ಪುತ್ತೂರು: ಕಬಕ-ವಿಟ್ಲ ರಸ್ತೆ ಅಭಿವೃದ್ಧಿಯ ಬಗ್ಗೆ ಕೆಲವರು ಬೀದಿ ನಾಟಕ ಮಾಡಿದ್ದಾರೆ. ನಾಲ್ಕೈದು ಮಂದಿ ಬೀದಿ ನಾಟಕದಲ್ಲಿ ಸೇರಿಕೊಂಡಿದ್ದಾರೆ. ರಸ್ತೆ ದುರವಸ್ಥೆಗೆ ಕಾರಣ ಯಾರು? ಅನುದಾನವಿಟ್ಟ ಬಳಿಕವಲ್ಲ ಬೀದಿ ನಾಟಕ. ಜನರು ಇಂತಹ ಬೀದಿ ನಾಟಕವನ್ನು ಸಹಿಸುವುದಿಲ್ಲ. ಕಾಮಗಾರಿಯು ಇಂದಿನಿಂದ ಪ್ರಾರಂಭಗೊಂಡು ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆವಾಗ ಅವರು ಬಂದು ಬೀದಿ ನಾಟಕ ಮಾಡಲಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಹಾಗೂ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಮಾರ್ಣಬೈಲು-ಸಾಲೆತ್ತೂರು-ವಿಟ್ಲ-ಕಬಕ ರಸ್ತೆಗೆ ರೂ.೧೩. ಕೋಟಿ ಅನುದಾನದಲ್ಲಿ ನಡೆಯಲಿರುವ ದ್ವಿಪಥ ಡಾಮರೀಕರಣಕ್ಕೆ ನ.೧೨ ರಂದು ಕಬಕದಲ್ಲಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕಬಕ-ವಿಟ್ಲ ರಸ್ತೆ ಕಾಮಗಾರಿಗೆ ೨೦೧೫-೧೬ರಲ್ಲಿ ಟೆಂಟರ್ ಆಗಿದ್ದು ಇಕ್ಬಾಲ್ ಶರೀಪ್ ಗುತ್ತಿಗೆ ನೀಡಲಾಗಿತ್ತು. ಅದು ೨೦೧೮ರ ತನಕ ಆಗಿಲ್ಲ. ಗುತ್ತಿಗೆದಾರ ಕೆಲಸ ಮಾಡದೇ ಇರುವುದರಿಂದ ಆ ಟೆಂಡರನ್ನು ರದ್ದು ಮಾಡಿ, ಈಗ ಮತ್ತೆ ಹೊಸ ಅಂದಾಜು ಪಟ್ಟಿ ತಯಾರಿಸಿ, ರೂ.೧೩ಕೋಟಿಯಲ್ಲಿ ರಸ್ತೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಲ್ಲಿ ೫.೫ ಮೀಟರ್ ಅಗಲವಿರುವ ರಸ್ತೆಯನ್ನು ೭ ಮೀಟರ್ ರಸ್ತೆ ಅಗಲೀಕರಣ ಹಾಗೂ ಡಾಮರೀಕರಣಗೊಳಿಸಿ ಎರಡು ತಿಂಗಳಲ್ಲಿ ಪೂರ್ಣಗೊಳಿಸಿಕೊಡಲಾಗುವುದು. ಹಣವಿಟ್ಟ ಬಳಿಕ ಬೀದಿ ನಾಟಕವಲ್ಲ. ೨೦೧೫-೧೬ ಮಾಡಬೇಕಾದ ಕಾಮಗಾರಿಯನ್ನು ಅವರು ೨೦೧೮ರಲ್ಲಿಯಾದರೂ ಮಾಡಬೇಕಿತ್ತು ಜನರು ಗಮನಿಸುತ್ತಿದ್ದಾರೆ. ಜನರು ಇಂತಹ ನಾಟಕವನ್ನು ಸಹಿಸುವುದಿಲ್ಲ. ಅವರ ಬೀದಿ ನಾಟಕಕ್ಕೆ ಉತ್ತರವಾಗಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಇಲ್ಲಿ ಸೇರಿದ್ದಾರೆ ಎಂದು ಅವರು ಹೇಳಿದರು.
ಈ ಆರ್ಥಿಕ ವರ್ಷದಲ್ಲಿ ೫೦ಕೋಟಿ ವಿಶೇಷ ಅನುದಾನ ಬಂದಿದೆ. ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ಕಬಕ-ವಿಟ್ಲ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದಲ್ಲದೆ ರೂ. ೪೦ ಕೋಟಿಯಲ್ಲಿ ಪುತ್ತೂರು-ಉಪ್ಪಿನಂಗಡಿ ರಸ್ತೆ, ಕಬಕ-ವಿಟ್ಲ, ಸಾರಡ್ಕ-ದೇವಿನಗರ, ಕಲ್ಲಡ್ಕ-ಸಾರಡ್ಕ ರಸ್ತೆ, ನೆಟ್ಟಾರು-ಈಶ್ವರಮಂಗಲ ಕರ್ಣೂರು ರಸ್ತೆ ಅಭಿವೃದ್ಧಿಗೊಳ್ಳಲಿದೆ. ಸ್ವಾತಂತ್ರ್ಯ ಬಂದ ಬಳಿಕ ೧೬೦ ಕಿ.ಮೀ ಗ್ರಾಮೀಣ ರಸ್ತೆಯನ್ನು ಮೇಲ್ದರ್ಜೆಗೆರಿದ್ದು ನಮ್ಮ ಅವಧಿಯ ಸಾಧನೆಯಾಗಿದೆ. ಆ ರಸ್ತೆಗಳನ್ನು ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಅಭಿವೃದ್ಧಿ ಪಡಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಅಪಘಾತ ವಲಯಗಳನ್ನು ಅಗಲೀಕರಣಗೊಳಿಸಿ ಅವರುಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು.
ಈ ರಸ್ತೆಯು ಮುಂದಿನ ಎರಡು ತಿಂಗಳಲ್ಲಿ ಅಗಲೀಕರಣ ಹಾಗೂ ಡಾಮರೀಕರಣ ಕಾಮಗಾರಿ ಪೂರ್ಣಗೊಂಡು ಹೊಸ ವರ್ಷದಲ್ಲಿ ಹೊಸ ರಸ್ತೆಯಲ್ಲಿ ಸಂಚರಿಸಲಿದೆ. ಪುತ್ತೂರು-ಉಪ್ಪಿನಂಗಡಿ ರಸ್ತೆಯ ಚತುಷ್ಪಥ ಕಾಮಗಾರಿ ಪೂರ್ಣಗೊಂಡ ಬಳಿಕ ಕಬಕ-ವಿಟ್ಲ ರಸ್ತೆಯ ಚತುಷ್ಪಥಗೊಳಿಸಲಾಗುವುದು. ಎರಡು-ಮೂರು ವರ್ಷದಲ್ಲಿ ಈ ಕಾಮಗಾರಿಯು ನಡೆಯಲಿದೆ. ಮುಂದಿನ ಅವದಿಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗುವುದು. ಅಭಿವೃದ್ಧಿ ಕೆಲಸಗಳನ್ನು ಮಾಡುವಾಗ ಜನರ ದಾರಿ ತಪ್ಪಿಸುವಾಗ ನಾವು ಅವರನ್ನು ಸರಿದಾರಿಗೆ ತರುತ್ತೇವೆ ಎಂದು ಸಂಜೀವ ಮಠಂದೂರು ಹೇಳಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಯಾವುದೇ ಶಾಸಕರು ಮಾಡಲಾಗದ ಸಾಧನೆಯನ್ನು ಸಂಜೀವ ಮಠಂದೂರು ಮಾಡಿದ್ದಾರೆ. ಆದರೂ ಬಹಳಷ್ಟು ಟೀಕೆಗಳಿವೆ. ಕೇಂದ್ರ ಹಾಗೂ ರಾಜ್ಯ ಸರಕಾದರ ಅಭಿವೃದ್ಧಿಯ ಸಾಧನೆಗಳನ್ನು ಸಹಿಸಲಾಗದೇ ಸುಳ್ಳು ಆರೋಪ ಹೊರಿಸಿ ವಿರೋಧ ಪಕ್ಷದವರು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಅವರ ಯಾವುದೇ ದಾಖಲೆಗಳಿಲ್ಲದೆ ಆರೋಪ ಮಾಡುತ್ತಾರೆ. ಸೂಕ್ತ ದಾಖಲೆ ನೀಡಿ ಟೀಕೆ ಮಾಡಲಿ. ಶಾಸಕರು ಅಭಿವೃದ್ಧಿ ಮಾಡಿ ಬಿಲ್ಡಪ್ ಕೊಡುತ್ತಿದ್ದಾರೆ. ಅವರು ಅಭಿವೃದ್ಧಿ ಕೆಲಸಗಳಿಗೆ ಪ್ರೋತ್ಸಾಹ ಮಾಡುವುದನ್ನು ಬಿಟ್ಟು ಟೀಕೆ ಮಾಡುತ್ತಾರೆ. ಎಂದ ಅವರು, ಶಾಸಕರು ತಂದಿರುವ ಅನುದಾನಗಳ ಬಗ್ಗೆ ದಾಖಲೆಗಳು ಅವರ ಕಛೇರಿಯಲ್ಲಿದ್ದು ಮುಂದಿನ ದಿನಗಳಲ್ಲಿ ಮಾಧ್ಯಮದ ಮೂಲಕ ಬಹಿರಂಗಪಡಿಸಲಿದ್ದಾರೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವೂ ಕೈಜೋಡಿಸಲಿದೆ ಎಂದರು.
ಲೋಕೋಪಯೋಗಿ ಇಲಾಖೆ ಅಭಿಯಂತರ ಪ್ರೀತಂ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಸ್‌ನ ನಿರ್ದೇಶಕರಾಗಿ ಆಯ್ಕೆಯಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರನ್ನು ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ಹೂಗುಚ್ಚ ನೀಡಿದ ಅಭಿನಂದಿಸಿದರು.
ನಿಶ್ಮಿತಾ ಪ್ರಾರ್ಥಿಸಿದರು. ಇಡ್ಕಿದು ಗ್ರಾ.ಪಂ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರೂಪಿಸಿದರು. ವಿಟ್ಲ ಮುಡ್ನೂರು ಗ್ರಾ.ಪಂ ಅಧ್ಯಕ್ ಜಯಪ್ರಕಾಶ್ ವಂದಿಸಿದರು. ಕಬಕ ಗ್ರಾ.ಪಂ ಉಪಾಧ್ಯಕ್ಷ ರುಕ್ಮಯ್ಯ ಗೌಡ ಪೋಳ್ಯ, ಸದಸ್ಯ ರಾಜೇಶ್ ಪೋಳ್ಯ, ಇಡ್ಕಿದು ಗ್ರಾ.ಪಂ ಸದಸ್ಯರಾದ ಚಿದಾನಂದ ಪೆಲತ್ತಿಂಜ, ಸಂಜೀವ ಪೂಜಾರಿ, ವಿಟ್ಲ ಮುಡ್ನೂರು ಗ್ರಾ.ಪಂ ಸದಸ್ಯೆ ಪ್ರೇಮಲತಾ ಪಟ್ಲ, ವಿಟ್ಲ ಪ.ಪಂ ಸದಸ್ಯ ಅರುಣ್ ವಿಟ್ಲ, ರಾಜೇಶ್ ಕಬಕ ಅತಿಥಿಗಳನ್ನು ಹೂಗುಚ್ಚ ಹಾಗೂ ಶಾಲು ಹಾಕಿ ಸ್ವಾಗತಿಸಿದರು.
ತಾ.ಪಂ ಮಾಜಿ ಸದಸ್ಯೆ ದಿವ್ಯ ಪುರುಷೋತ್ತಮ,ಕೊಡಿಪ್ಪಾಡಿ ಗ್ರಾ.ಪಂ ಸದಸ್ಯ ಗಿರಿಧರ್ ಗೋಮುಖ, ವಿಟ್ಲ ಮುಡ್ನೂರು ಗ್ರಾ.ಪಂ ಸದಸ್ಯ ಪುಣೀತ್ ಮಾಡತ್ತಾರು, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಮುಕ್ಕುಡ, ಮಾಸ್ ನಿರ್ದೇಶಕ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಬಿಜೆಪಿ ಕಬಕ ಗ್ರಾಮ ಸಮಿತಿ ಅಧ್ಯಕ್ಷ ಜಯರಾಮ ನೆಕ್ಕರೆ, ಹರಿಪ್ರಸಾದ್ ಯಾದವ್, ಗ್ರಾಮಾಂತರ ಮಂಡಲದ ಕೋಶಾಧಿಕಾರಿ ರಮೇಶ್ ಭಟ್, ನಗರ ಮಂಡಲದ ಕಾರ್ಯದರ್ಶಿ ಯುವರಾಜ ಪೆರಿಯತ್ತೋಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.