ತನೆಗಳನ್ನು ಪ್ರಸ್ತುತ ಪಡಿಸಿದರು. ಮಂಡಳಿಯ ಸದಸ್ಯೆ ಅನ್ನಪೂರ್ಣ ಎಸ್. ಕೆ.ರಾವ್‌ರವರು ಕನಕದಾಸರ ಕೀರ್ತನೆಯ ನೃತ್ಯರೂಪಕ ನಡೆಯಿತು.


ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿಯವರು ಮಾತನಾಡಿ, ಭಜನೆಯು ಭಗಂತನ ಬಳಿಗೆ ಸಾಗಲು ಇರುವಂತ ಸುಲಭ ಸಾಧನ. ಭಜನೆಯ ಮೂಲಕ ಭಗವಂತವನ್ನು ಒಲಿಸಿಕೊಳ್ಳಬಹುದು. ಹಿಂದು ಧರ್ಮದ ಜೀವನ ಸಂಸ್ಕೃತಿಯು ಭಜನೆಯಲ್ಲಿ ಅಡಕವಾಗಿದೆ. ಸುಮಾರು ಮೂರು ಲಕ್ಷದಷ್ಟು ದಾಸರ ಪದಗಳಿವೆ. ದಾಸರ ಪದಗಳಿಂದಾಗಿ ಭಜನೆಯು ಉಳಿಯುವಂತಾಗಿದೆ. ಪುರಂದರದಾಸರು, ಕನಕದಾಸರ ಭಜನೆಯ ಕೃತಿಗಳಿಂದಾಗಿ ಭಜನೆ ಜೀವಂತ ಉಳಿದಿದೆ. ಧರ್ಮದ ಉಳಿವಿಗೂ ಭಜನೆ ಸಹಕಾರಿ ಎಂದರು.


ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಕಾಟುಕುಕ್ಕೆಯವರು ಮಾತನಾಡಿ, ಭಜನೆಗಳು ನಿರಂತರವಾಗಿ ಎಲ್ಲಾ ಕಡೆಗಳಲ್ಲಿಯೂ ನಡೆಯಬೇಕು. ಮಹಿಳೆಯರು ಮಕ್ಕಳನ್ನು ಭಜನೆಗಳನ್ನು ತೊಡಗಿಸಿಕೊಳ್ಳುವ ಮೂಲಕ ಭಜನೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದರು.


ಮುಖ್ಯ ಅತಿಥಿಗಳಾಗಿದ್ದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಭಜನೆಯ ಮಹತ್ವಗಳ ಬಗ್ಗೆ ವಿವರಿಸಿದರು. ವೈಷ್ಣವೀ ಭಜನಾ ಮಂಡಳಿಯ ಕಾರ್ಯದರ್ಶಿ ಉಷಾ ಜಯರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವೈಷ್ಣವಿ ಭಜನಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ಆರ್ ನಾಯಕ್ ಸ್ವಾಗತಿಸಿದರು. ವೈದೇಹಿ ಭಜನಾ ಮಂಡಳಿಯ ಕಾರ್ಯದರ್ಶಿ ವತ್ಸಲಾ ರಾಜ್ಞಿ ವರದಿ ವಾಚಿಸಿ, ಅಧ್ಯಕ್ಷೆ ಪ್ರೇಮಲತಾ ರಾವ್ ವಂದಿಸಿದರು. ಜಯಲಕ್ಷ್ಮೀ ಭಟ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.