ಮಸೂದ್ ಮರ್ಡರ್‌ಗೆ ರೀವೇಂಜ್! ಭಯ ಹುಟ್ಟಿಸಲು ಕೊಲೆ
ಪುತ್ತೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜುಲೈ 26ರಂದು ರಾತ್ರಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್(34ವ)ರವರ ಕೊಲೆಗೆ ಬೆಳ್ಳಾರೆಯಲ್ಲಿ ನಡೆದಿದ್ದ ಮಸೂದ್‌ರವರ ಹತ್ಯೆಯೇ ಕಾರಣ ಎಂಬುದು ರಾಷ್ಟ್ರೀಯ ತನಿಖಾ ದಳದ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಬಿಜೆಪಿ ಯುವಮೋರ್ಛಾದ ಜಿಲ್ಲಾ ಕಾರ್ಯಕಾರಿಣಿಯ ಸದಸ್ಯರೂ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯೂ ಆಗಿದ್ದ ಯುವವಾಹಿನಿ ಸುಳ್ಯ ತಾಲೂಕು ಘಟಕದ ಮಾಜಿ ಅಧ್ಯಕ್ಷ ಪ್ರವೀಣ್ ನೆಟ್ಟಾರ್ ಅವರನ್ನು ಅವರದೇ ಮಾಲಕತ್ವದ ಬೆಳ್ಳಾರೆಯ ಅಕ್ಷಯ ಚಿಕನ್ ಸೆಂಟರ್ ಮುಂಭಾಗದಲ್ಲಿ ಬರ್ಬರವಾಗಿ ಕೊಲೆ ಮಾಡಿದ ಕೃತ್ಯಕ್ಕೆ ಸಂಬಂಧಿಸಿ ವಿವಿಧ ಕೋನಗಳಲ್ಲಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೆ ಸ್ಫೋಟಕ ಹಾಗೂ ಆತಂಕಕಾರಿ ಮಾಹಿತಿಗಳು ಲಭ್ಯವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಹಿಂದೂ ಸಂಘಟನೆಗಳಲ್ಲಿಯೂ ಸಕ್ರಿಯವಾಗಿದ್ದ ಪ್ರವೀಣ್ ನೆಟ್ಟಾರ್ ಅವರನ್ನು ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಬೆಳ್ಳಾರೆಯಲ್ಲಿ ನಡೆದಿದ್ದ ಮಸೂದ್ ಎಂಬವರ ಹತ್ಯೆಗೆ ಪ್ರತೀಕಾರವಾಗಿ ಪ್ರವೀಣ್‌ರವರನ್ನು ಹತ್ಯೆ ಮಾಡಲಾಗಿದೆ ಎಂದು ಆರಂಭದಲ್ಲಿಯೇ ಸುದ್ದಿಯಾಗಿತ್ತು. ಹಲಾಲ್, ಜಟ್ಕಾ ವಿವಾದ ಆರಂಭವಾದಾಗ ಮುಸ್ಲಿಮರ ಅಂಗಡಿಗಳಿಂದ ಹಿಂದೂಗಳು ಮಾಂಸ ಖರೀದಿಸಬಾರದು, ಹಿಂದೂಗಳು ಹಿಂದೂಗಳ ಅಂಗಡಿಯಿಂದಲೇ ಮಾಂಸ ಖರೀದಿಸಬೇಕು ಎಂದು ಹಿಂದೂ ಸಂಘಟನೆಗಳಿಂದ ಆಂದೋಲನ ನಡೆದಾಗ ಪ್ರವೀಣ್ ನೆಟ್ಟಾರ್ ಅವರು ತನ್ನ ಅಕ್ಷಯ ಚಿಕನ್ ಸೆಂಟರ್‌ನತ್ತ ಹಿಂದೂ ಗ್ರಾಹಕರನ್ನು ಸೆಳೆಯುತ್ತಿದ್ದರು ಎಂಬ ಕಾರಣಕ್ಕಾಗಿ ವೃತ್ತಿ ವೈಷಮ್ಯದಿಂದ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು ಎಂದೂ ಹೇಳಲಾಗುತ್ತಿತ್ತು. ಬೇರೆ ಏನಾದರೂ ವೈಯುಕ್ತಿಕ ಕಾರಣಗಳು ಪ್ರವೀಣ್ ಕೊಲೆಗೆ ಕಾರಣವಾಗಿರಬಹುದೇ ಎಂದೂ ಪೊಲೀಸ್ ತನಿಖೆ ನಡೆಯುತ್ತಿತ್ತು. ಕರ್ನಾಟಕ ಪೊಲೀಸ್ ಘಟಕದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ಅಡಿಷನಲ್ ಎಸ್ಪಿ ಕುಮಾರಚಂದ್ರ ಮತ್ತು ಪುತ್ತೂರು ಡಿವೈಎಸ್ಪಿಯಾಗಿದ್ದ ಡಾ.ಗಾನಾ ಪಿ. ಕುಮಾರ್ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆದು ಪ್ರವೀಣ್ ಹತ್ಯೆಗೆ ಕಾರಣವಾಗಿರಬಹುದಾದ ಅಂಶಗಳನ್ನು ಪಟ್ಟಿ ಮಾಡಿ ತನಿಖೆ ನಡೆಸಲಾಗುತ್ತಿತ್ತು. ನಂತರ ಕೊಲೆ ಕೃತ್ಯದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಲು ಹಿಂದೂ ಸಂಘಟನೆಗಳಿಂದ ಆಗ್ರಹ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಗಿತ್ತು. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರವೀಣ್ ಕೊಲೆ ಕೇಸ್‌ನ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ ಎನ್‌ಐಎ ಅಧಿಕಾರಿಗಳು ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಿಕೊಂಡು ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದರು. ಪ್ರವೀಣ್ ಕೊಲೆ ಕೃತ್ಯದಲ್ಲಿ ಪಿಎಫ್‌ಐ ಸಂಘಟನೆಯ ಸದಸ್ಯರು ನೇರವಾಗಿ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡಿದ್ದ ಎನ್‌ಐಎ ಅಧಿಕಾರಿಗಳು ಕರ್ನಾಟಕ ಪೊಲೀಸರಿಂದ ಬಂಧಿತರಾಗಿದ್ದ ಹತ್ತು ಮಂದಿಯನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದರು. ಬಳಿಕ ಎನ್‌ಐಎ ಅಧಿಕಾರಿಗಳು ಸರ್ಚ್ ವಾರಂಟ್ ಮೂಲಕ ಪಿಎಫ್‌ಐ ಮುಖಂಡರ ಮನೆ ಮತ್ತು ಕಛೇರಿಗಳಿಗೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಮಧ್ಯೆ ಕೇಂದ್ರ ಸರಕಾರ ದೇಶದ್ರೋಹಿ ಚಟುವಟಿಕೆ ನಡೆಸುತ್ತಿರುವ ಆರೋಪದಡಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿ ಆದೇಶಿಸಿತ್ತು. ನಂತರ ಮತ್ತಷ್ಟು ತನಿಖೆ ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪ್ರವೀಣ್ ನೆಟ್ಟಾರ್ ಹತ್ಯೆಗೆ ಬೆಳ್ಳಾರೆಯಲ್ಲಿ ನಡೆದಿದ್ದ ಮಸೂದ್‌ರವರ ಕೊಲೆಯೇ ಕಾರಣ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮಸೂದ್‌ರವರ ಕೊಲೆಗೂ ಪ್ರವೀಣ್‌ರವರಿಗೂ ಯಾವುದೇ ಸಂಬಂಧ ಇಲ್ಲದೇ ಇದ್ದರೂ ಮಸೂದ್ ಕೊಲೆಗೆ ಪ್ರತೀಕಾರವಾಗಿ ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯನ್ನು ಹತ್ಯೆಗೈಯ್ಯಬೇಕು ಮತ್ತು ಸಮಾಜದಲ್ಲಿ ಭಯದ ವಾತಾವರಣ ಸೃಷ್ಠಿಸುವುದಕ್ಕಾಗಿ ಸಾಮಾಜಿಕವಾಗಿ ಸಕ್ರಿಯವಾಗಿರುವ ಯುವಕನನ್ನು ಕೊಲೆ ಮಾಡುಬೇಕು ಎಂದು ಸಂಚು ರೂಪಿಸಿ ಪ್ರವೀಣ್ ನೆಟ್ಟಾರ್‌ರವರನ್ನು ಗುರಿಯಾಗಿಸಲಾಗಿತ್ತು ಎಂದು ಎನ್‌ಐಎ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕಿದೆ. ಅಮಾಯಕನಾಗಿದ್ದರೂ ಪ್ರವೀಣ್ ಅವರನ್ನು ಹತ್ಯೆ ಮಾಡಿದರೆ ಮಸೂದ್ ಕೊಲೆಗೆ ಪ್ರತೀಕಾರ ಮಾಡಿದಂತೆಯೂ ಆಗುತ್ತದೆ ಮತ್ತು ಸಮಾಜದಲ್ಲಿ ಭಯ ಸೃಷ್ಠಿಸುವಂತೆಯೂ ಆಗುತ್ತದೆ ಎಂಬ ಕಾರಣಕ್ಕಾಗಿ ಪ್ರವೀಣ್ ಅವರ ಪರಿಚಯದವರೇ ಆಗಿರುವ ಸುಳ್ಯ ಪರಿಸರದ ಪಿಎಫ್‌ಐ ಸದಸ್ಯರು ಪ್ರವೀಣ್ ಅವರನ್ನು ಕೊಲೆ ಮಾಡಲು ಯೋಜನೆ ರೂಪಿಸಿ ಅವರು ತಮ್ಮ ಚಿಕನ್ ಸೆಂಟರ್‌ನಿಂದ ಹೊರಗಡೆ ಬರುತ್ತಿರುವುದನ್ನು ಖಚಿತಪಡಿಸಿಕೊಂಡು ಬೈಕ್‌ನಲ್ಲಿ ಬಂದು ಹರಿತವಾದ ಆಯುಧದಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಕೇರಳ ಕಡೆಗೆ ಪರಾರಿಯಾಗಿದ್ದಾರೆ ಎಂದು ಮಾಹಿತಿ ಕಲೆ ಹಾಕಿರುವ ಎನ್‌ಐಎ ಅಧಿಕಾರಿಗಳು ಪ್ರವೀಣ್ ಕೊಲೆಗೆ ಆರ್ಥಿಕ ಸಹಕಾರ ನೀಡಿದವರಿಗೆ, ಕೊಲೆ ಬಳಿಕ ಹಂತಕರಿಗೆ ಆಶ್ರಯ ನೀಡಿದವರಿಗೆ ಮತ್ತು ಪ್ರತ್ಯಕ್ಷವಾಗಿ ಮಾತ್ರವಲ್ಲದೆ ಪರೋಕ್ಷವಾಗಿಯೂ ಕೊಲೆಗೆ ಸಹಕಾರ ನೀಡಿದವರನ್ನು ತಮ್ಮ ಬಲೆಗೆ ಕೆಡವಲು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ಕೊಲೆ ಕೃತ್ಯಕ್ಕೆ ಸಂಬಂಧಿಸಿ ಸುಳ್ಯ ನಿವಾಸಿ ಶಿಹಾಬ್, ಪಾಲ್ತಾಡಿ ಅಂಕತ್ತಡ್ಕದ ರಿಯಾಝ್, ಸುಳ್ಯ ಎಲಿಮಲೆಯ ಬಶೀರ್, ಸವಣೂರಿನ ಝಾಕಿರ್, ಬೆಳ್ಳಾರೆಯ ಶಫೀಕ್, ಪಳ್ಳಮಜಲು ನಿವಾಸಿಗಳಾದ ಸದ್ದಾಂ, ಹ್ಯಾರಿಸ್, ಬೆಳ್ಳಾರೆ ಗೌರಿಹೊಳೆಯ ನೌಫಲ್, ನಾವೂರಿನ ಆಬಿದ್, ಜಟ್ಟಿಪಳ್ಳದ ಕಬೀರ್, ಬೆಳ್ಳಾರೆ ಕುನ್ನಾಗುಡ್ಡೆ ನಿವಾಸಿ ಬೆಳ್ಳಾರೆ ಗ್ರಾ.ಪಂ. ಸದಸ್ಯ ಕೆ.ಮಹಮ್ಮದ್ ಇಕ್ಬಾಲ್, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಇಸ್ಮಾಯಿಲ್ ಶಾಫಿ ಬೆಳ್ಳಾರೆ ಮತ್ತು ನಾವೂರು ಗಾಂಧಿನಗರ ನಿವಾಸಿ ಇಬ್ರಾಹಿಂ ಶಾ ಎಂಬವರನ್ನು ಬಂಧಿಸಿದ್ದಾರೆ. ಸಮಗ್ರ ತನಿಖೆ ನಡೆಸಿ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಂತರ, ಈಗಾಗಲೇ ಬಂಧಿತನಾಗಿರುವ ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಅವರ ಬಾವ ಸಾಹಿದ್ ಬೆಳ್ಳಾರೆ ಮತ್ತು ಪಿಎಫ್‌ಐ ಮುಖಂಡ ಜಾಬೀರ್ ಅರಿಯಡ್ಕರವರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ಮಧ್ಯೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾಗಿ ಹೆಸರಿಸಲ್ಪಟ್ಟು ತಲೆ ಮರೆಸಿಕೊಂಡಿರುವ ಸುಳ್ಯ ತಾಲೂಕು ಬೆಳ್ಳಾರೆ ಬೂಡು ನಿವಾಸಿ ಮಹಮ್ಮದ್ ಮುಸ್ತಫಾ, ಮಡಿಕೇರಿ ನಿವಾಸಿ ತುಫೈಲ್ ಎಂ.ಎಚ್., ಸುಳ್ಯ ಕಲ್ಲನೊಟ್ಟು ನಿವಾಸಿ ಉಮ್ಮರ್ ಫಾರೂಕ್ ಹಾಗೂ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ಧೀಕ್ ಯಾನೆ ಪೈಂಟರ್ ಸಿದ್ಧೀಕ್ ಪತ್ತೆಗೆ ಲುಕೌಟ್ ನೊಟೀಸ್ ಹೊರಡಿಸಿರುವ ಎನ್‌ಐಎ ಅಧಿಕಾರಿಗಳು ಈ ನಾಲ್ವರ ಪತ್ತೆಗೆ ವಿವಿದೆಡೆ ಬಲೆ ಬೀಸಿದ್ದಾರೆ.
ಬೆಳ್ಳಾರೆಯಲ್ಲಿ ತಂಡದಿಂದ ಗಂಭೀರ ಹಲ್ಲೆಗೊಳಗಾಗಿ ಮೃತಪಟ್ಟಿದ್ದ ಅಮಾಯಕ ಮಸೂದ್;
ಜು.19ರ ತಡರಾತ್ರಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಳಂಜದಲ್ಲಿ ತಂಡದಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಅಮಾಯಕ ಮಸೂದ್ ಎಂಬವರು ಮೃತಪಟ್ಟಿದ್ದರು. ಪರಸ್ಪರ ಮಾತಿನ ಚಕಮಕಿ ನಡೆದ ಬಳಿಕ ಯುವಕರ ತಂಡ ಮಸೂದ್‌ಗೆ ಹಲ್ಲೆ ನಡೆಸಿತ್ತು. ಕ್ಲುಲ್ಲಕ ಕಾರಣಕ್ಕಾಗಿ ಮಾರಣಾಂತಿಕವಾಗಿ ಹಲ್ಲೆಗೀಡಾಗಿ ಗಂಭೀರ ಗಾಯಗೊಂಡಿದ್ದ ಮಸೂದ್ ಅವರನ್ನು ಸುಳ್ಯ ಆಸ್ಪತ್ರೆಗೆ ತಂದು ಅಲ್ಲಿಂದ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಸೂದ್ ಮೃತಪಟ್ಟಿದ್ದರು. ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಭಿಲಾಶ್, ಸುನಿಲ್ ಕೆ, ಸುಧೀರ್, ಶಿವಪ್ರಸಾದ್, ರಂಜಿತ್ ಬಿ, ಸದಾಶಿವ ಪೂಜಾರಿ, ರಂಜಿತ್ ಮತ್ತು ಭಾಸ್ಕರ ಕೆ.ಎಂ.ರವರನ್ನು ಬಂಧಿಸಲಾಗಿತ್ತು. ಇದುವರೆಗೂ ಈ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಮಾಯಕ ಮಸೂದ್ ಅವರ ಕೊಲೆ ನಡೆದ ಬಳಿಕ ಬೆಳ್ಳಾರೆ ಪರಿಸರ ಉದ್ವಿಗ್ನಗೊಂಡಿತ್ತು. ಆ ನಂತರ 7 ದಿನಗಳ ನಂತರ ಪ್ರವೀಣ್ ನೆಟ್ಟಾರ್ ಕೊಲೆ ನಡೆದಿತ್ತು. ಇದೀಗ ಮಸೂದ್ ಕೊಲೆಗೆ ಪ್ರತೀಕಾರವಾಗಿಯೇ ಪ್ರವೀಣ್ ಹತ್ಯೆ ನಡೆದಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.