ಪುತ್ತೂರು: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ನಡೆಸಿತ್ತು ಎನ್ನಲಾದ ‘ಅಪರೇಶನ್ ಕಮಲ’ ಯತ್ನಕ್ಕೆ ಸಂಬಂಧಿಸಿದಂತೆ ಪುತ್ತೂರು ಸೇರಿದಂತೆ 4 ರಾಜ್ಯಗಳ 7 ಸ್ಥಳಗಳಲ್ಲಿ ತೆಲಂಗಾಣ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಬಿಜೆಪಿ ಏಜೆಂಟರು ಎನ್ನಲಾದ ಫರೀದಾಬಾದ್ ಮೂಲದ ಧರ್ಮ ಪ್ರಚಾರಕ ರಾಮಚಂದ್ರ ಭಾರತಿ, ಹೈದರಾಬಾದ್ ಉದ್ಯಮಿ ನಂದಕುಮಾರ್ ಹಾಗೂ ತಿರುಪತಿಯ ಸಿಂಹಯ್ಯಾಜಿ ಸ್ವಾಮಿ ತಮಗೆ 250 ಕೋಟಿ ರೂ. ನೀಡಿ ಖರೀದಿಸಲು ಯತ್ನಿಸಿದರು ಎಂದು ಟಿಆರ್‌ಎಸ್‌ನ ನಾಲ್ವರು ಶಾಸಕರು ಇತ್ತೀಚೆಗೆ ದೂರು ನೀಡಿದ್ದರು. ಶಾಸಕರ ‘ಖರೀದಿ ಯತ್ನದ’ ವೀಡಿಯೋವನ್ನೂ ಬಿಡುಗಡೆ ಮಾಡಲಾಗಿತ್ತು. ಬಳಿಕ ಮೂವರನ್ನೂ ತೆಲಂಗಾಣ ಪೊಲೀಸರು ಬಂಧಿಸಿದ್ದರು. ಬಂಧಿತರ ಪೈಕಿ ರಾಮಚಂದ್ರ ಭಾರತಿ ಎಂಬಾತ ಫರೀದಾಬಾದ್ ಮಾತ್ರವಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ಮನೆ ಹೊಂದಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ದೊರೆತಿದೆ. ಹೀಗಾಗಿ ಆತನ ಪುತ್ತೂರಿನ ಹಾಗೂ ಫರೀದಾಬಾದ್ ಮನೆಯಲ್ಲಿ ತೆಲಂಗಾಣದ ವಿಶೇಷ ತನಿಖಾ ತಂಡದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇತರ ಆಪಾದಿತರ ಹರ‍್ಯಾಣ, ಕೇರಳ ಹಾಗೂ ತೆಲಂಗಾಣದ ಆಸ್ತಿಪಾಸ್ತಿಗಳ ಮೇಲೂ ದಾಳಿ ನಡೆಸಲಾಗಿದೆ. ರಾಮಚಂದ್ರ ಭಾರತಿ, ನಂದಕುಮಾರ್ ಹಾಗೂ ಸಿಂಹಯ್ಯಾಜಿ ಎಂಬ ಬಿಜೆಪಿ ಏಜೆಂಟರು ತಮ್ಮ ನಿವಾಸಕ್ಕೆ ಆಗಮಿಸಿ ‘ನೀವು ಬಿಜೆಪಿ ಸೇರಿದರೆ ತಮಗೆ 100 ಕೋಟಿ ರೂ ನೀಡುತ್ತೇವೆ. ನೀವು ಇನ್ನೂ 3 ಜನರನ್ನು ಕರೆ ತಂದರೆ ಅವರಿಗೂ ತಲಾ 50 ಕೋಟಿ ರೂ. ನೀಡುತ್ತೇವೆ’ ಎಂದು ತಮಗೆ ಆಮಿಷವೊಡ್ಡಿದ್ದರು ಎಂದು ಟಿಆರ್‌ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿ ಆರೋಪಿಸಿದ್ದರು. ಈ ಮೂವರು ರೆಡ್ಡಿ ಮನೆಯಲ್ಲಿದ್ದಾಗಲೇ, ರೆಡ್ಡಿ ನೀಡಿದ ಸುಳಿವಿನ ಮೇರೆಗೆ ಪೊಲೀಸರು ದಾಳಿ ಮಾಡಿ ಮೂವರನ್ನೂ ಬಂಧಿಸಿದ್ದರು. ಬಳಿಕ ಇವರ ದುಡ್ಡಿನ ಆಮಿಷವೊಡ್ಡಿದ್ದರು ಎನ್ನಲಾದ ವೀಡಿಯೋವನ್ನು ಟಿಆರ್‌ಎಸ್ ಬಿಡುಗಡೆ ಮಾಡಿತ್ತು. ಇದೀಗ ತನಿಖೆ ಮುಂದುವರಿಸಿರುವ ಎಸ್‌ಐಟಿ ತಂಡ ಪುತ್ತೂರಿಗೂ ಭೇಟಿ ನೀಡಿದೆ.